
ಟಿ20 ವಿಶ್ವಕಪ್ 2022ರ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತ ಭಾರತ ತಂಡಕ್ಕೆ ಅಭಿಮಾನಿಗಳು ಬೆಂಬಲ ನೀಡಬೇಕು ಎಂದು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಅಡಿಲೇಡ್ ಓವಲ್‌ನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ 10 ವಿಕೆಟ್‌ಗಳ ಅಂತರದಿಂದ ಸೋಲುವ ಮೂಲಕ ವಿಶ್ವಕಪ್ ಕನಸು ಛಿದ್ರವಾಯಿತು. ಹಾಗೆಯೇ, ಭಾರತ ತಂಡ ವಿಶ್ವಕಪ್ ಗೆಲ್ಲುತ್ತದೆ ಎನ್ನುವ ಕೋಟ್ಯಂತರ ಭಾರತೀಯ ಅಭಿಮಾನಿಗಳಿಗೂ ನಿರಾಸೆಯಾಗಿದೆ.
ಭಾರತ ತಂಡ ಸೋಲನುಭವಿಸಿದ ನಂತರ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿನ್ ತೆಂಡೂಲ್ಕರ್, "ನಾಣ್ಯಕ್ಕೆ ಎರಡು ಬದಿಗಳಿವೆ, ಹಾಗೆಯೇ ಜೀವನವೂ ಇದೆ. ಆಟದಲ್ಲಿ ಸೋಲು ಗೆಲುವು ಎರಡೂ ಸಹಜ. ನಮ್ಮ ತಂಡದ ಗೆಲುವನ್ನು ಆನಂದಿಸಿದ್ದೇವೆ, ಸೋಲಿನಲ್ಲೂ ನಾವೂ ಜೊತೆ ನಿಲ್ಲಬೇಕು. ಸೋಲು ಗೆಲುವು ಒಟ್ಟಿಗೆ ಇರುತ್ತದೆ" ಇರುತ್ತದೆ ಎಂದು ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.
ಹೌದು, ಭಾರತ ತಂಡ ಗೆದ್ದಾಗ ಅವರ ಜೊತೆ ನಾವೂ ಸಂಭ್ರಮ ಆಚರಿಸಿದ್ದೇವೆ, ಖುಷಿ ಪಟ್ಟಿದ್ದೇವೆ, ಹೊಗಳಿದ್ದೇವೆ. ಅವರು ಈಗ ಸೋತಿದ್ದಾರೆ, ಸೋಲಿನಲ್ಲಿ ಕೂಡ ನಾವು ಅವರ ಜೊತೆ ನಿಲ್ಲಬೇಕು. ಅಭಿಮಾನಿಗಳು ತಮ್ಮ ತಂಡವನ್ನು ಬಿಟ್ಟುಕೊಡಬಾರದು ಎಂದು ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಪಂದ್ಯದ ನಂತರ ಮಾತನಾಡಿದ ರೋಹಿತ್ ಶರ್ಮಾ, ತಂಡ ಉತ್ತಮವಾಗಿ ಬ್ಯಾಟಿಂಗ್ ಮಾಡಿತು. ಆದರೆ, ಕಳಪೆ ಬೌಲಿಂಗ್ ಪ್ರದರ್ಶನದಿಂದಾಗಿ ಸೋಲನುಭವಿಸಬೇಕಾಯಿತು ಎಂದು ಹೇಳಿದ್ದಾರೆ.
ಒತ್ತಡದಲ್ಲಿ ಹೇಗೆ ಆಡಬೇಕೆಂದು ಹೇಳಿಕೊಡಲು ಆಗಲ್ಲ
ನಾವು ಇಂದು ಎದುರಾಳಿಗಳಿಗೆ ಯಾವುದೇ ಪ್ರತಿರೋಧ ತೋರಲಿಲ್ಲ. ಕೊನೆಯ 10 ಓವರ್ ಗಳಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುವ ಮೂಲಕ ನಾವು ಉತ್ತಮ ರನ್ ಕಲೆಹಾಕಿದೆವು, ಆದರೆ ಬೌಲಿಂಗ್‌ನಲ್ಲಿ ಇಂದು ನಮ್ಮ ದಿನವಾಗಿರಲಿಲ್ಲ ಎಂದು ಹೇಳಿದರು.
"ಸೆಮಿಫೈನಲ್ ಹಂತಕ್ಕೆ ಬಂದಾಗ, ಮಹತ್ವದ ಪಂದ್ಯಗಳಲ್ಲಿ ಒತ್ತಡವನ್ನು ನಿಭಾಯಿಸಬೇಕಾಗುತ್ತದೆ. ಒತ್ತಡ ನಿಭಾಯಿಸುವ ಬಗ್ಗೆ ನಾವು ಹೇಳಿಕೊಡಲು ಬರುವುದಿಲ್ಲ. ಐಪಿಎಲ್‌ನಲ್ಲಿ ಪ್ಲೇಆಫ್‌ಗಳನ್ನು ಆಡಿದಾಗ ಅವು ಹೆಚ್ಚಿನ ಒತ್ತಡದ ಪಂದ್ಯಗಳಾಗಿರುತ್ತವೆ. ಅಂತಹ ಪಂದ್ಯಗಳಲ್ಲಿ ಆಡಿದ ಅನುಭವ ಆಟಗಾರರಿಗೆ ಇದೆ. ಆದರೆ, ನಾವು ಒತ್ತಡದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಲಿಲ್ಲ" ಎಂದು ಹೇಳಿದರು.