ಅದೊಂದು ಕೆಟ್ಟ ಪಂದ್ಯವಾಗಿರಬಹುದು ಆದರೆ..: ಟೀಮ್ ಇಂಡಿಯಾ ಪರ ನಿಂತ ಸಚಿನ್ ತೆಂಡೂಲ್ಕರ್

ಟಿ20 ವಿಶ್ವಕಪ್‌ನ ಸೆಮಿಫೈನಲ್ ಹಂತದಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಅನುಭವಿಸಿ ಟೂರ್ನಿಯಿಂದ ಹೊರಬಿದ್ದಿದೆ. ಇಂಗ್ಲೆಂಡ್ ವಿರುದ್ಧ ನಡೆದ ಸೆಮಿಫೈನಲ್‌ನಲ್ಲಿ ಬ್ಯಾಟಿಂಗ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಪ್ರದರ್ಶನದಿಂದಾಗಿ ಟೀಮ್ ಇಂಡಿಯಾ ಸವಾಲಿನ ಮೊತ್ತವನ್ನು ಎದುರಾಳಿ ತಂಡಕ್ಕೆ ನೀಡಿತ್ತು. ಆದರೆ ಬೌಲಿಂಗ್‌ನಲ್ಲಿ ಭಾರತದ ಪ್ರದರ್ಶನ ಮತ್ತಷ್ಟು ಕಳಪೆಯಾಗಿದ್ದ ಕಾರಣ ಎದುರಾಳಿ ತಂಡದ ಒಂದೂ ವಿಕೆಟ್ ಪಡೆಯಲು ಸಾಧ್ಯವಾಗದೆ ಸೋತು ನಿರಾಸೆ ಅನುಭವಿಸಿದೆ. ಈ ಸೋಲಿನ ಬಳಿಕ ಟೀಮ್ ಇಂಡಿಯಾ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ.
ಇಂಗ್ಲೆಂಡ್ ವಿರುದ್ಧದ ಈ ಆಘಾತಕಾರಿ ಸೋಲಿನ ಬಳಿಕ ಭಾರತ ತಂಡಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದ ಸಚಿನ್ ತೆಂಡೂಲ್ಕರ್ ಮತ್ತೊಮ್ಮೆ ತಂಡದ ಪರವಾಗಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ಸೆಮಿಫೈನಲ್‌ನಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಆಡಿದ್ದು ನಿಜಕ್ಕೂ ಕಳಪೆ ಆಟವೇ. ಆದರೆ ಆ ಒಂದು ಪ್ರದರ್ಶನದಿಂದಾಗಿ ಟೀಮ್ ಇಂಡಿಯಾದ ಸಾಮರ್ಥ್ಯವನ್ನು ಅಳೆಯುವುದು ಸಾಧ್ಯವಿಲ್ಲ ಎಂದಿದ್ದಾರೆ. ಇದಕ್ಕೂ ಮುನ್ನ ಸೆಮಿಫೈನಲ್‌ನಲ್ಲಿ ಭಾರತ ತಂಡ ಸೋಲು ಅನುಭವಿಸಿದ ಬೆನ್ನಿಗೆ ಸಚಿನ್ ತೆಂಡೂಲ್ಕರ್ ತಂಡದ ಆಟಗಾರರಿಗೆ ಬೆಂಬಲ ಸೂಚಿಸಿ ಮಾತನಾಡಿದ್ದರು.

ಭಾರತಕ್ಕೆ ಅದು ಕಠಿಣ ಪಂದ್ಯ
"ಸೆಮಿಫೈನಲ್ ಪಂದ್ಯ ಭಾರತದ ಪಾಲಿಗೆ ಬಹಳ ಕಠಿಣವಾಗಿತ್ತು. ವಿಕೆಟ್ ಕಳೆದುಕೊಳ್ಳದೆ 170 ರನ್‌ಗಳನ್ನು ಬೆನ್ನಟ್ಟಲು ಅವಕಾಶ ನೀಡಿದ್ದು ನಿಜಕ್ಕೂ ಕೆಟ್ಟ ಸೋಲೇ ಆಗಿದೆ. ಆದರೆ ಈ ಒಂದು ಪ್ರದರ್ಶನದಿಂದಾಗಿಯೇ ತಂಡದ ಸಾಮರ್ಥ್ಯವನ್ನು ಅಳೆಯುವುದು ಸೂಕ್ತವಲ್ಲ. ಯಾಕೆಂದರೆ ನಾವು ವಿಶ್ವದ ನಂಬರ್ 1 ಟಿ20 ತಂಡವೂ ಆಗಿದ್ದೇವೆ. ಆ ನಂಬರ್ 1 ಸ್ಥಾನ ರಾತ್ರಿ ಹಗಲಾಗುವುದರೊಳಗೆ ಬಂದಿರುವುದಲ್ಲ. ಬಹಳ ಕಾಲ ಉತ್ತಮ ಕ್ರಿಕೆಟ್ ಆಟವನ್ನು ಪ್ರದರ್ಶಿಸಿದರೆ ಮಾತ್ರವೇ ಅದು ಬರಲು ಸಾಧ್ಯ. ಭಾರತ ತಂಡ ಆ ಸಾಧನೆಯನ್ನು ಮಾಡಿದೆ" ಎಂದು ಸಚಿನ್ ತೆಂಡೂಲ್ಕರ್ ಟೀಮ್ ಇಂಡಿಯಾ ಬೆಂಬಲಕ್ಕೆ ನಿಂತಿದ್ದಾರೆ.

ಸೋಲಿನಲ್ಲೂ ಜೊತೆಯಾಗಿ ನಿಲ್ಲಬೇಕು
ಮುಂದುವರಿದು ಮಾತನಾಡಿದ ಸಚಿನ್ ತೆಂಡೂಲ್ಕರ್ "ಭಾರತ ತಂಡ ಸರಿಯಾಗಿ ಆಡಿದೆ ಎಂದು ನಾನು ಹೇಳುತ್ತಿಲ್ಲ. ಆದರೆ ಆಟಗಾರರು ಕೂಡ ಮೈದಾನದಲ್ಲಿ ವೈಫಲ್ಯ ಅನುಭವಿಸಲು ಬಯಸಲಾರರು. ಇದು ಎಲ್ಲಾ ಸಮಯಗಳಲ್ಲೂ ಹೀಗೆ ನಡೆಯುವುದಿಲ್ಲ. ಆಟದಲ್ಲಿ ಈ ರೀತಿಯ ಏರಿಳಿತಗಳು ಸಾಮಾನ್ಯ. ಗೆದ್ದರೆ ನಮ್ಮ ಗೆಲುವು ಸೋತರೆ ಅದು ಅವರ ಸೋಲು ಎಂದು ಹೇಳಲು ಸಾಧ್ಯವಿಲ್ಲ. ನಾವು ಸೋಲಿನಲ್ಲೂ ಜೊತೆಯಾಗಿ ನಿಲ್ಲಬೇಕು" ಎಂದಿದ್ದಾರೆ ಸಚಿನ್ ತೆಂಡೂಲ್ಕರ್.

ಭಾರತ ನೀಡಿದ ಗುರಿ ಸಾಕಾಗಲಿಲ್ಲ
ಇನ್ನು ಇದೇ ಸಂದರ್ಭದಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ನೀಡಿದ 169 ರನ್‌ಗಳ ಗುರಿ ಅಡಿಲೇಡ್‌ನಂತಾ ಕ್ರೀಡಾಂಗಣದಲ್ಲಿ ಸಾಕಾಗುವುದಿಲ್ಲ ಎಂದಿದ್ದಾರೆ. "ಅಡಿಲೇಡ್‌ನಂತಾ ಮೈದಾನದಲ್ಲಿ 168 ರನ್‌ಗಳನ್ನು ಗಳಿಸಿತ್ತು ಉತ್ತಮ ಮೊತ್ತವಾಗಿರಲಿಲ್ಲ. ಯಾಕೆಂದರೆ ಅಡಿಲೇಡ್‌ನದ ಸ್ವರೂಪವೇ ಹಾಗಿದೆ. ಅಲ್ಲಿನ ಬದಿಯಲ್ಲಿರುವ ಬೌಂಡರಿಗಳು ನಿಜಕ್ಕೂ ಚಿಕ್ಕದಾಗಿದೆ. ಇಲ್ಲಿ 190ರ ಸನಿಹದಲ್ಲಿ ಬಂದಿದ್ದ ಮೊತ್ತ ಉತ್ತಮವಾಗಿರುತ್ತಿತ್ತು" ಎಂದು ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಭಾರತ ಸಜ್ಜು
ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿ ವಿಶ್ವಕಪ್ ಟೂರ್ನಿಯಿಂದ ನಿರ್ಗಮಿಸಿದ ಭಾರತ ತಂಡ ಈಗ ತನ್ನ ಮುಂದಿನ ದ್ವಿಪಕ್ಷೀಯ ಸರಣಿಗಾಗಿ ಸಜ್ಜಾಗಿದೆ. ಸೆಮಿಫೈನಲ್‌ನಲ್ಲಿ ಸೋತು ನಿರ್ಗಮಿಸಿದ ಮತ್ತೊಂದು ತಂಡವಾಗಿರುವ ನ್ಯೂಜಿಲೆಂಡ್ ತಂಡದ ವಿರುದ್ಧ ಅದರ ನೆಲದಲ್ಲಿಯೇ ಭಾರತ ತಂಡ ವೈಟ್‌ಬಾಲ್ ಸರಣಿಯನ್ನು ಆಡಲಿದ್ದು ಅದಕ್ಕಾಗಿ ಕಿವೀಸ್ ಪ್ರವಾಸ ಕೈಗೊಳ್ಳಲಿದೆ. ಟಿ20 ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಿದರೆ ಏಕದಿನ ಸರಣಿಯಲ್ಲಿ ಶಿಖರ್ ಧವನ್ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಅನುಭವಿ ಆಟಗಾರರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications