
ಮುಂಬೈ, ಆಗಸ್ಟ್ 30: ರಾಷ್ಟ್ರೀಯ ಕ್ರೀಡಾದಿನವಾದ ಗುರುವಾರ (ಆಗಸ್ಟ್ 29) ಬಾಲಿವುಡ್ ಸ್ಟಾರ್‌ಗಳಾದ ವರುಣ್ ಧವನ್ ಮತ್ತು ಅಭಿಷೇಕ್ ಬಚ್ಚನ್ ಇನ್ನಿತರರೊಂದಿಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮಿನಿ ಕ್ರಿಕೆಟ್ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ.
ಆಗಸ್ಟ್ 29ರಂದು ತೆಂಡೂಲ್ಕರ್ ಅವರೇ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಾಕಿಕೊಂಡಿದ್ದರು. ಟ್ವಿಟರ್‌ನಲ್ಲಿ, 'ಕೆಲಸವನ್ನು ಆಟದೊಂದಿಗೆ ಬೆರೆಸುವುದು ಯಾವತ್ತಿಗೂ ಒಳ್ಳೆಯದು. ಶೂಟಿಂಗ್ ವೇಳೆ ವರುಣ್ ಧವನ್ ಮತ್ತು ತಂಡದೊಂದಿಗೆ ಕ್ರಿಕೆಟ್ ಆಡಲು ಖುಷಿಯೆನಿಸಿತು. ಧವನ್ ಮತ್ತು ಸ್ವಲ್ಪ ಸಮಯ ನಮ್ಮ ಜೊತೆ ಆಟದಲ್ಲಿ ಸೇರಿಕೊಂಡ ಅಭಿಷೇಕ್ ಬಚ್ಚನ್ ಬೌಲಿಂಗ್ ನೋಡಿ ಖುಷಿಯ ಜೊತೆ ಅಚ್ಚರಿಯೂ ಆಯ್ತು' ಎಂದು ಬರೆದುಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕಗಳ ಶತಕ ಬಾರಿಸಿದ ವಿಶ್ವದ ಏಕಮಾತ್ರ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್. 200 ಟೆಸ್ಟ್ ಪಂದ್ಯಗಳಲ್ಲಿ 51 ಶತಕ, 463 ಏಕದಿನ ಪಂದ್ಯಗಳಲ್ಲಿ 49 ಶತಕಗಳ ದಾಖಲೆ ತೆಂಡೂಲ್ಕರ್ ಹೆಸರಿನಲ್ಲಿದೆ. ಟೆಸ್ಟ್‌ನಲ್ಲಿ ಸಚಿನ್ 6 ದ್ವಿಶತಕ, ಏಕದಿನದಲ್ಲಿ 1 ದ್ವಿಶತಕ ಬಾರಿಸಿದ್ದರು.