
ದಿಗ್ಗಜ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ರಣಜಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು ಚೊಚ್ಚಲ ಪಂದ್ಯದಲ್ಲಿಯೇ ಶತಕ ಸಿಡಿಸಿ ಮಿಂಚಿದ್ದಾರೆ. ಗೋವಾ ಪರವಾಗಿ ದೇಶೀಯ ಕ್ರಿಕೆಟ್ ಪ್ರಯಾಣ ಆರಂಭಿಸಿರುವ ಅರ್ಜುನ್ ತೆಂಡೂಲ್ಕರ್ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ತಮ್ಮ ಪದಾರ್ಪಣಾ ಪಂದ್ಯದಲ್ಲಿಯೇ ಶತಕ ಸಿಡಿಸಿದರು. ಅರ್ಜುನ್ ತೆಂಡೂಲ್ಕರ್ ಅವರ ಈ ಸಾಧನೆ ಬಗ್ಗೆ ಸ್ವತಃ ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯೆ ನೀಡಿದ್ದು ಪುತ್ರನ ಪರವಾಗಿ ಮನವಿಯೊಂದನ್ನು ಮಾಡಿದ್ದಾರೆ.
"ಕ್ರಿಕೆಟರ್‌ನ ಪುತ್ರನಾಗಿ ಅರ್ಜುನ್ ಸಾಮಾನ್ಯ ಬಾಲ್ಯವನ್ನು ಕಳೆದಿಲ್ಲ. ನನ್ನ ನಿವೃತ್ತಿಯ ಸಂದರ್ಭದಲ್ಲಿ ಮುಂಭೈನ ಮಾಧ್ಯಮದವರೊಂದಿಗೆ ಮಾತನಾಡುವ ಸಂದರ್ಭದಲ್ಲಿ ನಾನು ಅವರಲ್ಲಿ ಮನವಿ ಮಾಡಿಕೊಂಡಿದ್ದೆ. ಕ್ರಿಕೆಟ್‌ನಲ್ಲಿ ಅರ್ಜುನ್‌ಗೆ ಪ್ರೀತಿ ಬೆಳೆಯಲು ಅವಕಾಶ ಮಾಡಿ ಎಂಬುದು ನನ್ನ ಮನವಿಯಾಗಿತ್ತು" ಎಂದು ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು, "ಅರ್ಜುನ್ ನೀಡಿರುವ ಪ್ರದರ್ಶನದ ಹಿನ್ನೆಲೆಯಲ್ಲಿ ಸಾಕಷ್ಟು ಹೇಳಿಕೆಗಳನ್ನು ನೀವು ಪಡೆದುಕೊಳ್ಳಬಹುದು. ಆದರೆ ಆತನ ಮೇಲೆ ಒತ್ತಡವನ್ನು ಹಾಕಬಾರದು. ಯಾಕೆಂದರೆ ನಾನು ನನ್ನ ಹೆತ್ತವರಿಂದ ಯಾವುದೇ ಒತ್ತಡವನ್ನು ಅನುಭವಿಸಿಲ್ಲ. ನನ್ನ ಹೆತ್ತವರು ನನಗೆ ಹೊರಗೆ ಹೋಗಲು ಹಾಗೂ ನನ್ನ ಒಳಗಿನ ಆಕಾಂಕ್ಷೆಯನ್ನು ಹೊರಹಾಕಲು ಅನುವು ಮಾಡಿಕೊಟ್ಟಿದ್ದರು. ಅವರಿಂದ ಯಾವುದೇ ನಿರೀಕ್ಷೆಯ ಒತ್ತಡವಿರಲಿಲ್ಲ. ಅವರಿಂದ ಏನಿದ್ದರೂ ಪ್ರೋತ್ಸಾಹ ಹಾಗೂ ಬೆಂಬಲವಿತ್ತು. ಹೀಗಾಗಿ ನಾವು ನಮ್ಮಷ್ಟಕ್ಕೇ ಹೋಗಿ ನಮ್ಮ ಪ್ರತಿಭೆಯನ್ನು ಉತ್ತಮಗೊಳಿಸುತ್ತಿದ್ದೆವು. ಹಾಗಾಗಿಯೇ ಇದು ನಿನಗೆ ಸಾವಾಲಗಲಿದೆ ಎಂದು ಆತನಿಗೆ ಹೇಳುತ್ತಲೇ ಇದ್ದೆ" ಎಂದಿದ್ದಾರೆ ಸಚಿನ್ ತೆಂಡೂಲ್ಕರ್.
ಇನ್ನು ಈ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ ಆರಂಭದಿಂದಲೇ ಗಮನಸೆಳೆಯುವಲ್ಲಿ ಯಶಸ್ವಿಯಾದರು. ಉತ್ತಮ ಎಸೆತಗಳಿಗೆ ತಕ್ಷಣಾತ್ಮಕವಾಗಿ ಆಡುತ್ತಾ ಕೆಟ್ಟ ಎಸೆತಗಳಿಗೆ ದಂಡಿಸುತ್ತಾ ಸಾಗಿದರು ಅರ್ಜುನ್. ಸಾಕಷ್ಟು ಬೌಂಡರಿಗಳನ್ನು ಕೂಡ ಬಾರಿಸುವ ಮೂಲಕ ತಮ್ಮ ಬ್ಯಾಟಿಂಗ್‌ನ ಕೌಶಲ್ಯವನ್ನು ಕೂಡ ಅರ್ಜುನ್ ತೆಂಡೂಲ್ಕರ್ ಪ್ರದರ್ಶಿಸಿದ್ದಾರೆ. ಮೈದಾನದ ಎಲ್ಲಾ ಭಾಗಕ್ಕೂ ಚೆಂಡನ್ನು ಅಟ್ಟಿದ ಅರ್ಜುನ್ ತೆಂಡೂಲ್ಕರ್ ಚೊಚ್ಚಲ ರಣಜಿ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ.
ಅರ್ಜುನ್ ತೆಂಡೂಲ್ಕರ್ 178 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದ್ದಾರೆ. ಇದರಲ್ಲಿ 12 ಬೌಂಡರಿ ಹಾಗೂ ಎರಡು ಸಿಕ್ಸರ್ ಕೂಡ ಸೇರಿದೆ. ಈ ಮೂಲಕ ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ಆಗಮನವನ್ನು ಭರ್ಜರಿಯಾಗಿ ಸಾರಿದ್ದಾರೆ.
34 ವರ್ಷಗಳ ಹಂದೆ ಸಚಿನ್ ತೆಂಡೂಲ್ಕರ್ ಕೂಡ ತಮ್ಮ ಚೊಚ್ಚಲ ರಣಜಿ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಗಮನಸೆಳೆದಿದ್ದರು. 1988ರ ಡಿಸೆಂಬರ್ 11ರಂದು ಗುಜರಾತ್ ವಿರುದ್ಧದ ಪಂದ್ಯದಲ್ಲಿ ಸಚಿನ್ ಈ ಸಾಧನೆ ಮಾಡಿದ್ದರು. ಆಗ ಸಚಿನ್ ವಯಸ್ಸು ಕೇವಲ 15 ವರ್ಷ. ಇದೀಗ ಬಹುತೇಕ ಮೂರುವರೆ ದಶಕದ ಬಳಿಕ ಸಚಿನ್ ಪುತ್ರ ಅರ್ಜುನ್ ಅದೇ ಸಾಧನೆ ಮಾಡಿದ್ದಾರೆ.
ಮುಂಬೈ ತೊರೆದು ಗೋವಾ ಸೇರಿದ ಅರ್ಜುನ್: ಇನ್ನು ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ಪರ ವೃತ್ತಿ ಜೀವನ ಆರಂಭಿಸಿದ ಅರ್ಜುನ್ ತೆಂಡೂಲ್ಕರ್ ಹೆಚ್ಚಿನ ಅವಕಾಶ ಪಡೆಯುವ ದೃಷ್ಟಿಯಿಂದ ಗೋವಾ ಪರವಾಗಿ ಆಡಲು ನಿರ್ಧರಿಸಿ ಗೋವಾ ತಂಡವನ್ನು ಸೇರಿಕೊಂಡಿದ್ದಾರೆ. ಮುಂಬೈ ಪರವಾಗಿ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಎರಡು ಪಂದ್ಯಗಳಲ್ಲಿ ಆಡಿದ್ದರು ಅರ್ಜುನ್ ತೆಂಡೂಲ್ಕರ್