ಮೆಲ್ಬೋರ್ನ್, ಜೂ.23: ಆಸ್ಟ್ರೇಲಿಯನ್ನರು ಸುಖಾಸುಮ್ಮನೆ ಯಾರನ್ನು ಹೊಗಳುವುದಿಲ್ಲ ಎಂಬ ಮಾತಿದೆ. ಪ್ರತಿಭಾವಂತರಾದರೂ ಅಳೆದು ತೂಗಿ ಲೆಕ್ಕಾಚಾರ ಹಾಕಿ ಹೊಗಳುವುದು ಅವರ ಜಾಯಮಾನ. ಇತ್ತೀಚೆಗೆ ಈ ಶತಮಾನದ ಟೆಸ್ಟ್ ಕ್ರಿಕೆಟರ್ ಯಾರು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸಮೀಕ್ಷೆ ನಡೆಸಿ ಫಲಿತಾಂಶ ಹೊರ ಹಾಕಿದೆ. ಅದರಂತೆ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಶ್ರೇಷ್ಠ ಕ್ರಿಕೆಟರ್ ಆಗಿ ಆಯ್ಕೆಯಾಗಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾ(cricket.com.au) ನಡೆಸಿದ ಸಮೀಕ್ಷೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದ ಸಚಿನ್ ತೆಂಡೂಲ್ಕರ್ ಅವರು ನಂ. 1 ಟೆಸ್ಟ್ ಆಟಗಾರ ಎನಿಸಿಕೊಂಡಿದ್ದಾರೆ. [ನಿವೃತ್ತಿ ನಂತರ ಸಚಿನ್ ಸುದ್ದಿಗೋಷ್ಠಿ ಮುಖ್ಯಾಂಶ]

ಸುಮಾರು 16 ಸಾವಿರಕ್ಕೂ ಅಧಿಕ ಅಭಿಮಾನಿಗಳು ಪಾಲ್ಗೊಂಡಿದ್ದ ಈ ಸಮೀಕ್ಷೆಯಲ್ಲಿ ಸಚಿನ್ ಅವರಿಗೆ ಶೇ 23ರಷ್ಟು ಮತಗಳು ಸಿಕ್ಕಿದ್ದರೆ, ಕುಮಾರ್ ಸಂಗಕ್ಕಾರ ಅವರಿಗೆ ಶೇ 14ರಷ್ಟು ಮತಗಳು ಬಂದಿವೆ. ಟಾಪ್ 10 ಪಟ್ಟಿಯಲ್ಲಿ ನಾಲ್ವರು ಆಸ್ಟ್ರೇಲಿಯನ್ನರು, ಮೂವರು ದಕ್ಷಿಣ ಆಫ್ರಿಕನ್ನರು ಇಬ್ಬರು ಶ್ರೀಲಂಕಾದ ಆಟಗಾರರಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರು 2013ರಲ್ಲಿ ತಮ್ಮ ವೃತ್ತಿ ಬದುಕಿನ 200ನೇ ಟೆಸ್ಟ್ ಪಂದ್ಯವನ್ನಾಡಿದ ಬಳಿಕೆ ಮುಂಬೈನಲ್ಲಿ ನಿವೃತ್ತಿ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು. [ತೆಂಡೂಲ್ಕರ್ ಭಾವಪೂರ್ಣ ವಿದಾಯದ ಭಾಷಣ]
42 ವರ್ಷದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು 100 ಅಂತಾರಾಷ್ಟ್ರೀಯ ಶತಕಗಳ ದಾಖಲೆ ಜೊತೆಗೆ ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಐಕಾನ್ ಆಟಗಾರರಾಗಿದ್ದು, ಸದ್ಯ ಶೇನ್ ವಾರ್ನ್ ಜೊತೆಗೂಡಿ ಟ್ವೆಂಟಿ20 ಲೀಗ್ ಆಯೋಜಿಸುತ್ತಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾ ಸಮೀಕ್ಷೆ ಫಲಿತಾಂಶ
1. ಸಚಿನ್ ತೆಂಡೂಲ್ಕರ್ - ಭಾರತ (23% ಮತ)
2. ಕುಮಾರ್ ಸಂಗಕ್ಕಾರ - ಶ್ರೀಲಂಕಾ (14%)
3. ಆಡಂ ಗಿಲ್ ಕ್ರಿಸ್ಟ್-ಆಸ್ಟೇಲಿಯಾ (13%)
4. ರಿಕಿ ಪಾಂಟಿಂಗ್ -ಆಸ್ಟೇಲಿಯಾ (11%)
5. ಜಾಕ್ ಕಾಲೀಸ್- ದಕ್ಷಿಣ ಆಫ್ರಿಕಾ (11%)
6. ಎಬಿ ಡಿವಿಲೆಯರ್ಸ್- ದಕ್ಷಿಣ ಆಫ್ರಿಕಾ (10%)
7. ಶೇನ್ ವಾರ್ನ್ -ಆಸ್ಟ್ರೇಲಿಯಾ (9%)
8. ಗ್ಲೆನ್ ಮೆಗ್ರಾ -ಆಸ್ಟ್ರೇಲಿಯಾ (5%)
9. ಮುತ್ತಯ್ಯ ಮುರಳೀಧರನ್ -ಶ್ರೀಲಂಕಾ (3%)
10. ಡೇಲ್ ಸ್ಟೇನ್ -ದಕ್ಷಿಣ ಆಫ್ರಿಕಾ (1%)
(ಒನ್ ಇಂಡಿಯಾ ಸುದ್ದಿ)