ದುಬೈ, ಜೂ.3: ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಹಾಗೂ ಶೇನ್ ವಾರ್ನ್ ಅವರ ಕನಸಿನ ಆಲ್ ಸ್ಟಾರ್ ಕ್ರಿಕೆಟ್ ಲೀಗ್ ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಾನ್ಯತೆ ನೀಡಿದೆ.
ಸಚಿನ್ ಹಾಗೂ ವಾರ್ನ್ ಅವರು ಆಲ್ ಸ್ಟಾರ್ ಕ್ರಿಕೆಟ್ ಲೀಗ್- ಟಿ20 ಟೂರ್ನಿ ಆರಂಭಿಸುತ್ತಿದ್ದಾರೆ. ಈ ವರ್ಷದಲ್ಲೇ ಯುನೈಟೆಡ್ ಸ್ಟೇಟ್ಸ್ ನಲ್ಲಿ ಮೊದಲಿಗೆ ಈ ಟೂರ್ನಿ ಉದ್ಘಾಟನೆಗೊಳ್ಳಲಿದೆ. ಇದಕ್ಕಾಗಿ ಮಾನ್ಯತೆ ಕೋರಿ ಐಸಿಸಿ ಕಚೇರಿಗೆ ಬುಧವಾರ ಈ ಇಬ್ಬರು ದಿಗ್ಗಜರು ಭೇಟಿ ಕೊಟ್ಟಿದ್ದರು. [ಐಪಿಎಲ್, ಐಸಿಎಲ್, ಬಿಗ್ ಬ್ಯಾಷ್ ನಂತರ ಎಂಸಿಎಲ್]

#SachinversusWarne ಹ್ಯಾಶ್ ಟ್ಯಾಗ್ ಹಾಕಿ ಇಬ್ಬರು ಈ ಬಗ್ಗೆ ಟ್ವೀಟ್ ಮಾಡಿದ್ದರು. ಈ ಟೂರ್ನಿಯಲ್ಲಿ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಬ್ರಿಯಾನ್ ಲಾರಾ, ಮೆಗ್ರಾ, ಮಹೇಲ ಜಯವರ್ಧನೆ ಸೇರಿದಂತೆ ಅನೇಕ ಕ್ರಿಕೆಟ್ ದಿಗ್ಗಜರು ಪಾಲ್ಗೊಳ್ಳಲಿದ್ದಾರೆ ಎಂಬ ಸುದ್ದಿ ಇದೆ. [ಐಪಿಎಲ್ 2015 ವಿಶೇಷ]
ಇದೇ ಸಮಯಕ್ಕೆ ಮಾಸ್ಟರ್ಸ್ ಚಾಂಪಿಯನ್ ಲೀಗ್ ಗೂ ಐಸಿಸಿ ಅನುಮತಿ ನೀಡಿದೆ. ಇದರಲ್ಲೂ ಲಾರಾ, ಆಡಂ ಗಿಲ್ ಕ್ರಿಸ್ಟ್, ವಾಸೀಂ ಅಕ್ರಂ, ಜಾಕ್ ಕಾಲೀಸ್ ಮುಂತಾದ ಆಟಗಾರರು ಆಡುತ್ತಿದ್ದಾರೆ. ಬಹುತೇಕ ನಿವೃತ್ತ ಆಟಗಾರರೇ ಇದರಲ್ಲಿರುತ್ತಾರೆ ಎಂಬ ಸುದ್ದಿಯಿದೆ.
ಕ್ರಿಕೆಟ್ ಆಲ್ ಸ್ಟಾರ್‌ಲೀಗ್ ಹೆಸರಿನಲ್ಲಿ ಒಟ್ಟು 25ಸಾವಿರ ಯುಎಸ್ ಡಾಲರ್ ಪ್ರಶಸ್ತಿ ಮೊತ್ತದ ಈ ಪಂದ್ಯಾವಳಿಗಳು ನ್ಯೂಯಾರ್ಕ್, ಲಾಸ್ ಏಂಜಲೀಸ್ ಹಾಗೂ ಚಿಕಾಗೋದಲ್ಲಿ ಆಯೋಜನೆಗೊಳ್ಳಲಿದೆ.ವಿಶ್ವದ ನಾನಾ ಕಡೆಗಳಲ್ಲಿ ಈ ಪಂದ್ಯಗಳು ನಡೆಯಲಿದ್ದು, ಮುಂಬರುವ ಸೆಪ್ಟೆಂಬರ್‌ನಲ್ಲಿ ಇದಕ್ಕೆ ಚಾಲನೆ ಸಿಗುವ ಸಾಧ್ಯತೆಯಿದೆ. (ಒನ್ ಇಂಡಿಯಾ ಸುದ್ದಿ)