ಮೈಸೂರು, ಸೆ. 14: ಸಾದಿಕ್ ಕಿರ್ಮಾನಿ 51 ಎಸೆತದಲ್ಲಿ 89 ರನ್ ಗಳಿಸಿ ಏಕಾಂಗಿ ಹೋರಾಟದ ನಡೆಸಿದ್ದು ವ್ಯರ್ಥವಾಯಿತು. ಹುಬ್ಬಳ್ಳಿ ತಂಡದ ಸಂಘಟಿತ ಹೋರಾಟದ ಎದುರು ಹೊಸ ತಂಡ ನಮ್ಮ ಶಿವಮೊಗ್ಗ 15ರನ್ ಗಳ ಪರಾಭವ ಅನುಭವಿಸಿತು.
ಭಾನುವಾರ ನಡೆದ 2ನೇ ಪಂದ್ಯದಲ್ಲಿ 6 ಬೌಂದರಿ 5 ಸಿಕ್ಸ್ ಸಿಡಿಸಿ 89ರನ್ ಗಳಿಸಿದ ಕಿರ್ಮಾನಿ ಆಟ ರನ್ ಚೇಸ್ ನಲ್ಲಿ ನೆರವಿಗೆ ಬರಲಿಲ್ಲ. ಹುಬ್ಬಳ್ಳಿ ಟೈಗರ್ಸ್ ಒಡ್ಡಿದ್ದ 177ರನ್ ಗುರಿ ಬೆನ್ನು ಹತ್ತಿದ ನಮ್ಮ ಶಿವಮೊಗ್ಗ ತಂಡ 19.3 ಓವರ್ಗಳಲ್ಲಿ 162 ರನ್ಗಳಿಗೆ ಸರ್ವಪತನ ಕಂಡಿತು.[ಕೆಪಿಎಲ್ ವೇಳಾಪಟ್ಟಿ ಬದಲು]

ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ ಆರಂಭಿಕ ಆಟಗಾರ ಮೊಹಮ್ಮದ್ ತಾಹ 64ರನ್ (39 ಎಸೆತ, 4 X6, 5X4) ಹಾಗೂ ಕೆ.ಬಿ.ಪವನ್ 47 ರನ್(42 ಎಸೆತ, 6 X4) ಉತ್ತಮ ಅಡಿಪಾಯದ ನೆರವಿನಿಂದ 5 ವಿಕೆಟ್ಗೆ 177 ರನ್ ದಾಖಲಿಸಿತು.
ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಕಂಡಿದ್ದ ನಮ್ಮ ಶಿವಮೊಗ್ಗ ಈಗ ಹ್ಯಾಟ್ರಿಕ್ ಸೋಲು ಕಂಡಿದೆ. ಅಂಕಪಟ್ಟಿಯಲ್ಲಿ 6 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದರೂ ಪ್ಲೇ-ಆಫ್ ಖಚಿತಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಹುಬ್ಬಳ್ಳಿ ತಂಡ 5 ಪಂದ್ಯಗಳಿಂದ 5 ಅಂಕಗಳೊಂದಿಗೆ 4ನೇ ಸ್ಥಾನಕ್ಕೇರಿದ್ದು ಪ್ಲೇ ಆಫ್ ಆಸೆ ಜೀವಂತವಾಗಿಸಿಕೊಂಡಿದೆ.

ಹುಬ್ಬಳ್ಳಿ ಟೈಗರ್ಸ್: 5 ವಿಕೆಟ್ಗೆ 177 ( ಮಹಮ್ಮದ್ ತಾಹ 64, ಕೆ.ಪಿ.ಪವನ್ 47, ಶ್ರೇಯಸ್ ಗೋಪಾಲ್ 34ಕ್ಕೆ 3, ಭವೇಶ್ 3ಕ್ಕೆ 1, ವಿಕ್ರಂ 23ಕ್ಕೆ 1),
ನಮ್ಮ ಶಿವಮೊಗ್ಗ : 19.3 ಓವರ್ಗಳಲ್ಲಿ 162 (ಕಿರ್ವನಿ 89, ಅಕ್ಷಯ್ 38ಕ್ಕೆ 2, ಪ್ರತೀಕ್ 24ಕ್ಕೆ 2, ಶಿವಿಲ್ 31ಕ್ಕೆ 2)