ಟಿ20 ವಿಶ್ವಕಪ್ನ ಸೂಪರ್ 8 ಹಂತದ ಪಂದ್ಯಗಳು ನಡೆಯುತ್ತಿವೆ. ಸೂಪರ್ 8 ಹಂತದ ಎರಡನೇ ಗುಂಪಿನಲ್ಲಿ ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ಲಂಕಾ ತಂಡಕ್ಕೆ ಸವಾಲಿನ ಮೊತ್ತದ ಗುರಿಯನ್ನು ನೀಡಿದೆ. ಗೆಲ್ಲಲೇ ಬೇಕಾದ ಒತ್ತಡದಲ್ಲಿ ಪಾಕಿಸ್ತಾನ ತಂಡಕ್ಕೆ ಆರಂಭಿಕ ಆಟಗಾರ ಸಾಹಿಬ್‌ಜಾದ ಫರ್ಹಾನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಅಳಿಸಿ ಹಾಕಿದರು.
ಪಾಕ್ ತಂಡದ ಸ್ಫೋಟಕ ಆಟಗಾರ ಸಾಹಿಬ್‌ಜಾದ ಫರ್ಹಾನ್ ಟಿ20 ವಿಶ್ವಕಪ್‌ನಲ್ಲಿ ತಮ್ಮ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದರು. ಇಡೀ ಟೂರ್ನಿಯಲ್ಲಿ ಭಾರತದ ವಿರುದ್ಧ ಬಿಟ್ಟರೆ ಉಳಿದ ಎಲ್ಲ ಪಂದ್ಯಗಳಲ್ಲೂ ಇವರು ಅಬ್ಬರದ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಗಿದ್ದರು. ಶನಿವಾರವೂ ಸಾಹಿಬ್‌ಜಾದ ಫರ್ಹಾನ್ ಮಹತ್ವದ ಪಂದ್ಯದಲ್ಲಿ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದರು. ಇವರು ಲಂಕಾ ಬೌಲರ್‌ಗಳ ಹೆಡೆ ಮುರಿಕಟ್ಟಿದರು. ಇವರು 60 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್ ಸಹಾಯದಿಂದ 100 ರನ್ ಬಾರಿಸಿ ಔಟ್ ಆದರು.

ಪಾಕಿಸ್ತಾನದ ಸ್ಟಾರ್ ಆಟಗಾರ ಸಾಹಿಬ್‌ಜಾದ ಫರ್ಹಾನ್ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು ಈ ಟೂರ್ನಿಯಲ್ಲಿ ಆಡಿದ 7 ಪಂದ್ಯಗಳಲ್ಲಿ 76ರ ಸರಾಸರಿಯಲ್ಲಿ 383 ರನ್ ಸಿಡಿಸಿದರು. ಈ ಮೂಲಕ ಪಾಕ್ ಪ್ಲೇಯರ್ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಅಳಿಸಿ ಹಾಕಿದರು. ವಿರಾಟ್ ಕೊಹ್ಲಿ 2013-14ರ ಟಿ20 ವಿಶ್ವಕಪ್‌ನಲ್ಲಿ ಆಡಿದ 6 ಪಂದ್ಯಗಳಲ್ಲಿ 319 ರನ್ ಸಿಡಿಸಿದ್ದರು. ಈ ದಾಖಲೆಯನ್ನು ಪಾಕ್ ಪ್ಲೇಯರ್ ಅಳಿಸಿ ಹಾಕಿದರು.
ಸಾಹಿಬ್‌ಜಾದ ಫರ್ಹಾನ್, ಪಾಕಿಸ್ತಾನ, 7 ಪಂದ್ಯ, 383 ರನ್
ವಿರಾಟ್ ಕೊಹ್ಲಿ, ಭಾರತ, 6 ಪಂದ್ಯ, 319 ರನ್
ತಿಲಕರತ್ನೆ ದಿಲ್ಶನ್, ಶ್ರೀಲಂಕಾ, 7 ಪಂದ್ಯ, 317 ರನ್
ಬಾಬರ್ ಅಜಮ್, ಪಾಕಿಸ್ತಾನ, 6 ಪಂದ್ಯ, 303 ರನ್
ಮಹೇಲ ಜಯವರ್ಧನೆ, ಶ್ರೀಲಂಕಾ, 6 ಪಂದ್ಯ, 302 ರನ್
ಸಾಹಿಬ್‌ಜಾದ ಫರ್ಹಾನ್ ಒಂದೇ ಆವೃತ್ತಿಯಲ್ಲಿ ಎರಡು ಶತಕ ಬಾರಿಸಿ ದಾಖಲೆಯನ್ನು ಬರೆದರು. ಈ ವರೆಗೆ ಟಿ20 ವಿಶ್ವಕಪ್‌ನಲ್ಲಿ ಯಾವೊಬ್ಬ ಬ್ಯಾಟರ್ ಈ ಸಾಧನೆಯನ್ನು ಮಾಡಿರಲಿಲ್ಲ. ಇವರು ಲೀಗ್ ಹಂತದ ನಮೀಬಿಯಾ ವಿರುದ್ಧವೂ ಶತಕ ಬಾರಿಸಿ ಅಬ್ಬರಿಸಿದ್ದರು. ಈ ಮೂಲಕ ಫರ್ಹಾನ್ ಒಂದೇ ಆವೃತ್ತಿಯಲ್ಲಿ 2 ಶತಕ ಬಾರಿಸಿದ ಮೊದಲ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು. ಇವರ ಭರ್ಜರಿ ಬ್ಯಾಟಿಂಗ್ ಬಲದಿಂದ ಪಾಕಿಸ್ತಾನ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 212 ರನ್‌ಗಳನ್ನು ಕಲೆ ಹಾಕಿತು.