ಸಾಯಿ ಸುದರ್ಶನ್ ಶತಕ: ಆರ್‌ಸಿಬಿಗೆ 206 ರನ್ ಗುರಿ ನೀಡಿದ ಜಿಟಿ
ಬೆಂಗಳೂರು: ಭರವಸೆಯ ಆರಂಭಿಕ ಆಟಗಾರ ಸಾಯಿ ಸುದರ್ಶನ್ ಅವರು ಬಾರಿಸಿದ ಶತಕದ ನೆರವಿನಿಂದ 19ನೇ ಆವೃತ್ತಿಯ ಐಪಿಎಲ್‌ನ 34ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ 206 ರನ್‌ಗಳ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ನೀಡಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾಗಿ ಸಾಯಿ ಸುದರ್ಶನ್ ಹಾಗೂ ನಾಯಕ ಶುಭಮನ್ ಗಿಲ್ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಆರಂಭದಲ್ಲಿ ತಾಳ್ಮೆಯಿಂದ ಇನಿಂಗ್ಸ್ ಕಟ್ಟಿದ ಈ ಜೋಡಿ ಬಳಿಕ ಅಬ್ಬರಿಸಿತು. ಪವರ್‌ಪ್ಲೇನಲ್ಲಿ ವಿಕೆಟ್ ಕಳೆದುಕೊಳ್ಳದೇ ಬ್ಯಾಟ್ ಮಾಡಿದ ಈ ಜೋಡಿ 57 ರನ್ ಸೇರಿಸಿತು.

ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಮನಮೋಹಕ ಬ್ಯಾಟಿಂಗ್ ನಡೆಸಿ ರನ್ ಕಲೆ ಹಾಕುತ್ತಾ ಸಾಗಿತು. ಆರ್‌ಸಿಬಿ ತಂಡದ ವೇಗ ಹಾಗೂ ಸ್ಪಿನ್ ಸವಾಲನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದ ಜಿಟಿ ತಂಡದ ಆರಂಭಿಕರು ಸ್ಫೋಟಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 12.4 ಓವರ್‌ಗಳಲ್ಲಿ 128 ರನ್ ಸೇರಿಸಿತು. ಶುಭಮನ್ ಗಿಲ್ 24 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 32 ರನ್ ಸಿಡಿಸಿ ಔಟ್ ಆದರು.
ಸಾಯಿ ಶತಕ
ಎರಡನೇ ವಿಕೆಟ್‌ಗೆ ಸಾಯಿ ಸುದರ್ಶನ್ ಹಾಗೂ ಜೋಸ್ ಬಟ್ಲರ್ ಜೋಡಿ ಸಹ ಸಾಧಾರಣ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ 58 ಎಸೆತಗಳಲ್ಲಿ ಶತಕ ಬಾರಿಸಿದ್ದ ಸಾಯಿ ಸುದರ್ಶನ್ ಜೋಶ್ ಹ್ಯಾಜಲ್‌ವುಡ್ ಅವರು ಎಸೆದ ಬೌನ್ಸರ್‌ಗೆ ಔಟ್ ಆದರು. ಈ ಇನಿಂಗ್ಸ್‌ನಲ್ಲಿ ಇವರು 11 ಬೌಂಡರಿ, 5 ಸಿಕ್ಸರ್ ಸಿಡಿಸಿದ್ದಾರೆ.
ಮಧ್ಯಮ ಕ್ರಮಾಂಕದ ಜೋಸ್ ಬಟ್ಲರ್ 16 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಭುವನೇಶ್ವರ್ ಕುಮಾರ್ ಅವರಿಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಐಪಿಎಲ್‌ನಲ್ಲಿ 8ನೇ ಬಾರಿ ಬಟ್ಲರ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದ ಹೆಗ್ಗಳಿಕೆ ಭುವಿ ತಮ್ಮದಾಗಿಸಿಕೊಂಡರು.

ಡೆತ್ ಓವರ್‌ಗಳಲ್ಲಿ ಆರ್‌ಸಿಬಿ ಬಿಗುವಿನ ದಾಳಿ ನಡೆಸಿತು. 17ನೇ ಓವರ್ ಸುಯಶ್ ಶರ್ಮಾ, 18ನೇ ಓವರ್ ಭುವನೇಶ್ವರ್ ಕುಮಾರ್, 19ನೇ ಓವರ್ ಜೋಶ್ ಹ್ಯಾಜಲ್‌ವುಡ್ ಮಾಡಿದರು. ಆರ್‌ಸಿಬಿ ತಂಡದ ಈ ಸ್ಟಾರ್ ವೇಗದ ಬೌಲರ್‌ಗಳು ಬಿಗುವಿನ ದಾಳಿ ನಡೆಸಿದರು. ಅಲ್ಲದೆ ಈ ಮೂರು ಓವರ್‌ಗಳಲ್ಲಿ ಒಂದೇ ಒಂದು ಬೌಂಡರಿ ನೀಡಲಿಲ್ಲ. ಆದರೆ 20ನೇ ಓವರ್ ಮಾಡಲು ಬಂದ ರಸೀಕ್ ಸಲಾಂ ದಾರ್ ಬೌಲಿಂಗ್ ಮಾಡುವಾಗ ಸ್ನಾಯು ಸೆಳೆತಕ್ಕೆ ಒಳಗಾದರು. ಹೀಗಾಗಿ ಕೊನೆಯ ಓವರ್ ಕೃನಾಲ್ ಪಾಂಡ್ಯ ಮಾಡಿ 18 ರನ್ ನೀಡಿದರು. ಪರಿಣಾಮ ಗುಜರಾತ್ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 205 ರನ್ ಸೇರಿಸಿತು.
ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್ ವುಡ್, ಸುಯಶ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications