
ನವದೆಹಲಿ, ಜುಲೈ 12: ಒಂದು ತಿಂಗಳ ಹಿಂದೆ ಯೋ ಯೋ ಟೆಸ್ಟ್ ಫೇಲಾಗಿ ಇಂಗ್ಲೆಂಡ್ ಪ್ರವಾಸದ ಭಾರತ ಎ ತಂಡದಿಂದ ಹೊರಗುಳಿದಿದ್ದ ಸಂಜು ಸ್ಯಾಮ್ಸನ್ ಬುಧವಾರ ಯೋ ಯೋ ಫಿಟ್ನೆಸ್ ಟೆಸ್ಟನ್ನು ಪಾಸ್ ಮಾಡಿದ್ದರೆ. ಅದೂ ಟೆಸ್ಟ್ ನಲ್ಲಿ 17.3 ಪಾಯಿಂಟ್ ಗಳಿಸುವ ಮೂಲಕ ಅತ್ಯಂತ ಚುರುಕಿನ ಕ್ರಿಕೆಟರ್ ಆಗಿ ಗುರುತಿಸಿಕೊಂಡಿದ್ದಾರೆ.
ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ(ಎನ್ಸಿಎ)ಯಲ್ಲಿ ನಡೆದ ಫಿಟ್ನೆಸ್ ಟೆಸ್ಟ್ ನಲ್ಲಿ ಬುಧವಾರ ಪಾಲ್ಗೊಂಡ ಸ್ಯಾಮ್ಸನ್ ಸುಲಭವಾಗಿ ಟೆಸ್ಟ್ ಮುಗಿಸುವ ಮೂಲಕ ತಾನು ಫಿಟ್ಟಾಗಿರುವುದನ್ನು ಸಾಭೀತು ಪಡಿಸಿದರು.
ಕಳೆದ ಸಾರಿ ಸಂಜು ಟೆಸ್ಟ್ ನಲ್ಲಿ ಪಾಲ್ಗೊಂಡಿದ್ದಾಗ ಬರೀ 15.6 ಅಂಕಗಳನ್ನಷ್ಟೇ ಗಳಿಸಿದ್ದರು. ಟೆಸ್ಟ್ ಪಾಸಾಗಬೇಕಾದರೆ ಆಟಗಾರ ಕನಿಷ್ಠ 16.1 ಅಂಕ ಗಳಿಸಲೇಬೇಕು. ಈ ಬಾರಿಯ ಐಪಿಯಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಪ್ರತಿನಿಧಿಸಿದ್ದ ಸಂಜು 441 ರನ್ ಸಿಡಿಸಿದ್ದರು. ಆದರೆ ಯೋಯೋ ಟೆಸ್ಟ್ ನಲ್ಲಿ ಸಂಜು ಫೇಲಾಗಿದ್ದು ಕ್ರೀಡಾಭಿಮಾನಿಗಳ ಅಚ್ಚರಿಗೆ ಕಾರಣವಾಗಿತ್ತು.
ಹಿಂದಿನ ಸಾರಿ ಯೋ ಯೋ ಟೆಸ್ಟ್ ನಲ್ಲಿ ಸಂಜು ಫೇಲಾಗಿದ್ದರಿಂದ ಭಾರತ ಎ ತಂಡದಲ್ಲಿ ಸ್ಯಾಮ್ಸನ್ ಬದಲಿಗೆ ಇಶಾನ್ ಕಿಶಾನ್ ಗೆ ಅವಕಾಶ ನೀಡಲಾಗಿತ್ತು. ಆದರೀಗ ಸಂಜು ಟೆಸ್ಟ್ ಪಾಸ್ ಮಾಡಿಕೊಳ್ಳುವ ಮೂಲಕ ಸೈ ಎನಿಸಿಕೊಂಡಿದ್ದು, ಕ್ರೀಡಾಭಿಮಾನಿಗಳಿಗೂ ಖುಷಿ ತಂದಿದೆ.
ಇತ್ತೀಚೆಗೆ ಲೋಕಸಭಾ ಸದಸ್ಯ ಶಶಿ ತರೂರ್ ಅವರು ಯೋಯೋ ಟೆಸ್ಟ್ ಬಗ್ಗೆ ಪ್ರಶ್ನಿಸಿದ್ದು, ಆ ವೇಳೆ ಸ್ಯಾಮ್ಸನ್ ಅವರನ್ನೂ ಉಲ್ಲೇಖಿಸಿದ್ದರು. ಜೊತೆಗೆ ತರೂರ್, ಯೋಯೋ ಟೆಸ್ಟ್ ಪ್ರಕ್ರಿಯೆಯನ್ನು ಮರು ಪರಿಶೀಲಿಸುವಂತೆ ಬಿಸಿಸಿಐಯನ್ನು ಕೋರಿಕೊಂಡಿದ್ದಾರೆ ಕೂಡ.