ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಆಯ್ಕೆ ಸಮಿತಿ 2025ರ ಚಾಂಪಿಯನ್ಸ್ ಟ್ರೋಫಿಗೆ ಟೀಮ್ ಇಂಡಿಯಾವನ್ನು ಶೀಘ್ರದಲ್ಲೇ ಪ್ರಕಟಿಸಬಹುದು. ಜನವರಿ 12 ರ ನಂತರ, ತಂಡವನ್ನು ಘೋಷಿಸಲು ಅಂತಾರಾಷ್ಟ್ರೀ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಜನವರಿ 19 ರವರೆಗೆ ಸಮಯವನ್ನು ನೀಡಿತು. ಇದೀಗ ಟೀಮ್ ಇಂಡಿಯಾ ಶನಿವಾರ ಅಥವಾ ಭಾನುವಾರ ಘೋಷಣೆಯಾಗುವ ನಿರೀಕ್ಷೆಯಿದೆ. ಇದಕ್ಕೂ ಮುನ್ನ ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಚಾಂಪಿಯನ್ಸ್ ಟ್ರೋಫಿ ಭಾರತ ತಂಡದಲ್ಲಿ ಸ್ಥಾನ ಪಡೆಯುತ್ತಾರಾ ಎಂಬ ಪ್ರಶ್ನೆ ಹಲವು ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಮೂಡುತ್ತಿದೆ.
ಫೆಬ್ರವರಿ 19 ರಿಂದ ಪ್ರಾರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿ ಹೈಬ್ರೀಡ್ ಮಾದರಿಯಲ್ಲಿ ನಡೆಯಲಿದೆ. ಹೀಗಾಗಿ ಪಾಕಿಸ್ತಾನ ಮತ್ತು ದುಬೈನಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಭಾರತ ಮಾತ್ರ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಈ ಮೆಗಾ ಟೂರ್ನಿಗೆ ಸಿದ್ಧವಾಗುತ್ತಿರುವ ಭಾರತ ತಂಡದಿಂದ ಸಂಜು ಸ್ಯಾಮ್ಸನ್ ಹೊರಗುಳಿಯಬಹುದು. ಸಂಜು ತಂಡದಿಂದ ಹೊರಗುಳಿಯಲು ಇದೇ ಕಾರಣವಾಗಬಹುದು.

ಬಿಸಿಸಿಐ ಆಯ್ಕೆ ಸಮಿತಿಗೆ ಟೀಮ್ ಇಂಡಿಯಾ ಟಾಪ್ ಆರ್ಡರ್ ಬ್ಯಾಟರ್ಸ್ ಕಳಪೆ ಫಾರ್ಮ್ ಸಮಸ್ಯೆ ಎದುರಿಸುತ್ತಿರುವುದು ತಲೆ ನೋವಾಗಿದೆ. ಹೀಗಾಗಿ ತಂಡಕ್ಕೆ ಮಧ್ಯಮ ಕ್ರಮಾಂಕದ ಆಸರೆಯಾಗಬಲ್ಲ ಭರವಸೆ ಆಟಗಾರನನ್ನು ಬಿಸಿಸಿಐ ಆಯ್ಕೆ ಸಮಿತಿ ಹುಡುಕುತ್ತಿದೆ. ಈಗಾಗಲೇ ಬಿಸಿಸಿಐ ಆಯ್ಕೆ ಪಟ್ಟಿಯಲ್ಲಿ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ಇದ್ದಾರೆ. ಹೀಗಿರುವಾಗ ಚಾಂಪಿಯನ್ಸ್ ಟ್ರೋಫಿ ಭಾರತ ತಂಡದಿಂದ ಸಂಜು ಸ್ಯಾಮ್ಸನ್ ಹೊರಗುಳಿಯಬಹುದು. ಏಕೆಂದರೆ ಸಂಜು ದೇಶೀಯ ಕ್ರಿಕೆಟ್‌ನಲ್ಲಿ ಆಡದೆ ಇರುವುದೇ ಇದಕ್ಕೆ ಕಾರಣವಾಗಿರಬಹುದು.
ಭಾರತದಲ್ಲಿ ವಿಜಯ್ ಹಜಾರೆ ಟ್ರೋಫಿ ಟೂರ್ನಿ ಅಂತಿಮ ಘಟ್ಟ ತಲುಪಿದೆ. ಇಂದು ಕರ್ನಾಟಕ ಮತ್ತು ವಿದರ್ಭ ತಂಡಗಳು ಫೈನಲ್ ಪಂದ್ಯವನ್ನು ಆಡುತ್ತಿದೆ. ಆದರೆ ವಿಜಯ್ ಹಜಾರೆ ಟ್ರೋಫಿ ಟೂರ್ನಿ ಕೇರಳ ತಂಡದ ಪರ ಸಂಜು ಸ್ಯಾಮ್ಸನ್ ಕಣಕ್ಕಿಳಿದಿಲ್ಲ. ಈ ಟೂರ್ನಿಯಲ್ಲಿ ಸಂಜು ಆಡದಿರುವುದಕ್ಕೆ ಸ್ಪಷ್ಟ ಕಾರಣವೂ ಗೊತ್ತಿಲ್ಲ.
ಇತ್ತೀಚೆಗೆ ಟೀಮ್ ಇಂಡಿಯಾ ಜೊತೆಕೆ ಕೆಎಲ್ ರಾಹುಲ್ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದರು. ಇತ್ತ ಶ್ರೇಯಸ್ ಅಯ್ಯರ್ ವಿಜಯ್ ಹಜಾರೆ ಟ್ರೋಫಿ ಆಡುತ್ತಿದ್ದು, ಸಾಕಷ್ಟು ರನ್ ಗಳಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಬದಲಿಗೆ ಸಂಜುಗೆ ಅವಕಾಶ ಸಿಗುವುದು ತೀರಾ ಕಡಿಮೆ. ತಂಡದಲ್ಲಿ ಸಂಜು ಅವರನ್ನು ವಿಕೆಟ್ ಕೀಪಿಂಗ್ ಆಯ್ಕೆಯಾಗಿ ಪರಿಗಣಿಸಲಾಗಿದ್ದರೂ, ರಿಷಭ್ ಪಂತ್ ಅವರನ್ನು ಈಗಾಗಲೇ ತಂಡದಲ್ಲಿ ಮೊದಲ ವಿಕೆಟ್ ಕೀಪರ್ ಆಯ್ಕೆಯಾಗಿದ್ದಾರೆ. ನಂತರ ಕೆಎಲ್ ರಾಹುಲ್ ಎರಡನೇ ವಿಕೆಟ್ ಕೀಪರ್ ಆಗಿ ತಂಡದಲ್ಲಿ ಸ್ಥಾನ ಪಡೆಯಬಹುದು. ಇಲ್ಲಿಯೂ ಸಂಜು ಅವರಿಗೆ ಅವಕಾಶ ಕೈ ತಪ್ಪುವ ಸಾಧ್ಯತೆಯಿದೆ.
ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಒಂದೇ ಬಾರಿಗೆ ದೇಶೀಯ ಕ್ರಿಕೆಟ್ ಆಡುವಂತೆ ಬಿಸಿಸಿಐ ಸೂಚಿಸಿತ್ತು. ಆದರೆ ಈ ಇಬ್ಬರೂ ಆಟಗಾರರು ದೇಶೀಯ ಕ್ರಿಕೆಟ್‌ನಲ್ಲಿ ಭಾಗವಹಿಸಿರಲಿಲ್ಲ. ನಂತರ ಈ ಇಬ್ಬರೂ ಆಟಗಾರರನ್ನು ತಂಡದಿಂದ ಕೈಬಿಡಲಾಯಿತು. ಇದಲ್ಲದೆ, ಅವರನ್ನು ಕೇಂದ್ರ ಒಪ್ಪಂದದಿಂದಲೂ ಕೈಬಿಡಬೇಕಾಯಿತು. ವರದಿಗಳ ಪ್ರಕಾರ, ದೇಶೀಯ ಕ್ರಿಕೆಟ್‌ನಲ್ಲಿ ಭಾಗವಹಿಸದಿದ್ದಕ್ಕಾಗಿ ಬಿಸಿಸಿಐ ಸಂಜು ವಿರುದ್ಧ ಅಸಮಾಧಾನಗೊಂಡಿದೆ. ಈ ಕಾರಣದಿಂದ ಚಾಂಪಿಯನ್ಸ್ ಟ್ರೋಫಿಗಾಗಿ ಅವರನ್ನು ನಿರ್ಲಕ್ಷಿಸಬಹುದು.