ಒಂದೆರಡು ಪಂದ್ಯ ಚೆನ್ನಾಗಿ ಆಡ್ತಾನೆ ನಂತರ ಫ್ಲಾಪ್ ಆಗ್ತಾನೆ; ಇದೇ ಭಾರತದ ದೊಡ್ಡ ಸಮಸ್ಯೆ: ಕಪಿಲ್ ದೇವ್!

ಸದ್ಯ ಟೀಮ್ ಇಂಡಿಯಾ ಇಂಡಿಯನ್ ಪ್ರೀಮಿಯರ್ ಲೀಗ್ ಹದಿನೈದನೇ ಆವೃತ್ತಿ ಮುಕ್ತಾಯವಾದ ನಂತರ ಭಾರತ ಪ್ರವಾಸ ಕೈಗೊಂಡಿರುವ ದಕ್ಷಿಣ ಆಫ್ರಿಕಾ ವಿರುದ್ಧ ಐದು ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಸೆಣಸಾಟ ನಡೆಸುತ್ತಿದ್ದು, ಮೊದಲ ಮೂರು ಪಂದ್ಯಗಳು ಮುಕ್ತಾಯವಾದ ನಂತರ ಸರಣಿಯಲ್ಲಿ 1-2 ಅಂತರದ ಹಿನ್ನಡೆಯಲ್ಲಿದೆ. ಈ ಸರಣಿಯಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ ನಾಯಕತ್ವದಲ್ಲಿ ಕಣಕ್ಕಿಳಿದ ಭಾರತ ತಂಡ ಮೊದಲೆರಡು ಪಂದ್ಯಗಳಲ್ಲಿ ಸೋಲುಂಡು ಮೂರನೇ ಪಂದ್ಯದಲ್ಲಿ ಗೆದ್ದು ಸರಣಿ ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಇನ್ನು ನಾಯಕತ್ವ ಸ್ವೀಕರಿಸಿದ ನಂತರ ರಿಷಭ್ ಪಂತ್ ಬ್ಯಾಟಿಂಗ್ ಪ್ರದರ್ಶನ ನೆಲಕಚ್ಚಿದ್ದು, ಮೂರೂ ಪಂದ್ಯಗಳಲ್ಲಿಯೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಪ್ರಥಮ ಪಂದ್ಯದಲ್ಲಿ 21 ರನ್, ದ್ವಿತೀಯ ಪಂದ್ಯದಲ್ಲಿ 5 ರನ್ ಮತ್ತು ತೃತೀಯ ಪಂದ್ಯದಲ್ಲಿ 6 ರನ್ ಕಲೆಹಾಕಿರುವ ಪಂತ್ ನಿರಾಸೆ ಮೂಡಿಸಿದ್ದಾರೆ. ರಿಷಭ್ ಪಂತ್ ಅವರ ಇದೇ ರೀತಿಯ ಪ್ರದರ್ಶನ ನೀಡಿದರೆ ಮುಂಬರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಗತಿ ಏನು ಎಂಬ ಚರ್ಚೆಗಳು ಈಗಾಗಲೇ ಆರಂಭಗೊಂಡಿವೆ.
ಇದೀಗ ಇದೇ ವಿಷಯದ ಕುರಿತಾಗಿ ಮಾತನಾಡಿರುವ ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟ ದಿಗ್ಗಜ ಕ್ರಿಕೆಟಿಗ ಕಪಿಲ್ ದೇವ್ ಟೀಮ್ ಇಂಡಿಯಾ ಎದುರಿಸುತ್ತಿರುವ ಒಂದು ದೊಡ್ಡ ಸಮಸ್ಯೆಯನ್ನು ಬಿಚ್ಚಿಟ್ಟಿದ್ದಾರೆ. ಕಪಿಲ್ ದೇವ್ ಇತ್ತೀಚೆಗಷ್ಟೆ ನಡೆದ ಅನ್‌ಕಟ್ ಎಂಬ ಟಾಕ್ ಷೋನಲ್ಲಿ ಈ ಕೆಳಕಂಟಂತೆ ಹೇಳಿಕೆಗಳನ್ನು ನೀಡಿದ್ದಾರೆ.

ಭಾರತಕ್ಕಿದೆ ವಿಕೆಟ್ ಕೀಪರ್ ಬ್ಯಾಟರ್‌ಗಳ ಸಮಸ್ಯೆ
ಕಪಿಲ್ ದೇವ್ ಟೀಮ್ ಇಂಡಿಯಾ ಸದ್ಯ ಉತ್ತಮ ವಿಕೆಟ್ ಕೀಪರ್ ಬ್ಯಾಟರ್‌ಗಳ ಸಮಸ್ಯೆಯನ್ನು ಎದುರಿಸುತ್ತಿದೆ ಎಂದಿದ್ದಾರೆ. ಸದ್ಯ ಟೀಮ್ ಇಂಡಿಯಾಗೆ ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ರಿಷಭ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಈ ನಾಲ್ವರು ವಿಕೆಟ್ ಕೀಪರ್‌ಗಳನ್ನು ಆರಿಸಬಹುದಾದ ಆಯ್ಕೆ ಇದೆ. ಅದರಲ್ಲಿ ಮೂವರು ಸದ್ಯ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಭಾಗವಹಿಸಿದ್ದರೆ, ಸಂಜು ಸ್ಯಾಮ್ಸನ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ವಿಕೆಟ್ ಕೀಪಿಂಗ್ ವಿಚಾರದಲ್ಲಿ ವೃದ್ಧಿಮಾನ್ ಸಹಾ ಉತ್ತಮ
ಇನ್ನು ಈ ನಾಲ್ವರ ಕುರಿತು ಮಾತನಾಡಿರುವ ಕಪಿಲ್ ದೇವ್ ಈ ನಾಲ್ವರೂ ಸಹ ಬಹುತೇಕ ಒಂದೇ ರೀತಿಯ ಆಟಗಾರರು ಎಂದಿದ್ದಾರೆ. ಈ ನಾಲ್ವರೂ ಸಹ ಒಂದು ಪಂದ್ಯ ಗೆಲ್ಲಿಸಬಲ್ಲಂತಹ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ, ಆದರೆ ವಿಕೆಟ್ ಕೀಪಿಂಗ್ ವಿಚಾರದಲ್ಲಿ ಈ ನಾಲ್ವರಿಗಿಂತ ವೃದ್ಧಿಮಾನ್ ಸಹಾ ಎಲ್ಲರಿಗಿಂತ ಉತ್ತಮ ಎಂದು ಕಪಿಲ್ ದೇವ್ ಹೇಳಿಕೆ ನೀಡಿದ್ದಾರೆ. ಈ ಮೂಲಕ ವಿಕೆಟ್ ಕೀಪಿಂಗ್ ಬ್ಯಾಟಿಂಗ್ ಎರಡನ್ನೂ ಪರಿಪೂರ್ಣವಾಗಿ, ಯಶಸ್ವಿಯಾಗಿ ನಿರ್ವಹಿಸಬಲ್ಲ ಆಟಗಾರರಿಲ್ಲ ಎಂಬ ಸಮಸ್ಯೆಯನ್ನು ಕಪಿಲ್ ದೇವ್ ಬಿಚ್ಚಿಟ್ಟಿದ್ದಾರೆ.

ಈತನ ಕುರಿತು ಬೇಸರ ಹೊರಹಾಕಿದ ಕಪಿಲ್ ದೇವ್
ಇನ್ನು ಕಪಿಲ್ ದೇವ್ ಸಂಜು ಸ್ಯಾಮ್ಸನ್ ಪ್ರದರ್ಶನದ ಕುರಿತು ಬೇಸರ ಹೊರಹಾಕಿದ್ದಾರೆ. 'ಸಂಜು ಸ್ಯಾಮ್ಸನ್ ಕುರಿತು ನಾನು ಭಾರೀ ನಿರಾಸೆಗೊಂಡಿದ್ದೇನೆ. ಆತ ಪ್ರತಿಭಾವಂತ ಆಟಗಾರ, ಆದರೆ ಒಂದೆರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ನಂತರದಲ್ಲಿ ಏನನ್ನೂ ಮಾಡುವುದಿಲ್ಲ. ಸದ್ಯ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ವಿಕೆಟ್ ಕೀಪರ್ ಎಂದರೆ ಅದು ದಿನೇಶ್ ಕಾರ್ತಿಕ್. ಇಶಾನ್ ಕಿಶನ್ ಒತ್ತಡದಲ್ಲಿ ಕಣಕ್ಕಿಳಿದಿದ್ದಾರೆ ಎನಿಸುತ್ತದೆ, ರಿಷಭ್ ಪಂತ್ ಇನ್ನೂ ಹೆಚ್ಚಿನ ಅನುಭವ ಪಡೆದುಕೊಳ್ಳಬೇಕಿದೆ. ದಿನೇಶ್ ಕಾರ್ತಿಕ್ ಎಂಎಸ್ ಧೋನಿಗೂ ಮುಂಚೆ ತಂಡ ಸೇರಿ ಇಂದಿಗೂ ಉಳಿದುಕೊಂಡಿರುವ ಆಟಗಾರ, ಎಷ್ಟು ಹೆಚ್ಚು ಹೇಳಿದರ ಕಡಿಮೆಯೇ' ಎಂದು ಕಪಿಲ್ ದೇವ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications