
ನವದೆಹಲಿ, ಅಕ್ಟೋಬರ್ 4: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಇಂದೋರ್ ನಿಂದ ವಿಶಾಖಪಟ್ನಂಗೆ ಸ್ಥಳಾಂತರಗೊಂಡಿದೆ. ಬಿಸಿಸಿಐ ಈ ವಿಚಾರವನ್ನು ಖಾತರಿಪಡಿಸಿದೆ. ಅಕ್ಟೋಬರ್ 24ರಂದು ಈ ಪಂದ್ಯ ನಡೆಯಲಿದೆ.
ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್ ತಂಡ ಭಾರತದೆದುರು ಆಡಲಿದ್ದ ದ್ವಿತೀಯ ಏಕದಿನ ಪಂದ್ಯವನ್ನು ಸ್ಥಳಾಂತರಿಸಿದ್ದೇಕೆ ಎಂಬುದನ್ನು ಬಿಸಿಸಿಐ ತಿಳಿಸಿಲ್ಲ. ಆದರೆ ಮಾಹಿತಿಯೊಂದರ ಪ್ರಕಾರ ಕಾಂಪ್ಲಿಮೆಂಟರಿ ಟಿಕೆಟ್ ಹಂಚಿಕೆ ವಿಚಾರವಾಗಿ ಬಿಸಿಸಿಐ ಮತ್ತು ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ನಡುವಿನ ಮನಸ್ಥಾಪ ಇದಕ್ಕೆ ಕಾರಣ ಎನ್ನಲಾಗಿದೆ.
ಹೀಗಾಗಿ ಇಂದೋರ್ ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಪಂದ್ಯ ಬುಧವಾರ (ಅಕ್ಟೋಬರ್ 24) ಡಾ. ವೈಎಸ್ ರಾಜಶೇಖರ್ ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಬಿಸಿಸಿಐ ಟಿಕೆಟ್ ಹಂಚಿಕೆ ನಿಯಮದ ಪ್ರಕಾರ ಸ್ಟೇಡಿಯಂ ಸಾಮರ್ಥ್ಯದ ಶೇ. 100ರಲ್ಲಿ ಶೇ.90 ಸಾರ್ವಜನಿಕರಿಗೆ, ಉಳಿದ 10 ಶೇ. ಕಾಂಪ್ಲಿಮೆಂಟರಿಯಾಗಿ ವಿತರಣೆಯಾಗಬೇಕು.