ಮುಲ್ತಾನ್: ಭರವಸೆಯ ಆಟಗಾರ ಅಬ್ದುಲ್ಲಾ ಶಫೀಕ್ ಮತ್ತು ಶಾನ್ ಮಸೂದ್ ಅವರು ಬಾರಿಸಿದ ಶತಕದ ನೆರವಿನಿಂದ ಪಾಕಿಸ್ತಾನ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ದಿನದ ಗೌರವವನ್ನು ತನ್ನದಾಗಿಸಿಕೊಂಡಿದೆ.
ಸೋಮವಾರದಿಂದ ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕ್ ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್‌ಗೆ 328 ರನ್‌ಗಳನ್ನು ಕಲೆ ಹಾಕಿದೆ. ಸೌದ್ ಶಕೀಲ್ (ಅಜೇಯ 35) ಹಾಗೂ ನಸೀಮ್ ಶಾ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಪಾಕ್ ತಂಡದ ಪರ ಸ್ಯಾಮ್ ಅಯೂಬ್ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಇವರು ಕೇವಲ 10 ಎಸೆತಗಳಲ್ಲಿ 4 ರನ್ ಸಿಡಿಸಿದರು. ಪಾಕ್ ಎಂಟು ರನ್ ಗಳಾಗಿದ್ದಾಗ ಮೊದಲ ವಿಕೆಟ್ ಕಳೆದುಕೊಂಡಿತು.
ಅಬ್ದುಲ್ಲಾ ಶಫೀಕ್ ಮತ್ತು ಶಾನ್ ಮಸೂದ್ ಎರಡನೇ ವಿಕೆಟ್‌ಗೆ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಇವರು 338 ಎಸೆತಗಳನ್ನು ಎದುರಿಸಿ 253 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಶ್ರಮಿಸಿದರು. ಅಬ್ದುಲ್ಲಾ ಶಫೀಕ್ 184 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್ ಸಹಾಯದಿಂದ 102 ರನ್ ಬಾರಿಸಿ ಅಬ್ಬರಿಸಿದರು. ಇನ್ನು ನಾಯಕ ಶಾನ್ ಮಸೂದ್ 13 ಬೌಂಡರಿ, 2 ಸಿಕ್ಸರ್ ನೆರವಿನಿಂದ 151 ರನ್ ಸಿಡಿಸಿ ಅಬ್ಬರಿಸಿದರು. ಪಾಕ್ ತಂಡದ ಪರ ಸ್ಟಾರ್ ಆಟಗಾರ ಬಾಬರ್ ಅಜಮ್ 30 ರನ್ ಬಾರಿಸಿ ನಿರಾಸೆ ಅನುಭವಿಸಿದರು.
ಶಾನ್ ಮಸೂದ್ ನಾಯಕರಾಗಿ ಅವರು ತಮ್ಮ ವೃತ್ತಿಜೀವನದ ಮೊದಲ ಟೆಸ್ಟ್ ಶತಕವನ್ನು ಗಳಿಸಿದ್ದಾರೆ. ಟೆಸ್ಟ್ ನಾಯಕನಾಗಿ ಪಾಕಿಸ್ತಾನದ ಕೊನೆಯ ಟೆಸ್ಟ್ ಶತಕವನ್ನು ಬಾಬರ್ ಅಜಮ್ ಸಿಡಿಸಿದ್ದರು. ಡಿಸೆಂಬರ್ 2022 ರಲ್ಲಿ ನ್ಯೂಜಿಲೆಂಡ್ ವಿರುದ್ಧ 161 ರನ್‌ಗಳ ಅಮೋಘ ಇನಿಂಗ್ಸ್ ಕಟ್ಟಿದ್ದರು. ಶಾನ್ ಮಸೂದ್ ಟೆಸ್ಟ್‌ನಲ್ಲಿ ಎರಡನೇ ಅತಿ ವೇಗದ ಶತಕ ಬಾರಿಸಿದ ಪಾಕಿಸ್ತಾನದ ನಾಯಕ ಎನಿಸಿಕೊಂಡಿದ್ದಾರೆ. ಅವರು 102 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೊದಲು ಮಿಸ್ಬಾ ಉಲ್ ಹಕ್ 2014ರಲ್ಲಿ 56 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಶಾನ್ ಮಸೂದ್ ಶತಕ ಬಾರಿಸಿದ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ 2000 ರನ್ ಪೂರೈಸಿದರು.

ಶಾನ್ ಮಸೂದ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 21 ಪಂದ್ಯಗಳ 37 ಇನ್ನಿಂಗ್ಸ್‌ಗಳಲ್ಲಿ 1220 ರನ್ ಗಳಿಸಿದ್ದಾರೆ. ಇವರು ಯಶಸ್ವಿ ಜೈಸ್ವಾಲ್ ಅವರನ್ನು ಹಿಂದಿಕ್ಕಿದ್ದಾರೆ.
ಪಾಕಿಸ್ತಾನದ ನಾಯಕ ಶಾನ್ ಮಸೂದ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅಬ್ಬರಿಸಿದರು. ಶಾನ್ ಮಸೂದ್ ಏಕದಿನ ಶೈಲಿಯಲ್ಲಿ ಬ್ಯಾಟಿಂಗ್ ನಡೆಸಿದ ಶಾನ್ ಕೇವ 43 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ವೇಗದ ಅರ್ಧಶತಕವಾಗಿದೆ.