ಶಾಹಿದ್ ಅಫ್ರಿದಿ ಮಗಳ ಜೊತೆ ಶಾಹೀನ್ ಅಫ್ರಿದಿ ಮದುವೆ: ಪ್ರಮುಖ ಕ್ರಿಕೆಟಿಗರು ಭಾಗಿ

ಪಾಕಿಸ್ತಾನದ ಸ್ಟಾರ್ ಬೌಲರ್ ಶಾಹೀನ್ ಅಫ್ರಿದಿ ಫೆಬ್ರವರಿ 3ರಂದು ಶುಕ್ರವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪಾಕಿಸ್ತಾನ ತಂಡದ ಮಾಜಿ ನಾಯಕ, ಸ್ಟಾರ್ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಮಗಳು ಅನ್ಶಾ ಅವರನ್ನು ಮದುವೆಯಾದರು.
ಸ್ಟಾರ್ ಕ್ರಿಕೆಟರ್ ಮದುವೆಯಲ್ಲಿ ಪಾಕಿಸ್ತಾನ ತಂಡದ ಪ್ರಮುಖ ಆಟಗಾರರು ಪಾಲ್ಗೊಂಡು ಹೊಸ ಜೋಡಿಗೆ ಮದುವೆಯ ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ. ಕರಾಚಿಯಲ್ಲಿ ಈ ಅದ್ದೂರಿ ಮದುವೆ ಕಾರ್ಯಕ್ರಮ ನಡೆಯಿತು.
ಪಾಕಿಸ್ತಾನದ ತಂಡದ ನಾಯಕ ಬಾಬರ್ ಅಜಮ್, ಸರ್ಫರಾಜ್ ಖಾನ್, ಶಾದಾಬ್ ಖಾನ್, ನಸೀಮ್ ಶಾ ಸೇರಿದಂತೆ ಹಲವು ಆಟಗಾರರು ಮದುವೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. 2021ರಲ್ಲಿ ಅನ್ಶಾ ಹೊತೆ ಶಾಹೀನ್ ಅಫ್ರಿದಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ನವೆಂಬರ್ 2022ರಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ವಿಶ್ವಕಪ್ ಫೈನಲ್ ಪಂದ್ಯದ ಬಳಿಕ ಶಾಹೀನ್ ಅಫ್ರಿದಿ ಕ್ರಿಕೆಟ್‌ನಿಂದ ದೂರವಿದ್ದಾರೆ. ಫೈನಲ್ ಪಂದ್ಯದ ವೇಳೆ ಅವರು ಮೊಣಕಾಲು ಗಾಯಕ್ಕೆ ತುತ್ತಾಗಿದ್ದರು.
ಶುಕ್ರವಾರ ಸಂಜೆ, ಪಾಕಿಸ್ತಾನ ಸೂಪರ್ ಲೀಗ್ ಫ್ರಾಂಚೈಸಿಗಳಲ್ಲಿ ಒಂದಾದ ಲಾಹೋರ್ ಖಲಂದರ್ಸ್ ಶಾಹೀನ್ ಅಫ್ರಿದಿ ಮದುವೆಯ ಚಿತ್ರಗಳು ಮತ್ತು ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಶಾಹೀನ್ ಅಫ್ರಿದಿ ಪಿಎಸ್‌ಎಲ್‌ನಲ್ಲಿ ಲಾಹೋರ್ ಖಲಂದರ್ಸ್ ಪರವಾಗಿ ಆಡುತ್ತಾರೆ.
ಅಭಿನಂದನೆ ತಿಳಿಸಿದ ಮಾವ ಶಾಹಿದ್ ಅಫ್ರಿದಿ
ಮಗಳನ್ನು ಶಾಹೀನ್ ಅಫ್ರಿದಿಗೆ ಮದುವೆ ಮಾಡಿಕೊಟ್ಟ ಬಳಿಕ ಶಾಹೀದ್ ಅಫ್ರಿದಿ ಜೋಡಿ ಅಭಿನಂದನೆ ತಿಳಿಸಿದ್ದಾರೆ. "ಮಗಳು ನಿಮ್ಮ ಉದ್ಯಾನದ ಅತ್ಯಂತ ಸುಂದರವಾದ ಹೂವು, ದೇವರ ಆಶೀರ್ವಾದಿಂದ ಅವು ಅರಳುತ್ತವೆ. ಮಗಳೆಂದರೆ ನೀವು ನಗುವ, ಕನಸು ಕಾಣುವ ಮತ್ತು ನಿಮ್ಮ ಹೃದಯದಿಂದ ಪ್ರೀತಿಸುವ ವ್ಯಕ್ತಿ. ಅಪ್ಪನಾಗಿ ನನ್ನ ಮಗಳನ್ನು ನಿಖಾದಲ್ಲಿ ಶಾಹೀನ್ ಅಫ್ರಿದಿಯವರಿಗೆ ನೀಡಿದ್ದೇನೆ, ಅವರಿಬ್ಬರಿಗೆ ಅಭಿನಂದನೆಗಳು" ಎಂದು ಟ್ವಿಟರ್ ನಲ್ಲಿ ಬರೆದಿದ್ದಾರೆ.

ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡಲು ಸಿದ್ಧತೆ
2022ರ ಟಿ20 ವಿಶ್ವಕಪ್‌ನಲ್ಲಿ ಮತ್ತೆ ಮೊಣಕಾಲಿನ ಗಾಯಕ್ಕೆ ತುತ್ತಾದ ಬಳಿಕ ಶಾಹೀನ್ ಅಫ್ರಿದಿ ಸಂಪೂರ್ಣವಾಗಿ ವಿಶ್ರಾಂತಿಯಲ್ಲಿದ್ದರು. ಫೆಬ್ರವರಿಯಲ್ಲಿ ಆರಂಭವಾಗಲಿರುವ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ವಾಪಸಾಗಲು ಅವರು ಕಠಿಣ ಅಭ್ಯಾಸ ಮಾಡುತ್ತಿದ್ದಾರೆ.
ಅತಿ ಶೀಘ್ರದಲ್ಲೇ ಅವರು ಪಾಕಿಸ್ತಾನ ತಂಡಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ. ಏಕದಿನ ವಿಶ್ವಕಪ್ ದೃಷ್ಟಿಯಿಂದ ಪಾಕಿಸ್ತಾನಕ್ಕೆ ಶಾಹೀನ್ ಅಫ್ರಿದಿ ಫಿಟ್ನೆಸ್ ಸಾಕಷ್ಟು ಮುಖ್ಯವಾಗಿದೆ.
ಪಾಕಿಸ್ತಾನದ ಪರವಾಗಿ ಶಾಹೀನ್ ಅಫ್ರಿದಿ ಇದುವರೆಗೂ 25 ಟೆಸ್ಟ್, 32 ಏಕದಿನ ಮತ್ತು 47 ಟಿ20 ಪಂದ್ಯಗಳನ್ನಾಡಿದ್ದಾರೆ. ಮೂರು ಮಾದರಿಯಲ್ಲಿ ಒಟ್ಟು 219 ಅಂತಾರಾಷ್ಟ್ರೀಯ ವಿಕೆಟ್ ಪಡೆದು ಮಿಂಚಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications