ಪಾಕಿಸ್ತಾನ ತಂಡವನ್ನು ಬಲಪಡಿಸಲು ಬಿಸಿಸಿಐ ತಂತ್ರ ಅನುಸರಿಸಲು ಮುಂದಾದ ಶಾಹಿದ್ ಅಫ್ರಿದಿ!

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮಧ್ಯಂತರ ಆಯ್ಕೆ ಸಮಿತಿಯ ಅಧ್ಯಕ್ಷ ಶಾಹಿದ್ ಅಫ್ರಿದಿ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಮತ್ತಷ್ಟು ಬಲಪಡಿಸಲು, ಪಾಕಿಸ್ತಾನಕ್ಕಾಗಿ ಎರಡು ತಂಡಗಳನ್ನು ರಚಿಸುವುದಾಗಿ ತಿಳಿಸಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.
"ಪಾಕಿಸ್ತಾನ ತಂಡದ ಬೆಂಚ್ ಶಕ್ತಿಯನ್ನು ಹೆಚ್ಚಿಸಲು ನನ್ನ ಅಧಿಕಾರಾವಧಿ ಮುಗಿಯುವ ಮೊದಲು ಪಾಕಿಸ್ತಾನಕ್ಕಾಗಿ ಎರಡು ತಂಡಗಳನ್ನು ರಚಿಸುವ ಉದ್ದೇಶ ಹೊಂದಿದ್ದೇನೆ" ಎಂದು ಶಾಹಿದ್ ಅಫ್ರಿದಿ ತಿಳಿಸಿದ್ದಾರೆ.
ತಂಡದ ಪ್ರಮುಖ ವೇಗಿಗಳಾದ ಶಾಹೀನ್ ಅಫ್ರಿದಿ ಮತ್ತು ಹ್ಯಾರಿಸ್ ರೌಫ್ ಅನುಪಸ್ಥಿತಿಯಲ್ಲಿ ಪಾಕಿಸ್ತಾನ ವೇಗಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು 0-3 ಅಂತರದಲ್ಲಿ ಸೋತರು. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೂಡ ಅವರ ಕಳಪೆ ಪ್ರದರ್ಶನ ಮುಂದುವರೆದಿದೆ.
ಪಾಕಿಸ್ತಾನ ತಂಡದ ಆಟಗಾರರು ಮತ್ತು ಪಿಸಿಬಿ ಅಧಿಕಾರಿಗಳ ನಡುವೆ ಸಂವಹನದ ಕೊರತೆಯಿದೆ ಎಂದು ಮನಗಂಡಿರುವ ಶಾಹಿದ್ ಅಫ್ರಿದಿ, ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. "ಈ ಹಿಂದೆ ಸಂವಹನದ ಕೊರತೆ ಇತ್ತು ಎಂದು ನನಗೆ ಅನಿಸುತ್ತದೆ. ಆಟಗಾರರ ಜೊತೆ ಪ್ರತ್ಯೇಕವಾಗಿ ಮಾತನಾಡುವ ಮೂಲಕ ಅವರ ಸಮಸ್ಯೆಗಳ ಬಗ್ಗೆ ತಿಳಿದುಕೊಂಡಿದ್ದೇನೆ" ಎಂದು ಹೇಳಿದರು.

ಬಿಸಿಸಿಐ ತಂತ್ರ ಅನುಸರಿಸಲು ಮುಂದಾದ ಅಫ್ರಿದಿ
ಈ ಮೊದಲು ಬಿಸಿಸಿಐ ಕೂಡ ಎರಡು ತಂಡಗಳನ್ನು ಮಾಡುವ ಪ್ರಯೋಗಗಳನ್ನು ನಡೆಸಿ ಅದರಲ್ಲಿ ಯಶಸ್ವಿಯಾಗಿದೆ. ಒಂದೇ ಬಾರಿ ಭಾರತದ ಎರಡು ತಂಡಗಳು ವಿಭಿನ್ನ ಸರಣಿಯಲ್ಲಿ ಆಡಿ ಯಶಸ್ಸು ಕಂಡಿವೆ.
ಅಲ್ಲದೆ ಈಗಲೂ ಕೂಡ ಬಿಸಿಸಿಐ ಏಕದಿನ ಮತ್ತು ಟಿ20 ಮಾದರಿಗೆ ಎರಡು ವಿಭಿನ್ನ ತಂಡಗಳನ್ನು ಕಣಕ್ಕಿಳಿಸುತ್ತಿದೆ. ಇದರಿಂದ ಹೊಸ ಆಟಗಾರರಿಗೆ ಅವಕಾಶ ನೀಡಿದಂತಾಗುತ್ತದೆ ಮತ್ತು ತಂಡದ ಬೆಂಚ್ ಬಲವನ್ನು ಹೆಚ್ಚಿಸಿದಂತಾಗುತ್ತದೆ. ಶಾಹಿದ್ ಅಫ್ರಿದಿ ಕೂಡ ಈಗ ಬಿಸಿಸಿಐ ಹಾದಿಯಲ್ಲಿ ನಡೆಯಲು ನಿರ್ಧರಿಸಿದ್ದು, ಹಲವು ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ಯೋಜನೆಯಲ್ಲಿದ್ದಾರೆ.
Ind vs SL : ಮೊದಲ ಟಿ20 ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಲಿದೆ ಟೀಂ ಇಂಡಿಯಾ ಯುವಪಡೆ

ಏಕದಿನ ತಂಡದ ಆಯ್ಕೆಗೆ ಸಮರ್ಥನೆ
ಟೆಸ್ಟ್ ಸರಣಿಯ ಬಳಿಕ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ನಡೆಯಲಿದೆ. ಏಕದಿನ ತಂಡಕ್ಕೆ ಫಖರ್ ಜಮಾನ್ ಮತ್ತು ಹ್ಯಾರಿಸ್ ಸೊಹೈಲ್‌ರನ್ನು ಆಯ್ಕೆ ಮಾಡಿರುವ ಕ್ರಮವನ್ನು ಶಾಹಿದ್ ಅಫ್ರಿದಿ ಸಮರ್ಥಿಸಿಕೊಂಡಿದ್ದಾರೆ.
"ನಾನು ನೇರವಾಗಿ ಹ್ಯಾರಿಸ್ ಮತ್ತು ಫಖರ್ ಅವರೊಂದಿಗೆ ಮಾತನಾಡಿದೆ ಮತ್ತು ಅವರ ಪರೀಕ್ಷೆಗಳನ್ನು ತೆಗೆದುಕೊಂಡೆ. ಆಟಗಾರರು ಮತ್ತು ಆಯ್ಕೆ ಸಮಿತಿಯ ನಡುವೆ ನೇರ ಸಂವಹನ ಇರಬೇಕು ಎಂದು ನಾನು ನಂಬುತ್ತೇನೆ." ಎಂದು ಹೇಳಿದ್ದಾರೆ.

ಬಾಬರ್ ಪಾಕ್ ತಂಡದ ಆಧಾರ ಎಂದ ಅಫ್ರಿದಿ
ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 137 ರನ್ ಮತ್ತು 15 ಓವರ್‌ಗಳ ಮುನ್ನಡೆಯಲ್ಲಿದ್ದಾಗ ಎರಡನೇ ಇನ್ನಿಂಗ್ಸ್ ಅನ್ನು ಡಿಕ್ಲೇರ್ ಮಾಡುವ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅವರ ನಿರ್ಧಾರವನ್ನು ಶಾಹಿದ್ ಆಫ್ರಿದಿ ಶ್ಲಾಘಿಸಿದ್ದಾರೆ. ನ್ಯೂಜಿಲೆಂಡ್ 7.3 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 61 ರನ್ ಗಳಿಸಿದ್ದಾಗ ಬ್ಯಾಡ್ ಲೈಟ್ ಕಾರಣ ಆಟವನ್ನು ನಿಲ್ಲಿಸಲಾಯಿತು, ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಬಾಬರ್ ಅಜಮ್ ಪಾಕಿಸ್ತಾನ ತಂಡದ ಬೆನ್ನೆಲುಬು ಅವರ ಬೆಂಬಲಕ್ಕೆ ನಾವಿದ್ದೇವೆ. ಅವರ ನಿರ್ಧಾರ ಉತ್ತಮವಾಗಿದೆ ಎಂದು ಅಫ್ರಿದಿ ಹೇಳಿದ್ದಾರೆ.
ಜನವರಿ 2ರಿಂದ ಸೋಮವಾರ ಕರಾಚಿಯಲ್ಲಿ ಆರಂಭವಾಗಲಿರುವ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಬೌನ್ಸಿ ಟ್ರ್ಯಾಕ್ ಸಿದ್ಧಪಡಿಸುವ ಸಾಧ್ಯತೆಯ ಬಗ್ಗೆಯೂ ಆಫ್ರಿದಿ ಸುಳಿವು ನೀಡಿದ್ದಾರೆ.
ಪಿಸಿಬಿಯ ಆಯ್ಕೆ ಸಮಿತಿಯಲ್ಲಿ ಅಬ್ದುಲ್ ರಝಾಕ್ ಮತ್ತು ರಾವ್ ಇಫ್ತಿಕರ್ ಅಂಜುಮ್ ಇದ್ದು, ಹರೂನ್ ರಶೀದ್ ಸಂಚಾಲಕರಾಗಿದ್ದಾರೆ. ಪಿಸಿಬಿ ಅಧ್ಯಕ್ಷರಾಗಿದ್ದ ರಮೀಝ್ ರಾಜಾರನ್ನು ವಜಾಗೊಳಿಸಿ, ನಜಮ್ ಸೇಥಿಯನ್ನು ಅಧ್ಯಕ್ಷರನ್ನಾಗಿ ಮಾಡಿದ ಬಳಿಕ, ಶಾಹಿದಿ ಅಫ್ರಿದಿಯನ್ನು ಮಧ್ಯಂತರ ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications