ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಬೌಲರ್ ಶಮರ್ ಜೋಸೆಫ್ ಅಬ್ಬರ ತವರಿನಲ್ಲಿ ಜೋರಾಗಿದೆ. ಗುರುವಾರದಿಂದ ಆರಂಭವಾದ ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಶಮರ್ ಜೋಸೆಫ್ ಆರ್ಭಟಿಸಿದ್ದಾರೆ. ಈ ಮೂಲಕ ತವರಿನಲ್ಲಿ ಅಮೋಘ ಆರಂಭವನ್ನು ಮಾಡಿದ್ದಾರೆ.
ಶಮರ್ ಜೋಸೆಫ್ ಈ ಮೊದಲೇ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಆದರೆ ಆಗ ತಂಡ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಸರಣಿಯನ್ನು ಆಡಿತ್ತು. ಶಮರ್ ಜೋಸೆಫ್‌ಗೆ ತವರಿನಲ್ಲಿ ಆಡುವ ಅವಕಾಶ ಲಭಿಸಿರಲಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಶಮರ್ ಜೋಸೆಫ್ ಅವಕಾಶ ಪಡೆದು ಅಬ್ಬರಿಸಿದರು.

ಗುರುವಾರದಿಂದ ಆರಂಭವಾದ ಎರಡನೇ ಟೆಸ್ಟ್ ಪಂದ್ಯದಲ್ಲಿ ಶಮರ್ ಜೋಸೆಫ್ ಅಮೋಘ ವೇಗದ ದಾಳಿಯನ್ನು ಸಂಘಟಿಸಿದರು. ಇವರ ಬಿರುಸಿನ ದಾಳಿಗೆ ಬ್ಯಾಟ್ ಬೀಸಲು ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳು ಹೈರಾಣಾದರು. ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಶಮರ್ ಜೋಸೆಫ್ ವೇಗದ ದಾಳಿ ನಡೆಸಿ ಮಿಂಚಿದರು.
ಶಮರ್ ಜೋಸೆಫ್ ತವರಿನಲ್ಲಿ ತಮ್ಮ ಮೊದಲ ವಿಕೆಟ್ ರೂಪದಲ್ಲಿ ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಐಡೆನ್ ಮಾರ್ಕ್ರಮ್ ಅವರ ಬಲಿ ಪಡೆದರು. ಮೊದಲು ಮಾರ್ಕ್ರಮ್ ಅವರನ್ನು ತಮ್ಮ ಬೌಲ್ ಆಡುವಂತೆ ಸೆಟ್ ಮಾಡಿದರು. ಪದೆ ಪದೇ ಆಫ್ ಸ್ಟಂಪ್ ಆಚೆ ಚೆಂಡನ್ನು ಎಸೆಯುತ್ತಾ ಸಾಗಿದರು. ಬಳಿಕ ಇನಿಂಗ್ಸ್‌ನ 11ನೇ ಓವರ್ ಮೂರನೇ ಎಸೆತದಲ್ಲಿ ಚೆಂಡು ಅದೇ ಲೈನ್‌ನಲ್ಲಿ ಮಾಡಿದರು. ಆದರೆ ಆಂಗಲ್ ಚೇಂಜ್ ಆಗಿತ್ತು.
ಮಾರ್ಕ್ರಮ್, ಶಮರ್ ಜೋಸೆಫ್ ಎಸೆತ ಆಫ್ ಸ್ಟಂಪ್ ಆಚೆ ಹೋಗುತ್ತದೆ ಎಂದು ಬ್ಯಾಟ್ ಮೇಲೆ ಎತ್ತಿದರು. ಚೆಂಡು ಒಳಗೆ ಬಂದು ಸ್ಟಂಪ್ಸ್ ಮುತ್ತಿಕ್ಕಿತು. ಶಮರ್ ಜೋಸೆಫ್ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಗಯಾನದಲ್ಲಿ ಇವರು ತಮ್ಮ ಮೊದಲ ವಿಕೆಟ್ ಪಡೆದರು.
ಮೊದಲ ವಿಕಟ್ ಸಂಭ್ರಮ ಅವರ ಮುಖದಲ್ಲಿ ಹಾಗೇ ಇತ್ತು. ಆಗಲೇ ಅದೇ ಓವರ್‌ನ ಕೊನೆಯ ಎಸೆತದಲ್ಲಿ ಮತ್ತೊಂದು ವಿಕೆಟ್ ಪಡೆದು ಪ್ರವಾಸಿ ತಂಡಕ್ಕೆ ಪೆಟ್ಟು ನೀಡಿದರು. ಇವರ ಕರಾರುವಕ್ ದಾಳಿಯನ್ನು ಎದುರಿಸಲು ದಕ್ಷಿಣ ಆಫ್ರಿಕಾ ತಂಡ ವಿಫಲವಾಯಿತು. ಶಮರ್ ಜೋಸೆಫ್ ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳನ್ನು ಪೆವೆಲಿಯನ್‌ಗೆ ಅಟ್ಟುತ್ತಾ ಸಾಗಿದರು.
ಇವರು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅಮೋಘ ದಾಳಿ ಸಂಘಟಿಸಿ ಐದು ವಿಕೆಟ್ ಸಾಧನೆ ಮಾಡಿದರು. 33 ರನ್ ನೀಡಿದ್ದ ಶಮರ್ ಜೋಸೆಫ್ ಪ್ರಮುಖ ಐದು ವಿಕೆಟ್ ಕಬಳಿಸಿ ದಕ್ಷಿಣ ಆಫ್ರಿಕಾ ತಂಡಕ್ಕೆ ಕಾಟ ನೀಡಿದ್ದರು.
ಶಮರ್ ಗೆ ಜೇಡನ್ ಸೀಲ್ಸ್ ಉತ್ತಮ ಸಾಥ್ ನೀಡಿದರು. ಇವರು ಸಹ ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳು ನೆಲಕಚ್ಚಿ ನಿಲ್ಲದಂತೆ ಬಿಗುವಿನ ದಾಳಿ ಸಂಘಟಿಸಿ ಮೂರು ವಿಕೆಟ್ ಕಬಳಿಸಿದರು.