
ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ಅವರ ಅಕಾಲಿಕ ಮರಣವು ಕ್ರಿಕೆಟ್ ಜಗತ್ತನ್ನು ಶೋಕದಲ್ಲಿ ಮುಳುಗಿಸಿದೆ. ಅವರ ಹಠಾತ್ ಮರಣವನ್ನು ಕ್ರಿಕೆಟ್ ಅಭಿಮಾನಿಗಳು ಮತ್ತು ಆಟಗಾರರು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಥೈಲ್ಯಾಂಡ್‌ನಲ್ಲಿದ್ದ ಶೇನ್ ವಾರ್ನ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಅವರ ಆಡಳಿತ ಮಂಡಳಿ ಶುಕ್ರವಾರ ಪ್ರಕಟಿಸಿದೆ. ಆದರೆ, 52ರ ಹರೆಯದ ಶೇನ್ ವಾರ್ನ್ ಹೃದಯಾಘಾತದ ಬಗ್ಗೆ ಹಲವು ಅನುಮಾನಗಳಿವೆ. ಇತ್ತೀಚೆಗೆ ಶೇನ್ ವಾರ್ನ್ ಮಾಡಿರುವ ಟ್ವೀಟ್ ನಿಂದ ಇದು ಸ್ಪಷ್ಟವಾಗಿದೆ.
ಥಾಯ್ಲೆಂಡ್‌ನ ಕೊಹ್ ಸಮುಯಿಯಲ್ಲಿ ಲೆಜೆಂಡರಿ ಲೆಗ್ ಸ್ಪಿನ್ನರ್ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವಾರ್ನ್ ಅವರ ನಿಕಟ ಸಂಬಂಧಿಗಳು ಕೆಲವು ಸಮಯದ ಹಿಂದೆ ಹೇಳಿಕೆ ನೀಡಿದ್ದರು. ವಾರ್ನ್ ಅವರ ವಿಲ್ಲಾದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ವೈದ್ಯಕೀಯ ಸಿಬ್ಬಂದಿ ವಾರ್ನ್ ಅವರನ್ನು ರಕ್ಷಿಸಲು ಪ್ರಯತ್ನಿಸಿದರು ಆದರೆ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ವಾರ್ನ್ ಅವರ ಕುಟುಂಬವು ಖಾಸಗಿತನವನ್ನು ಜನರು ಗೌರವಿಸುವಂತೆ ಒತ್ತಾಯಿಸಿದರು ಮತ್ತು ಅವರು ಶೀಘ್ರದಲ್ಲೇ ಹೇಳಿಕೆಯನ್ನು ನೀಡುವುದಾಗಿ ಹೇಳಿದ್ದಾರೆ.
ಆದ್ರೆ ವಾರ್ನ್ ಸಾವಿಗೆ ಫಿಟ್‌ನೆಸ್‌ಗೆ ಹೆಚ್ಚಿನ ಗಮನ ನೀಡುವುದೇ ಕಾರಣವಾಯ್ತೆ? ಹೌದು ಎಂಬುದೇ ಸದ್ಯಕ್ಕೆ ಸಿಕ್ಕಿರುವ ಉತ್ತರ. ಫೆಬ್ರವರಿ 28 ರಂದು, ಶೇನ್ ವಾರ್ನ್ ತಮ್ಮ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಈ ಫೋಟೋದಲ್ಲಿ ವಾರ್ನ್ ಹೆಚ್ಚು ಫಿಟ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಈ ರೀತಿ ಮತ್ತೆ ಸಿದ್ಧವಾಗಲಿದ್ದೇನೆ ಎಂಬುದಾಗಿ ಈ ಟ್ವೀಟ್‌ಗೆ ಶೀರ್ಷಿಕೆ ನೀಡಲಾಗಿದೆ. 'ಆಪರೇಷನ್ ಷ್ರೆಡ್ ಆರಂಭವಾಗಿ 10 ದಿನಗಳು. ಜುಲೈ ವೇಳೆಗೆ ಈ ಹಿಂದಿನ ಶೇಪ್‌ಗೆ ತಲುಪಬೇಕೆಂಬುದು ಗುರಿಯಾಗಿದೆ ಎಂದು ಟ್ವೀಟ್ ಮಾಡಿದ್ದರು. ವಾರ್ನ್ ಟ್ವೀಟ್‌ಗೆ 'ಹೆಲ್ತಿ, ಫಿಟ್‌ನೆಸ್, ಫೀಲ್ ಗುಡ್ ಫ್ರೈಡೇ' ಎಂಬ ಹ್ಯಾಶ್‌ಟ್ಯಾಗ್ ಸೇರಿಸಿದ್ದಾರೆ.
ಆದರೆ ಫಿಟ್ ಆಗುವ ಗುರಿಯೊಂದಿಗೆ ಶೇನ್ ವಾರ್ನ್ ಆಹಾರ ಮತ್ತು ಅತಿಯಾದ ಜಿಮ್ ಅನ್ನು ನಿರ್ವಹಿಸಿದರ ಪರಿಣಾಮ ಅವರ ಹೃದಯದ ಮೇಲೆ ಹೆಚ್ಚಿನ ಒತ್ತಡ ಉಂಟು ಮಾಡಿರಬಹುದು ಎಂಬುದು ಸದ್ಯಕ್ಕೆ ಸಿಕ್ಕಿರುವ ಉತ್ತರವಾಗಿದೆ. ಇದು ವಾರ್ನ್ ಸಾವಿಗೆ ಕಾರಣವೇ ಎಂಬ ಅನುಮಾನ ಹೆಚ್ಚಿಸಿದೆ. ಇತ್ತೀಚೆಗಿನ ದಿನಗಳಲ್ಲಿ ಅನೇಕರು ಹೆಚ್ಚು ಕಸರತ್ತು ನಡೆಸುತ್ತಿದ್ದು, ವಾರ್ನ್ ಕೂಡ ಇದೇ ರೀತಿ ಸಾವನ್ನಪ್ಪಿರಬಹುದು ಎಂದು ಅಭಿಮಾನಿಗಳು ಊಹಿಸಿದ್ದಾರೆ.
1992 ರಿಂದ 2007 ರವರೆಗೆ ಆಸ್ಟ್ರೇಲಿಯಾ ಪರ 145 ಟೆಸ್ಟ್ ಪಂದ್ಯಗಳನ್ನು ಆಡಿರುವ ಶೇನ್ ವಾರ್ನ್ 708 ವಿಕೆಟ್ ಪಡೆದಿದ್ದಾರೆ. ಅವರು 37 ಬಾರಿ ಐದು ವಿಕೆಟ್ ಮತ್ತು 10 ಬಾರಿ 10 ವಿಕೆಟ್ ಪಡೆದರು. ಅವರು 194 ಏಕದಿನ ಪಂದ್ಯಗಳಲ್ಲಿ 293 ವಿಕೆಟ್ ಪಡೆದಿದ್ದಾರೆ. 1992ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಶೇನ್ ವಾರ್ನ್ 2007ರಲ್ಲಿ ವಿದಾಯ ಹೇಳಿದ್ದರು. ಅವರು 15 ವರ್ಷಗಳ ಕಾಲ ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ಸೇವೆ ಸಲ್ಲಿಸಿದರು.
ಟೆಸ್ಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿಕೊಂಡರು. ಶ್ರೀಲಂಕಾದ ದಿಗ್ಗಜ ಮುತ್ತಯ್ಯ ಮುರಳಿ ಧರನ್ (800) ವಾರ್ನ್‌ಗಿಂತ ಮುಂದಿದ್ದಾರೆ. ಸಚಿನ್-ವಾರ್ನ್ ಮತ್ತು ಲಾರಾ-ವಾರ್ನ್ ನಡುವಿನ ಕಾಳಗ ಕ್ರಿಕೆಟ್ ಅಭಿಮಾನಿಗಳಲ್ಲಿ ಎಂದಿಗೂ ಮರೆಯದ ಕ್ಷಣಗಳಾಗಿವೆ.
ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್‌ಗೆ ಪಾದಾರ್ಪಣೆ ಮಾಡಿದ ಶೇನ್ ವಾರ್ನ್, ತಮ್ಮ ಚೊಚ್ಚಲ ಋತುವಿನಲ್ಲಿ ತಂಡದ ನಾಯಕರಾಗಿದ್ದಷ್ಟೇ ಅಲ್ಲದೆ ಕಪ್ ಗೆದ್ದುಕೊಟ್ಟರು. ಆ ಬಳಿಕ ತಂಡ ಮತ್ತೊಂದು ಪ್ರಶಸ್ತಿ ಗೆದ್ದಿಲ್ಲ. 2011ರವರೆಗೆ ರಾಜಸ್ಥಾನದ ನಾಯಕರಾಗಿದ್ದ ವಾರ್ನ್ ನಂತರ ಮೆಂಟರ್ ಆಗಿಯೂ ಸೇವೆ ಸಲ್ಲಿಸಿದ್ದರು.