ಪಾಕಿಸ್ತಾನದ ಅರ್ಥ ವ್ಯವಸ್ಥೆಯ ಬಗ್ಗೆ ಯಾರಿಗೂ ಏನು ಹೇಳುವ ಅವಶ್ಯಕತೆ ಇಲ್ಲವೇ ಇಲ್ಲ. ಪಾಕ್ ಬರೀ ಸಾಲದ ಹೊರೆಯಲ್ಲಿ ಸಿಕ್ಕು ಒದ್ದಾಟ ನಡೆಸಿದೆ. ದೇಶದ ಜಿಡಿಪಿ ಹಳಿ ತಪ್ಪಿ ಹೋಗಿದೆ. ಆದರೆ ಪಾಕ್ ಜನರ ಶೋಕಿಗೆನೂ ಕಮ್ಮಿ ಇಲ್ಲ.. ಹೊಟ್ಟೆಗೆ ಹಿಟ್ಟು ಇಲ್ಲಾ ಅಂದ್ರೂ ಜುಟ್ಟಿಗೆ ಮಲ್ಲಿಗೆ ಹೂ ಎಂಬಂತಾಗಿದೆ ಪಾಕ್ ಪರಿಸ್ಥಿತಿ.
ಇಷ್ಟಕ್ಕೂ ಆಗಿದ್ದು ಏನಪ್ಪಾ ಅಂದ್ರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಹಣವಿಲ್ಲ. ಆಟಗಾರರ ಸಂಬಳ ನೀಡಲು ಒದ್ದಾಟ ನಡೆಸಿದೆ. ಪಾಕಿಸ್ತಾನದ ಮೈದಾನಗಳ ಸ್ಥಿತಿ ಅಧೋಗತಿಗೆ ತಲುಪಿದೆ. ಆದರೆ ಪಿಸಿಬಿ ತನ್ನ ನೂತನ ಕೋಚ್‌ಗೆ ನೀಡುತ್ತಿರುವ ಮೊತ್ತ ತಿಳಿದರೆ, ಹೌಹಾರುತ್ತೀರಾ.

ಪಿಸಿಬಿ ಶೇನ್ ವ್ಯಾಟ್ಸನ್‌ಗೆ 17 ಕೋಟಿ ನೀಡಲು ಸಿದ್ಧವಾಗಿದೆ. ಆಸ್ಟ್ರೇಲಿಯಾದ ಮಾಜಿ ಆಲ್ ರೌಂಡರ್ ಪಾಕಿಸ್ತಾನ ಕ್ರಿಕೆಟ್ ತಂಡದ ಹೊಸ ಕೋಚ್ ಆಗಬಹುದು ಎಂಬ ಸುದ್ದಿಗಳು ಹರಿದಾಡುತ್ತಿವೆ.
ಇನ್ನೂ ಅಧಿಕೃತವಾಗಿ ಘೋಷಣೆಯಾಗದಿದ್ದರೂ, ಪಿಸಿಬಿ ಮತ್ತು ಶೇನ್ ವ್ಯಾಟ್ಸನ್ ನಡುವಿನ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ ಎಂದು ನಂಬಲಾಗಿದೆ. ಇದಕ್ಕಾಗಿ ಶೇನ್ ವ್ಯಾಟ್ಸನ್‌ಗೆ ಪಿಸಿಬಿ 17 ಕೋಟಿ ರೂ. ನೀಡಲು ಪಿಸಿಬಿ ಒಪ್ಪಿಗೆ ಸೂಚಿಸಿದೆ ಎಂದು ತಿಳಿದು ಬಂದಿದೆ.
ಟಿ20 ವಿಶ್ವಕಪ್‌ಗೂ ಮುನ್ನ ಏಪ್ರಿಲ್‌ನಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ಸರಣಿ ನಡೆಯಲಿದೆ. ಮಾಧ್ಯಮ ವರದಿಗಳ ಪ್ರಕಾರ, ಶೇನ್ ವ್ಯಾಟ್ಸನ್ ಈ ಸರಣಿಯಿಂದ ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಆಗಿ ಸೇರಿಕೊಳ್ಳಲಿದ್ದಾರೆ. ಆದರೆ ಪಿಸಿಬಿ ಮತ್ತು ಶೇನ್ ವ್ಯಾಟ್ಸನ್ ನಡುವಿನ ಒಪ್ಪಂದವು 17 ಕೋಟಿ ರೂ.ಗೆ ಅಂತಿಮಗೊಂಡಿದೆ ಎಂಬ ವರದಿಗಳು ತಿಳಿದು ಬರುತ್ತಿವೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇಷ್ಟು ಶುಲ್ಕವನ್ನು ಹೇಗೆ ಪಾವತಿಸುತ್ತದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಈಗಾಗಲೇ ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿರುವ ಪಿಸಿಬಿಗೆ ಇಷ್ಟು ಹಣವನ್ನು ಪಾವತಿಸುವುದು ಸುಲಭವಲ್ಲ. ಪಿಸಿಬಿ ತನ್ನ ಆಟಗಾರರಿಗೆ ಶುಲ್ಕವನ್ನು ಪಾವತಿಸುತ್ತಿಲ್ಲ ಎಂಬ ವರದಿಗಳಿವೆ.
ಪಾಕಿಸ್ತಾನ ಕ್ರಿಕೆಟ್ ತಂಡವು ಹೊಸ ಮುಖ್ಯ ಕೋಚ್‌ಗಾಗಿ ಹುಡುಕುತ್ತಿದೆ. ODI ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನದ ನಂತರ ಮುಖ್ಯ ಕೋಚ್ ಮಿಕ್ಕಿ ಆರ್ಥರ್ ಅವರನ್ನು ವಜಾಗೊಳಿಸಲಾಯಿತು. ಈ ರೇಸ್‌ನಲ್ಲಿ ಶೇನ್ ವ್ಯಾಟ್ಸನ್ ಹೊರತಾಗಿ, ಡ್ಯಾರೆನ್ ಸ್ಯಾಮಿ, ಸೈಮನ್ ಕ್ಯಾಟಿಚ್, ಮೈಕ್ ಹೆಸ್ಸನ್ ಮತ್ತು ಫಿಲ್ ಸಿಮನ್ಸ್ ಹೆಸರುಗಳು ಕೇಳಿ ಬಂದಿವೆ. ಆದರೆ ಈಗ ಶೇನ್ ವ್ಯಾಟ್ಸನ್ ಹೆಸರಿನ ಬಗ್ಗೆ ಬಹುತೇಕ ಒಮ್ಮತ ಮೂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ.