
ಹೈದರಾಬಾದ್, ಮೇ 14: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 1 ರನ್ ಅಂತರದಲ್ಲಿ ಮಣಿಸಿ ಮುಂಬೈ ಇಂಡಿಯನ್ಸ್ ತಂಡ ನಾಲ್ಕನೇ ಬಾರಿ ಪ್ರಶಸ್ತಿ ಗೆದ್ದಿದ್ದು ಇತಿಹಾಸವಾದರೆ, ಫೈನಲ್ ಪಂದ್ಯದಲ್ಲಿ ಚೆನ್ನೈ ಗೆಲುವಿಗಾಗಿ ಆರಂಭಿಕ ಬ್ಯಾಟ್ಸ್‌ಮನ್ ಶೇನ್ ವ್ಯಾಟ್ಸನ್ ರಕ್ತ ಹರಿಸಿದ್ದರು ಎಂಬ ವಿಷಯ ಇದೀಗ ವೈರಲ್ ಆಗಿದೆ.
ಪಂದ್ಯದಲ್ಲಿ ಚೆನ್ನೈ ಹೋರಾಟವನ್ನು ಕೊನೆಯ ಓವರ್ ವರೆಗೂ ಹಿಡಿದಿಟ್ಟಿದ್ದ ಶೇನ್ ವ್ಯಾಟ್ಸನ್ 59 ಎಸೆತಗಳಲ್ಲಿ 80 ರನ್‌ಗಳನ್ನು ಸಿಡಿಸಿ ತಂಡವನ್ನು ಇನ್ನೇನು ಜಯದ ದಡ ಮುಟ್ಟಿಸುವ ಸನಿಹ ಕೊಂಡೊಯ್ದಿದ್ದರು. ಆದರೆ, ಈ ಸಂದರ್ಭದಲ್ಲಿ ಅವರ ಮಂಡಿ ಹರಿದು ರಕ್ತ ಸುರಿಯುತ್ತಿದ್ದರೂ ಅದನ್ನು ಕಿಂಚಿತ್ತೂ ಲೆಕ್ಕಿಸದೆ ತಂಡಕ್ಕೆ ಜಯ ತಂದುಕೊಡಲು ಸರ್ವವನ್ನು ಪಣಕ್ಕಿಟ್ಟಿದ್ದರು ಎಂಬ ಸಂಗತಿಯನ್ನು ಸಹ ಆಟಗಾರ ಹರ್ಭಜನ್ ಸಿಂಗ್ ಬಹಿರಂಗ ಪಡಿಸಿದ್ದಾರೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 149 ರನ್‌ಗಳನ್ನು ದಾಖಲಿಸಿತ್ತು. ಬಳಿಕ ಗುರಿ ಬೆನ್ನತ್ತಿದ ಸೂಪರ್ ಕಿಂಗ್ಸ್ ಸಂಪೂರ್ಣ ಓವರ್‌ಗಳ ಮುಕ್ತಾಯಕ್ಕೆ 8 ವಿಕೆಟ್ ನಷ್ಟದಲ್ಲಿ 148 ರನ್‌ಗಳನ್ನು ಗಳಿಸಿ ಸೋಲಿಗೆ ಶರಣಾಯಿತು. ಸೂಪರ್ ಕಿಂಗ್ಸ್ ಪರ ಏಕಾಂಗಿ ಹೋರಾಟ ನಡೆಸಿದ ವ್ಯಾಟ್ಸನ್, ಕೊನೆಯ ಓವರ್‌ನಲ್ಲಿ 2 ರನ್‌ಗಳನ್ನು ಕದಿಯುವ ಪ್ರಯತ್ನದಲ್ಲಿ ರನ್‌ಔಟ್ ಆದರು.
ಬಹುಶಃ ಮಂಡಿ ಹರಿದು ರಕ್ತ ಸುರಿಯುತ್ತಿದ್ದರಿಂದ 2ನೇ ರನ್ ವೇಗವಾಗಿ ಪೂರೈಸಲು ವ್ಯಾಟ್ಸನ್ ಅವರಿಂದ ಸಾಧ್ಯವಾಗಲಿಲ್ಲ ಎಂದನಿಸುತ್ತದೆ. ಒಂದು ವೇಳೆ ಅಂತಿಮ ಎಸೆತದ ವರೆಗೂ ವಾಟ್ಸನ್ ಕ್ರೀಸ್‌ನಲ್ಲಿ ಉಳಿಯುವಲ್ಲಿ ಯಶಸ್ವಿಯಾಗಿದ್ದರೆ ಪಂದ್ಯದ ಫಲಿತಾಂಶ ಬೇರೆಯದ್ದೇ ಆಗಿರುತ್ತಿತ್ತು ಎಂಬುದರಲ್ಲಿ ಯಾವುದೇ ಅನುಮಾನವೇ ಇಲ್ಲ.
ಈ ವಿಚಾರವಾಗಿ ಸೋಮವಾರ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊ ಪ್ರಕಟಿಸಿರುವ ಹರ್ಭಜನ್ ಸಿಂಗ್, "ರೆಸ್ಪೆಕ್ಟ್ ಬ್ರದರ್. ತಂಡಕ್ಕಾಗಿ ಬೆವರಿನ ಜೊತೆಗೆ ರಕ್ತವನ್ನು ಹರಿಸಿದ್ದೀರಿ ಶೇನ್ ವ್ಯಾಟ್ಸನ್. ಇದಕ್ಕೆ ನಮನ,'' ಎಂದು ಬರೆದಿದ್ದಾರೆ.
ಪಂದ್ಯದ ಬಳಿಕ ಗಾಯಕ್ಕೆ 6 ಹೊಲಿಗೆ
ಇನಿಂಗ್ಸ್‌ನ ಮೂರನೇ ಓವರ್ ಹೊತ್ತಿಗೆ ಗಾಯಗೊಂಡು ರಕ್ತ ಹರಿಯಲು ಶುರುವಾದರೂ ಅದನ್ನು ಎಲ್ಲಿಯೂ ಹೇಳಿಕೊಳ್ಳದ ವ್ಯಾಟ್ಸನ್ ಆಟ ಮುಂದುವರಿಸಿದ್ದರು. ಪಂದ್ಯ ಮುಗಿದ ಬಳಿಕ ಅವರ ಗಾಯಕ್ಕೆ ಆರು ಹೊಲಿಗೆ ಹೊಲಿಯಲಾಗಿದೆ ಎಂದು ಇದೇ ಸಂದರ್ಭದಲ್ಲಿ ಹರ್ಭಜನ್ ಸಿಂಗ್ ಬಹಿರಂಗ ಪಡಿಸಿದ್ದಾರೆ. ಹರ್ಭಜನ್ ಸಿಂಗ್ ಪ್ರಕಟಿಸಿರುವ ಫೋಟೊದಲ್ಲಿ ವ್ಯಾಟ್ಸನ್ ಆಫ್ ಸೈಡ್ ಕಡೆಗೆ ಚೆಂಡನ್ನು ಬಾರಿಸುತ್ತಿದ್ದು, ಅವರ ಎಡ ಮಂಡಿಯ ಭಾಗದಲ್ಲಿ ರಕ್ತದ ಕಲೆ ಎದ್ದು ಕಾಣುತ್ತಿರುವುದನ್ನು ನೋಡಬಹುದಾಗಿದೆ.
"ಅವರ ಮಂಡಿ ಭಾಗದಲ್ಲಿ ರಕ್ತದ ಕಲೆಯನ್ನು ಕಾಣಬಹುದು. ಪಂದ್ಯದ ಬಳಿಕ ಅವರ ಗಾಯಕ್ಕೆ 6 ಹೊಲಿಗೆ ಹಾಕಲಾಗಿದೆ. ಡೈವ್ ಹೊಡೆದ ಸಂದರ್ಭದಲ್ಲಿ ಗಾಯವಾಗಿದೆ. ಆದರೆ, ಈ ಕುರಿತಾಗಿ ಅವರು ಯಾರಿಗೂ ಹೇಳದೆ ಆಟ ಮುಂದುವರಿಸಿದ್ದಾರೆ. ಇವರು ನಮ್ಮ ಶೇನ್ ವ್ಯಾಟ್ಸನ್. ಪಂದ್ಯವನ್ನು ಇನ್ನೇನು ನಮಗೆ ಗೆದ್ದುಕೊಡುವುದರಲ್ಲಿದ್ದರು,'' ಎಂದು ಹರ್ಭಜನ್ ವಿವರಿಸಿದ್ದಾರೆ.