ಟಿ20 ಕ್ರಿಕೆಟ್: ಬಿಗ್ ಬ್ಯಾಷ್ ಲೀಗ್‌ಗೆ ಶೇನ್ ವ್ಯಾಟ್ಸನ್ ಗುಡ್ ಬೈ

ಸಿಡ್ನಿ, ಏಪ್ರಿಲ್ 26: ವಿಶ್ವ ಕಂಡ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಆಸ್ಟ್ರೇಲಿದ ಮಾಜಿ ಕ್ರಿಕೆಟಿಗ ಶೇನ್ ವ್ಯಾಟ್ಸನ್, ಆಸೀಸ್‌ನ ಟಿ20 ಕ್ರಿಕೆಟ್ ಟೂರ್ನಿ ಬಿಬ್ ಬ್ಯಾಷ್ ಲೀಗ್(ಬಿಬಿಎಲ್)ಗೆ ಶುಕ್ರವಾರ ನಿವೃತ್ತಿ ಪ್ರಕಟಿಸಿದ್ದಾರೆ.
ಬಿಗ್ ಬ್ಯಾಷ್ ಲೀಗ್‌ನಲ್ಲಿ ಸಿಡ್ನಿ ಥಂಡರ್ಸ್ ತಂಡವನ್ನು ಮುನ್ನಡೆಸುತ್ತಿದ್ದ ಸ್ಟಾರ್ ಆಲ್‌ರೌಂಡರ್, ಕುಟುಂಬದವರೊಂದಿಗೆ ಹೆಚ್ಚು ಸಮಯ ಕಳೆಯುವ ಉದ್ದೇಶದಿಂದ ತಮ್ಮ ಬಿಬಿಎಲ್ ವೃತ್ತಿ ಬದುಕಿಗೆ ತೆರೆ ಎಳೆದಿದ್ದಾರೆ.
ಸದ್ಯ ಇಂಡಿಯನ್ ಪ್ರೀಮಿರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ವ್ಯಾಟ್ಸನ್, ಇತ್ತೀಚೆಗಷ್ಟೇ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ 96 ರನ್‌ಗಳನ್ನು ಸಿಡಿಸಿ ಮಿಂಚಿದ್ದರು. ವ್ಯಾಟ್ಸನ್ ಐಪಿಎಲ್‌ನಲ್ಲಿ ತಮ್ಮ ಸೇವೆ ಮುಂದುವರಿಸಲಿದ್ದಾರೆ.
"ಕಳೆದ ನಾಲ್ಕು ಆವೃತ್ತಿಗಳಲ್ಲಿ ಸಿಡ್ನಿ ಥಂಡರ್ಸ್ ಜೊತೆಗಿದ್ದ ಪ್ರತಿಯೊಬ್ಬರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು. ತಂಡದೊಂದಿಗೆ ಹಲವು ಅಮೋಘ ಕ್ಷಣಗಳನ್ನು ಹೊಂದಿದ್ದೇನೆ. ಇವೆಲ್ಲವನ್ನೂ ನನ್ನ ಜೀವನದುದ್ದಕ್ಕೂ ಸ್ಮರಿಸಲಿದ್ದೇನೆ. 2016ರ ಬಿಬಿಎಲ್ ಗೆಲುವು ಅವಿಸ್ಮರಣೀಯ. ಕ್ಲಬ್ ಜತೆಗಿನ ನನ್ನ ಪಯಣವನ್ನು ಸ್ಮರಣೀಯವನ್ನಾಗಿಸಿದ ನಿಕ್ ಕಮಿನ್ಸ್, ಪ್ಯಾಡಿ ಅಪ್ಟನ್, ಲೀ ಜರ್ಮನ್ ಹಾಗೂ ಶೇನ್ ಬಾಂಡ್‌ಗೆ ಧನ್ಯವಾದಗಳು.'' ಎಂದು ಸಿಡ್ನಿ ಥಂಡರ್ಸ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ 37 ವರ್ಷದ ಆಲ್‌ರೌಂಡರ್ ಹೇಳಿದ್ದಾರೆ.
ವ್ಯಾಟ್ಸನ್ ಸಿಡ್ನಿ ಥಂಡರ್ಸ್ ಪರ ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದವರ ಪೈಕಿ 2ನೇ (1,014 ರನ್, 42 ಪಂದ್ಯ) ಸ್ಥಾನದಲ್ಲಿದ್ದಾರೆ. ಸಿಡ್ನಿ ಥಂಡರ್ಸ್ ತಂಡದ ಅತ್ಯಂತ ಜನಪ್ರಿಯ ಆಟಗಾರನಾಗಿರುವ ವ್ಯಾಟ್ಸನ್, ಕ್ಲಬ್ ಪರ ಒಟ್ಟಾರೆ 19 ವಿಕೆಟ್‌ಗಳನ್ನೂ ಉರುಳಿಸಿದ್ದಾರೆ. ಅಲ್ಲದೆ ತಮ್ಮ ನಾಯಕತ್ವದಲ್ಲಿ ಸಿಡ್ನಿ ತಂಡಕ್ಕೆ 2016ರ ಬಿಬಿಎಲ್ ಕಿರೀಟ ಗೆದ್ದುಕೊಟ್ಟಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications