Vaibhav Suryavanshi: ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಭರ್ಜರಿ ಗೆಲುವು ಸಾಧಿಸಿ ಆರನೇ ಬಾರಿ ಟ್ರೋಫಿ ಗೆದ್ದುಕೊಂಡಿತು. ಈ ಗೆಲುವಿನ ಪ್ರಮುಖ ಸೂತ್ರದಾರಿ ವೈಭವ್ ಸೂರ್ಯವಂಶಿ ಆಗಿದ್ದು, ಅವರಿಗೆ ಈಗಲೂ ಕೂಡ ಪ್ರಶಂಸೆಗಳ ಸುರಿಮಳೆಯೇ ಹರಿದುಬರುತ್ತಿದೆ. ಇದೀಗ ಶಶಿ ತರೂರ್ ತಮ್ಮ ಟ್ವಿಟರ್‌ನಲ್ಲಿ, ಇವರು ಇಂಡಿಯಾಗೆ ಮತ್ತೊಬ್ಬ ಸಚಿನ್ ತೆಂಡೂಲ್ಕರ್ ಆಗಲಿದ್ದಾರೆ ಎಂದು ಅಚ್ಚರಿ ಭವಿಷ್ಯ ನುಡಿದಿದ್ದಾರೆ.
ಅಂಡರ್-19 ವಿಶ್ವಕಪ್‌ನಲ್ಲಿ ಭಾರತೀಯ ಯುವ ಆಟಗಾರರು ಅದ್ಭುತ ಸಾಧನೆ ಮಾಡಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಈ ಯಶಸ್ಸಿನಲ್ಲಿ ಕೇವಲ 14 ವರ್ಷದ ಎಡಗೈ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಪ್ರಮುಖ ಪಾತ್ರವಹಿಸಿದ್ದು, ತಮ್ಮ ಅಸಾಧಾರಣ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿದ್ದಾರೆ.

175 ರನ್ ಸಿಡಿಸಿದ ವೈಭವ್: ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ವೈಭವ್ ಸೂರ್ಯವಂಶಿ ಕೇವಲ 80 ಎಸೆತಗಳಲ್ಲಿ 15 ಬೌಂಡರಿ, 15 ಸಿಕ್ಸ್ ಸಿಡಿಸುವ ಮೂಲಕ 175 ರನ್‌ಗಳನ್ನು ಕಲೆಹಾಕಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಇನ್ನೂ ಈ ಪ್ರದರ್ಶನಕ್ಕೆ ಅವರು ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಗಳನ್ನು ಪಡೆದರು.
ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಶೈಲಿಯನ್ನು ಹಲವು ಕ್ರಿಕೆಟ್ ದಿಗ್ಗಜರು, ರಾಜಕಾರಣಿಗಳು ಸೇರಿದಂತೆ ಗಣ್ಯರು ಕೊಂಡಾಡಿದ್ದಾರೆ. ಅನೇಕರು ಅಭಿಮಾನಿಗಳು ಹಾಗೂ ವಿಶ್ಲೇಷಕರು ಅವರನ್ನು ಭವಿಷ್ಯದ ಸೂಪರ್‌ಸ್ಟಾರ್ ಎಂದು ಕರೆದಿದ್ದಾರೆ. ಹಾಗೆಯೇ ಕಾಂಗ್ರೆಸ್ ಸಂಸದ ಶಶಿ ತರೂರ್ ಕೂಡ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಶಶಿ ತರೂರ್ ಭವಿಷ್ಯ: "ಇಂತಹ ಅಪರೂಪದ ಪ್ರತಿಭೆಗೆ ಆದಷ್ಟು ಬೇಗ ಉನ್ನತ ಮಟ್ಟದ ಕ್ರಿಕೆಟ್‌ನಲ್ಲಿ ಅವಕಾಶ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಹಿಂದೆ 16ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಸಚಿನ್ ತೆಂಡೂಲ್ಕರ್ ಅವರ ಉದಾಹರಣೆಯನ್ನು ಉಲ್ಲೇಖಿಸಿ, ವೈಭವ್ ಕೂಡ ಅದೇ ಹಾದಿಯಲ್ಲಿ ಮುಂದುವರಿಯುವ ಸಾಧ್ಯತೆಯಿದೆ," ಎಂದು ಭವಿಷ್ಯ ನುಡಿದಿದ್ದಾರೆ.
ಸಚಿನ್ ತೆಂಡೂಲ್ಕರ್ ತಮ್ಮ ಕಿರಿಯ ವಯಸ್ಸಿನಲ್ಲಿಯೇ ದೇಶೀಯ ಕ್ರಿಕೆಟ್‌ನಲ್ಲಿ ನಿರಂತರ ಸಾಧನೆ ಮಾಡಿ ಆಯ್ಕೆದಾರರ ಗಮನ ಸೆಳೆದಿದ್ದರು. ರಣಜಿ ಟ್ರೋಫಿಯಲ್ಲಿ ಮಾಡಿದ ಪ್ರದರ್ಶನ ಹಾಗೂ ಅದ್ಭುತ ಬ್ಯಾಟಿಂಗ್ ಶೈಲಿಯೇ ಅವರನ್ನು ಬೇಗನೆ ಭಾರತ ತಂಡದ ಬಾಗಿಲಿಗೆ ತಲುಪಿಸಿತು. ವೈಭವ್ ಸೂರ್ಯವಂಶಿಯಲ್ಲೂ ಇಂತಹದೇ ಆತ್ಮವಿಶ್ವಾಸ ಮತ್ತು ಪ್ರತಿಭೆ ಕಾಣಿಸುತ್ತಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.
ಆದರೆ, ಐಸಿಸಿ ನಿಯಮಗಳ ಪ್ರಕಾರ, ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಕನಿಷ್ಠ ವಯಸ್ಸು 15 ವರ್ಷಗಳಾಗಿರಬೇಕು. ಈ ನಿಯಮವನ್ನು ಆಟಗಾರರ ದೈಹಿಕ ಹಾಗೂ ಮಾನಸಿಕ ಸುರಕ್ಷತೆ ದೃಷ್ಟಿಯಿಂದ ಜಾರಿಗೆ ತರಲಾಗಿದೆ. ಪ್ರಸ್ತುತ ವೈಭವ್ 14 ವರ್ಷದವರಾಗಿರುವುದರಿಂದ, ಅವರು ಇನ್ನೂ ಸ್ವಲ್ಪ ದಿನ ದೇಶೀಯ ಮತ್ತು ವಯೋಮಿತಿ ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಬೇಕಿದೆ. ಇನ್ನೂ ಕೆಲವೇ ದಿನಗಳಲ್ಲಿ ಅವರಿಗೆ 15 ವರ್ಷ ತುಂಬಲಿದ್ದು, ಟೀಂ ಇಂಡಿಯಾಗೆ ಆಯ್ಕೆ ಆಗುವ ಸಾಧ್ಯತೆ ಹೆಚ್ಚಿದೆ.
ಐಪಿಎಲ್‌ನಲ್ಲೂ ಮಿಂಚಿದ್ದ ವೈಭವ್: ಇನ್ನೂ ವೈಭವ್ ಸೂರ್ಯವಂಶು ಅಂಡರ್-19 ವಿಶ್ವಕಪ್ ಮಾತ್ರವಲ್ಲ, ಐಪಿಎಲ್‌ನಲ್ಲೂ ತನ್ನ ಸಾಮರ್ಥ್ಯವನ್ನು ತೋರಿಸಿದ್ದಾರೆ. 2025ರ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ ಅವರು, ಗುಜರಾತ್ ಟೈಟಾನ್ಸ್ ವಿರುದ್ಧ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿ ಹೊಸ ದಾಖಲೆ ನಿರ್ಮಿಸಿದ್ದರು. ಇದು ಐಪಿಎಲ್ ಇತಿಹಾಸದಲ್ಲಿ ಭಾರತೀಯ ಆಟಗಾರನೊಬ್ಬ ಬಾರಿಸಿದ ಅತೂ ವೇಗದ ಶತಕವಾಗಿತ್ತು.
ಇದೀಗ ಭಾರತ ಆರನೇ ಬಾರಿ ಅಂಡರ್-19 ವಿಶ್ವಕಪ್ ಗೆಲ್ಲುವುದಕ್ಕೂ ವೈಭವ್ ಸೂರ್ಯವಂಶಿ ಸಿಡಿಸಿದ ಭರ್ಜರಿ ಶತಕವೇ ಪ್ರಮುಖ ಕಾರಣವಾಗಿದೆ. ಈ ಟೂರ್ನಿಯಲ್ಲಿ ಸರಣಿಶ್ರೇಷ್ಠ ಆಟಗಾರ ಪ್ರಶಸ್ತಿಗೂ ಭಾಜನರಾದರು. 7 ಇನ್ನಿಂಗ್ಸ್‌ಗಳಿಂದ ಒಟ್ಟು 439 ರನ್ ಗಳಿಸಿರುವ ಅವರು, ಫೈನಲ್‌ನಲ್ಲಿ ಮಾಡಿದ 175 ರನ್ ವಿಶ್ವಕಪ್ ಫೈನಲ್ ಇತಿಹಾಸದಲ್ಲಿಯೇ ಅತಿ ದೊಡ್ಡ ವೈಯಕ್ತಿಕ ಸ್ಕೋರ್ ಆಗಿದೆ. ಈ ಎಲ್ಲಾ ಸಾಧನೆಗಳು ವೈಭವ್ ಸೂರ್ಯವಂಶಿಯನ್ನು ಭಾರತೀಯ ಕ್ರಿಕೆಟ್‌ನ ಭವಿಷ್ಯದ ದೊಡ್ಡ ತಾರೆಯೆಂದು ಗುರುತಿಸಿಕೊಳ್ಳುವಂತೆ ಮಾಡುತ್ತಿವೆ.