ಬಹುತೇಕ ಒಂದು ದಶಕದ ಕಾಲ ಭಾರತ ತಂಡದ ಅವಿಭಾಜ್ಯ ಅಂಗವಾಗಿದ್ದ ಅನುಭವಿ ಆಟಗಾರ ಶಿಖರ್ ಧವನ್ ಸದ್ಯ ಟೀಮ್ ಇಂಡಿಯಾದಿಂದ ಎಲ್ಲಾ ಮಾದರಿಯಿಂದಲೂ ಸಂಪೂರ್ಣವಾಗಿ ದೂರವಾಗಿದ್ದಾರೆ. ಉತ್ತಮ ಫಾರ್ಮ್‌ನಲ್ಲಿದ್ದರೂ ಯುವ ಆಟಗಾರರಿಗೆ ಮಣೆಹಾಕುವ ದೃಷ್ಟಿಯಿಂದ ಧವನ್‌ಗೆ ತಂಡದಿಂದ ಕೋಕ್ ನೀಡಲಾಗಿದೆ. ಆದರೆ ಏಷ್ಯನ್ ಗೇಮ್ಸ್‌ನಲ್ಲಿ ದ್ವಿತಿಯ ದರ್ಜೆಯ ತಂಡವನ್ನು ಕಳುಹಿಸುವ ಕಾರಣ ಧವನ್‌ಗೆ ಆ ತಂಡದಲ್ಲಿ ಅವಕಾಶ ದೊರೆಯಬಹುದು ಎನ್ನಲಾಗಿತ್ತು. ಆದರೆ ಅಲ್ಲಿಯೂ ತನಗೆ ಅವಕಾಶವಿಲ್ಲ ಎನ್ನುವುದು ಅಧಿಕೃತವಾದಾಗ ಸ್ವಲ್ಪ ಆಘಾತವಾಯಿತು ಎಂದಿದ್ದಾರೆ. ಆದರೆ ನಂತರ ಶಿಖರ್ ಧವನ್ ಆಡಿದ ಮಾತುಗಳು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹೃದಯಕ್ಕೆ ನಾಟಿದೆ.
ಅಂದಹಾಗೆ ಶಿಖರ್ ಧವನ್ ಕ್ರಿಕೆಟ್ ಮೈದಾನ ಹಾಗೂ ಮೈದಾನದಾಚೆಗೂ ಅಜಾತಶತ್ರುವಿನಂಥಾ ವ್ಯಕ್ತಿತ್ವದ ಕ್ರಿಕೆಟಿಗ. ಎಲ್ಲಿಯೂ ವರ್ತನೆಯಲ್ಲಿ ಎಲ್ಲೆ ಮೀರದೆ ಯಾವುದೇ ವಿವಾದಗಳಿಲ್ಲದೆ ಸುದೀರ್ಘ ಕಾಲ ಕ್ರಿಕೆಟ್‌ನಲ್ಲಿ ಮಿಂಚಿದ್ದಾರೆ. ನಗುಮೊಗದಿಂದಲೇ ಎಲ್ಲವನ್ನೂ ಸ್ವೀಕರಿಸುವ ಧವನ್ ಏಷ್ಯನ್ ಗೇಮ್ಸ್‌ನಲ್ಲಿಯೂ ತನಗೆ ಅವಕಾಶ ದೊರೆಯದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡದಲ್ಲಿ ಅವಕಾಶ ದೊರೆಯಬಹುದು ಎಂದು ನಿರೀಕ್ಷಿಸಿದ್ದೆ ಎಂದಿರುವ ಶಿಖರ್ ಧವನ್ ಅಲ್ಲಿ ಅವಕಾಶ ಇಲ್ಲ ಎಂದಾಗ ನನಗೆ ಸ್ವಲ್ಪ ಆಘಾತವಾಗಿದ್ದು ನಿಜ ಎಂದಿದ್ದಾರೆ. ಆದರೆ ಯುವ ಆಟಗಾರ ಋತುರಾಜ್ ಗಾಯಕ್ವಾಡ್‌ಗೆ ಭಾರತ ತಂಡವನ್ನು ಮುನ್ನಡೆಸುವುದಕ್ಕೆ ನನಗೆ ಖುಷಿಯಿದೆ. ಎಲ್ಲಾ ಯುವ ಆಟಗಾರರೇ ಇದ್ದಾರೆ ಎಲ್ಲರೂ ಉತ್ತಮವಾಗಿ ಆಡಲಿದ್ದಾರೆ ಎಂದು ಯುವ ಆಟಗಾರರ ಬಳಗಕ್ಕೆ ಶುಭಹಾರೈಸಿದ್ದಾರೆ ಶಿಖರ್ ಧವನ್.
"ಏಷ್ಯನ್ ಗೇಮ್ಸ್‌ಗೆ ಪ್ರಕಟಿಸಿದ ತಂಡದಲ್ಲಿ ನನ್ನ ಹೆಸರು ಇಲ್ಲದಾಗ ಸ್ವಲ್ಪ ಆಘಾತವಾಯಿತು. ಆದರೆ ಬಳಿಕ ನಾನು ಅವರು ಬೇರೆ ಯಾವುದೇ ರೀತಿಯಲ್ಲಿ ಯೋಚನೆಗಳನ್ನು ಮಾಡುತ್ತಿದ್ದಾರೆ ಎಂದು ಭಾವಿಸಿ ಅದನ್ನು ಸ್ವೀಕರಿಸಿದೆ. ಋತು ತಂಡವನ್ನು ಮುನ್ನಡೆಸಲಿದ್ದು ಅದಕ್ಕೆ ಖುಷಿಯಿದೆ. ಎಲ್ಲಾ ಯುವ ಆಟಗಾರರು ತಂಡದಲ್ಲಿದ್ದಾರೆ. ಅವರೆಲ್ಲಾ ಚೆನ್ನಾಗಿ ಆಡುವ ಭರವಸೆಯಿದೆ" ಎಂದು ಶಿಖರ್ ಧವನ್ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಶಿಖರ್ ಧವನ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ಅಸ್ಪಷ್ಟವಾಗಿದ್ದರೂ ಅವಕಾಶ ಸಿಕ್ಕಾಗ ಕಮ್‌ಬ್ಯಾಕ್ ಮಾಡಲು ನಾನು ಸಿದ್ಧ ಎಂದಿದ್ದಾರೆ. ಆಟವನ್ನು ನಾನು ಆನಂದಿಸುತ್ತಿದ್ದು ಯಾವಾಗ ಕರೆಬಂದರೂ ಆಡಲು ಸಿದ್ಧವಾಗಿದ್ದು ಅದಕ್ಕಾಗಿ ಸಂಪೂರ್ಣವಾಗಿ ಫಿಟ್ ಆಗಿದ್ದೇನೆ ಎಂದಿದ್ದಾರೆ ಶಿಖರ್ ಧವನ್. "ಖಂಡಿತವಾಗಿಯೂ ಕಮ್‌ಬ್ಯಾಕ್‌ಗೆ ನಾನು ಸಿದ್ಧವಾಗಿದ್ದೇನೆ. ಅದಕ್ಕಾಗಿಯೇ ನಾನು ನನ್ನನ್ನು ಫಿಟ್ ಆಗಿರುವಂತೆ ನೋಡಿಕೊಳ್ಳುತ್ತಿದ್ದೇನೆ. ಯಾವಾಗಲೂ ಅವಕಾಶ ಎನ್ನುಉದು ಇದ್ದೇ ಇದೆ. ಅದು ಒಂದು ಶೇಕಡಾ ಇರಬಹುದು ಅಥವಾ 20 ಶೇಕಡಾ ಇರಬಹುದು" ಎನ್ನುವ ಮೂಲಕ ತಾನಿನ್ನು ಕೂಡ ಭಾರತ ತಂಡಕೆ ಮರಳಲು ಆಶಾವಾದಿಯಾಗಿದ್ದೇನೆ ಎಂದಿದ್ದಾರೆ.
"ನಾನಿನ್ನು ಕೂಡ ಅಭ್ಯಾಸವನ್ನು ಆನಂದಿಸುತ್ತಿದ್ದೇನೆ. ಆಟವನ್ನು ಆನಂದಿಸುತ್ತಿದ್ದೇನೆ. ಇದಿಷ್ಟು ನನ್ನ ನಿಯಂತ್ರಣದಲ್ಲಿ ಇದೆ. ಉಳಿದಂತೆ ಯಾವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆಯೋ ಅದನ್ನು ಗೌರವಿಸುತ್ತೇನೆ" ಎಂದಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಧವನ್ ತನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಕುರಿತಾಗಿ ಇನ್ನು ಕೂಡ ಆಯ್ಕೆಗಾರರ ಜೊತೆಗೆ ಚರ್ಚೆ ನೆಡೆಸಿಲ್ಲ ಎಂದಿದ್ದು ದೇಶೀಯ ಕ್ರಿಕೆಟ್‌ನಲ್ಲಿ ವೈಟ್ ಬಾಲ್ ಮಾದರಿಯಲ್ಲಿ ಆಡಲಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.