
ನವದೆಹಲಿ: ಶ್ರೀಲಂಕಾ ಪ್ರವಾಸಕ್ಕೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ತಂಡ ಪ್ರಕಟಿಸಿದೆ. ಭಾರತ ತಂಡವನ್ನು ಮುನ್ನಡೆಸುವ ಚೊಚ್ಚಲ ಅವಕಾಶವನ್ನು ಅನುಭವಿ ಬ್ಯಾಟ್ಸ್‌ಮನ್ ಶಿಖರ್ ಧವನ್‌ಗೆ ನೀಡಲಾಗಿದೆ. ಉಪನಾಯಕನಾಗಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಹೆಸರಿಸಲ್ಪಟ್ಟಿದ್ದಾರೆ.
ಮೊದಲ ಬಾರಿಗೆ ಟೀಮ್ ಇಂಡಿಯಾ ಮುನ್ನಡೆಸುವ ಅವಕಾಶ ಸಿಕ್ಕಿರುವುದರಿಂದ ಶಿಖರ್ ಧವನ್ ಖುಷಿಯಾಗಿದ್ದಾರೆ. ಈ ಖುಷಿಯನ್ನು ಧವನ್ ಸಾಮಾಜಿಕ ಜಾಲತಾಣಗಳ ಮೂಲಕ ತೋರಿಕೊಂಡಿದ್ದಾರೆ. ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ 20 ಮಂದಿಯ ಭಾರತೀಯ ತಂಡವನ್ನು ಧವನ್ ಮುನ್ನಡೆಸಲಿದ್ದಾರೆ.
'ದೇಶವನ್ನು ಮುನ್ನಡೆಸುವ ಅವಕಾಶಕ್ಕೆ ನಾನು ವಿನಮ್ರನಾಗಿದ್ದೇನೆ. ನಿಮ್ಮೆಲ್ಲಾ ಶುಭಹಾರೈಕೆಗಳಿಗೆ ನನ್ನ ಧನ್ಯವಾದಗಳು' ಎಂದು ಧವನ್ ತನ್ನ ಅಧಿಕೃತ ಟ್ವಿಟರ್, ಫೇಸ್ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. 35ರ ಹರೆಯದ ಧವನ್ ಭಾರತ ಪರ 34 ಟೆಸ್ಟ್, 142 ಏಕದಿನ ಮತ್ತು 64 ಟಿ20ಐ ಪಂದ್ಯಗಳನ್ನಾಡಿದ್ದಾರೆ.
ಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತೀಯ ತಂಡ ಅಲ್ಲಿ ಜುಲೈ 13ರಿಂದ ಜುಲೈ 25ರ ವರೆಗೆ ಮೂರು ಏಕದಿನ ಪಂದ್ಯಗಳು ಮತ್ತು ಮೂರು ಟಿ20ಐ ಪಂದ್ಯಗಳನ್ನಾಡಲಿದೆ. ಎಲ್ಲಾ ಪಂದ್ಯಗಳು ಕೊಲಂಬೋದಲ್ಲಿರುವ ಆರ್ ಪ್ರೇಮದಾಸ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿವೆ. ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಭಾರತೀಯ ತಂಡಕ್ಕೆ ಕೋಚ್ ಆಗಿರಲಿದ್ದಾರೆ.