ಏಷ್ಯಾ ಕಪ್ ಟೂರ್ನಿ ಆಯೋಜನೆಯ ತಾಣದ ಬಗ್ಗೆಯಿದ್ದ ಗೊಂದಲ ಪರಿಹಾರವಾಗಿದೆ. ಪಾಕಿಸ್ತಾನ ಹಾಗೂ ಶ್ರೀಲಂಕಾದಲ್ಲಿ ಈ ಬಾರಿಯ ಏಷ್ಯಾ ಕಪ್ ಟೂರ್ನಿಗಳೂ ನಡೆಯುವುದು ಖಚಿತವಾಗಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಗಾಯಗೊಂಡಿರುವ ಸ್ಟಾರ್ ಆಟಗಾರರ ಬಗ್ಗೆ ಕುತೂಹಲಕಾರಿ ಮಾಹಿತಿಗಳು ಹೊರಬರುತ್ತಿದ್ದು ಇಬ್ಬರು ಆಟಗಾರರು ಎಷ್ಯಾ ಕಪ್ ವೇಳೆಗೆ ತಂಡಕ್ಕೆ ಕಮ್‌ಬ್ಯಾಕ್ ಮಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಟೀಮ್ ಇಂಡಿಯಾದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಹಾಗೂ ಬ್ಯಾಟರ್ ಶ್ರೇಯಸ್ ಐಯ್ಯರ್ ಗಾಯದ ಕಾರಣದಿಂದಾಗಿ ಈಗಾಗಲೇ ಸುದೀರ್ಘ ಕಾಲದಿಂದ ವೀಶ್ರಾಂತಿಯಲ್ಲಿದ್ದಾರೆ. ಅದರಲ್ಲೂ ಬೂಮ್ರಾ ಕಳೆದ ವರ್ಷದ ಸೆಪ್ಟೆಂಬರ್ ಬಳಿಕ ಮೈದಾನದಲ್ಲಿ ಕಾಣಿಸಿಕೊಂಡಿಲ್ಲ. ಕಳೆದ ವರ್ಷದ ಟಿ20 ವಿಶ್ವಕಪ್‌ನಲ್ಲಿಯೂ ಬೂಮ್ರಾ ಕಾಣಿಸಿಕೊಂಡಿರಲಿಲ್ಲ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಬೂಮ್ರಾ 8-9 ತಿಂಗಳುಗಳಿಂದ ವಿಶ್ರಾಂತಿಯಲ್ಲಿದ್ದಾರೆ.

ಕಳೆದ ಏಪ್ರಿಲ್‌ನಲ್ಲಿ ಬೂಮ್ರಾ ನ್ಯೂಜಿಲೆಂಡ್‌ಗೆ ತೆರಳಿ ಬೆನ್ನಿನ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಹೀಗಾಗಿ ಐಪಿಎಲ್ ಟೂರ್ನಿಯಿಂದಲೂ ಬೂಮ್ರಾ ಹೊರಗುಳಿದಿದ್ದರು ಕೂಡ ಶಸ್ತ್ರಚಿಕಿತ್ಸೆಯ ಕಾರಣದಿಂದಾಗಿ ಅವರಲ್ಲಿ ಚೇತರಿಕೆ ಕಂಡಿದ್ದು ನೋವಿನಿಂದಲೂ ಹೊರಬಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಮುಂದಿನ ಏಷ್ಯಾ ಕಪ್ ಟೂರ್ನಿಯ ವೇಳೆಗೆ ಬೂಮ್ರಾ ಆಡಲು ಸಂಪೂರ್ಣವಾಗಿ ಫಿಚ್ ಆಗುವ ನಿರೀಕ್ಷೆಯಿದೆ.
ಮತ್ತೊಂದೆಡೆ ಶ್ರೇಯಸ್ ಐಯ್ಯರ್ ಕೂಡ ಬೆನ್ನುನೋವಿನ ಸಮಸ್ಯೆಯ ಕಾರಣದಿಂದಾಗಿಯೇ ಏಪ್ರಿಲ್‌ನಲ್ಲಿ ಶಸ್ತ್ರಚಿಕಿತ್ಸೆಗೆ ನಿರ್ಧರಿಸಿದರು. ಅವರ ಬೆನ್ನಿನ ಕೆಳಭಾಗದಲ್ಲಿ ಸಮಸ್ಯೆಗೆ ಒಳಗಾಗುತ್ತಿದ್ದ ಕಾರಣ ಈ ಚಿಕಿತ್ಸೆಗೆ ಒಳಗಾಗಿದ್ದಾರೆ. ಮಾರ್ಚ್‌ನಲ್ಲಿ ಅಹ್ಮದಾಬಾದ್‌ನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಅಂತಿಮ ಟೆಸ್ಟ್ ಪಂದ್ಯದಿನದಲೂ ಅವರು ಹೊರಗುಳಿದಿದ್ದರು. ಬಳಿಕ ಶ್ರೇಯಸ್ ಐಯ್ಯರ್ ಮೇ ತಿಂಗಳಲ್ಲಿ ಲಂಡನ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ ಶ್ರೇಯಸ್ ಐಯ್ಯರ್ ವೈದ್ಯರ ಸಲಹೆಯಂತೆಯೇ ವಿಶ್ರಾಂತಿ ಪಡೆಯುತ್ತಿದ್ದು ರಿಹ್ಯಾಬ್ ಕೂಡ ಮುಂದುವರಿಸಿದ್ದಾರೆ. ಸರಣಿಯನ್ನು ಸಹ ತಪ್ಪಿಸಿಕೊಂಡರು.
ಕ್ರಿಕ್ ಇನ್ಫೋ ಮಾಹಿತಿಯ ಪ್ರಕಾರ ಬೂಮ್ರಾ ಮತ್ತು ಶ್ರೇಯಸ್ ಐಯ್ಯರ್ ಇಬ್ಬರು ಆಟಗಾರರು ಕೂಡ ಈಗ ತಮ್ಮ ಚೇತರಿಕೆಗಾಗಿ ಎನ್‌ಸಿಎನಲ್ಲಿದ್ದಾರೆ. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯಾ ಕಪ್‌ಗೆ ಇಬ್ಬರೂ ಆಟಗಾರರು ಲಭ್ಯರಾಗುವ ಬಗ್ಗೆ ಎನ್‌ಸಿಎ ವೈದ್ಯಕೀಯ ಸಿಬ್ಬಂದಿ ಆಶಾವಾದ ವ್ಯಕ್ತಪಡಿಸಿದ್ದಾರೆ. ಬುಮ್ರಾ ಅವರು ಫಿಸಿಯೋಥೆರಪಿಗೆ ಒಳಗಾಗಿತ್ತಿದ್ದಾರೆ ಜೊತೆಗೆ ಇತ್ತೀಚೆಗೆ ಲಘು ಬೌಲಿಂಗ್ ಕೂಡ ನಡೆಸುತ್ತಿದ್ದಾರೆ. ದಿನಕಳೆದಂತೆ ಅದನ್ನು ಹೆಚ್ಚುಗೊಳಿಸಲಾಗುತ್ತದೆ. ಮತ್ತೊಂದೆಡೆ ಶ್ರೇಯಸ್ ಐಯ್ಯರ್ ಈಗ ಫಿಸಿಯೋಥೆರಪಿಗೆ ಒಳಗಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಇನ್ನು ಏಷ್ಯಾ ಕಪ್ ಆಯೋಜನೆ ಬಗ್ಗೆ ಇದ್ದ ಗೊಂದಲ ಬಗೆಹರಿದಿದ್ದು ಪಾಕಿಸ್ತಾನ ಹಾಗೂ ಶ್ರೀಲಂಕಾದಲ್ಲಿ ಟೂರ್ನಿ ಆಯೋಜನೆಯಾಗುವುದು ಖಚಿತವಾಗಿದೆ. ಈ ಬಗ್ಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ) ಅಧಿಕೃತವಾಗಿ ಮಾಹಿತಿ ನೀಡಿದ್ದು ಟೂರ್ನಿ ಆಯೋಜನೆಯಾಗುವ ತಾಣಗಳ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದೆ. ಆಗಸ್ಟ್ 31ರಿಂದ ಸೆಪ್ಟೆಂಬರ್ 17ರವರೆಗೆ ಈ ಟೂರ್ನಿ ನಡೆಯಲಿದ್ದು ಪಾಕಿಸ್ತಾನದಲ್ಲಿ 4 ಹಾಗೂ ಶ್ರೀಲಂಕಾದಲ್ಲಿ 9 ಪಂದ್ಯಗಳು ಆಯೋಜನೆಯಾಗಲಿದೆ.
ಎಸಿಬಿ ಈ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ನಜಂ ಸೇಥಿ ಪ್ರತಿಕ್ರಿಯೆ ನೀಡಿದ್ದಾರೆ. ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಈ ಟೂರ್ನಿಗಾಗಿ ಭಾರತ ಪಾಕಿಸ್ಥಾನಕ್ಕೆ ಪ್ರವಾಸ ಕೂಗೊಳ್ಳಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ಆಯೋಜನೆ ಮಾಡುವಂತೆ ಪಿಸಿಬಿ ಮುಖ್ಯಸ್ಥ ಮನವಿ ಮಾಡಿದ್ದರು. ಇದೀಗ ಈ ಮನವಿಗೆ ಒಪ್ಪಿಕೊಂಡಿರುವ ಎಸಿಸಿ ಪಾಕಿಸ್ಥಾನದ ಲೀಗ್ ಹಂತದ ಪಂದ್ಯಗಳನ್ನು ತನ್ನ ನೆಲದಲ್ಲಿಯೇ ಆಡಲು ಅವಕಾಶ ನೀಡಿದೆ. ಹೀಗಾಗಿ ನಾಲ್ಕು ಪಂದ್ಯಗಳು ಪಾಕಿಸ್ಥಾನದಲ್ಲಿ ಆಯೋಜನೆಯಾಗಲಿದೆ.