'ಇವರೇ ನನ್ನ 5 ರೋಲ್ ಮಾಡೆಲ್‌ಗಳು': ಶ್ರೇಯಸ್ ಅಯ್ಯರ್ ಹೆಸರಿಸಿದ್ದು ಯಾರನ್ನು?

ಮುಂಬೈ: ಟೀಮ್ ಇಂಡಿಯಾದ ಯುವ ಆಟಗಾರ ಶ್ರೇಯಸ್ ಐಯ್ಯರ್ ಭಾರತ ತಂಡದಲ್ಲಿ ಖಾಯಂ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬಹಳ ಕಾಲದಿಂದ ಟೀಮ್ ಇಂಡಿಯಾಗೆ ಕಾಡುತ್ತಿದ್ದ ನಾಲ್ಕನೇ ಕ್ರಮಾಂಕದ ಆಟಗಾರನ ಸಮಸ್ಯೆಯನ್ನು ನೀಗಿಸಿದ ಆಟಗಾರ ಶ್ರೇಯಸ್ ಅಯ್ಯರ್. ನಾಲ್ಕನೇ ಕ್ರಮಾಂಕದಲ್ಲಿ ಐಯ್ಯರ್ ಅದ್ಭುತ ಆಟವನ್ನು ಪ್ರದರ್ಶಿಸುತ್ತಿದ್ದಾರೆ.
ಟೀಮ್ ಇಂಡಿಯಾದ ಈ ಯುವ ಆಟಗಾರ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಕೊರೊನಾ ವೈರಸ್ ಭೀತಿಯ ಮಧ್ಯೆ ಟ್ವಿಟ್ಟರ್‌ನಲ್ಲಿ ಅಭಿಮಾನಿಗಳೊಂದಿಗೆ ಶ್ರೇಯಸ್ ಅಯ್ಯರ್ ನಿರಂತರವಾಗಿ ಸಂಪರ್ಕದಲ್ಲಿದ್ದು ಅಭಿಮಾನಿಗಳ ಪ್ರಶ್ನೆಗೆ ಉತ್ತರವನ್ನು ನೀಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಶ್ರೇಯಸ್ ಅಯ್ಯರ್‌ಗೆ ಅಭಿಮಾನಿಯೊಬ್ಬರು ನಿಮ್ಮ ಆದರ್ಶ ಕ್ರಿಕೆಟಿಗರು ಯಾರು ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಈ ಪ್ರಶ್ನೆಗೆ ಅಯ್ಯರ್ ಉತ್ತರವನ್ನು ನೀಡಿದ್ದಾರೆ.

ಧೋನಿಯನ್ನು ಹೆಸರಿಸಿಲ್ಲ ಅಯ್ಯರ್
ಕುತೂಹಲಕರ ವಿಚಾರವೇನೆಂದರೆ ಅಯ್ಯರ್ ಹೇಳಿದ 5 ಹೆಸರುಗಳಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಹೆಸರಿಲ್ಲ. ಆದರೆ ಧೋನಿ ಕುರಿತಾಗಿ ಪ್ರತ್ಯೇಕವಾಗಿ ಕೇಳಿದ ಪ್ರಶ್ನೆಗೆ ಅಯ್ಯರ್ ತಾನು ಧೋನಿಯಿಂದ ಪ್ರಭಾವಿತನಾಗಿರುವುದಾಗಿ ಹೇಳಿಕೊಂಡಿದ್ದಾರೆ. ಧೋನಿ ನಿಜವಾದ ನಾಯಕ. ಅವರು ಶಾಂತ ಸ್ವಭಾವದ ಸ್ಥಿರ ಮನಸ್ಸಿನ ನಾಯಕ ಎಂದು ಶ್ರೇಯಸ್ ಹೇಳಿದ್ದಾರೆ.

ಐವರು ಆಟಗಾರರು ಆದರ್ಶ
ಕ್ರಿಕೆಟ್‌ನಲ್ಲಿ ಐದು ಮಂದಿ ಆಟಗಾರರು ನನಗೆ ಆದರ್ಶ ಎಂದು ಶ್ರೇಯಸ್ ಬಹಿರಂಗಪಡಿಸಿದ್ದಾರೆ. ಅವರಲ್ಲಿ ಇಬ್ಬರು ಮಾತ್ರ ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿದ್ದಾರೆ. ಮತ್ತೊಂದು ವಿಶೇಷವೆಂದರೆ, ಐದು ಮೆಚ್ಚಿನ ಆಟಗಾರರಲ್ಲಿ ಇಬ್ಬರು ಈಗ ರಾಷ್ಟ್ರೀಯ ತಂಡದಲ್ಲಿ ಶ್ರೇಯಸ್‌ಗೆ ಸಹ ಆಟಗಾರರಾಗಿದ್ದಾರೆ.

ಯಾರು ಆ ಆಟಗಾರರು
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ, ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿ ವಿಲ್ಲಿಯರ್ಸ್ ಮತ್ತು ಇಂಗ್ಲೆಂಡ್‌ನ ಮಾಜಿ ಆಟಗಾರ ಕೆವಿನ್ ಪೀಟರ್‌ಸನ್ ನೆಚ್ಚಿನ ಕ್ರಿಕೆಟಿಗರೆಂದು ಐಯ್ಯರ್ ಟ್ವೀಟ್ ಮಾಡಿದ್ದಾರೆ.

ಐಪಿಎಲ್‌ನ ನೆಚ್ಚಿನ ಇನ್ನಿಂಗ್ಸ್
ಶ್ರೇಯಸ್ ಐಪಿಎಲ್‌ನಲ್ಲಿ ತಮ್ಮ ನೆಚ್ಚಿನ ಇನ್ನಿಂಗ್ಸ್ ಅನ್ನು ಬಹಿರಂಗಪಡಿಸಿದರು. ದೆಹಲಿ ನಾಯಕತ್ವದ ನಂತರ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 93 ರನ್ ಗಳಿಸಿದ್ದು ಐಪಿಎಲ್ ವೃತ್ತಿಜೀವನದ ಅತ್ಯುತ್ತಮ ಪಂದ್ಯವಾಗಿದೆ. ಇನ್ನಿಂಗ್ಸ್ ಅನ್ನು ಶಾಶ್ವತವಾಗಿ ಮರೆಯಲಾಗುವುದಿಲ್ಲ ಎಂದು ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಹೇಳಿದ್ದಾರೆ.

ಮಹಿಳಾ ತಂಡದ ನೆಚ್ಚಿನ ಆಟಗಾರ್ತಿ
ಇನ್ನು ಇದೆ ಸಂದರ್ಭದಲ್ಲಿ ಟೀಮ್ ಇಂಡಿಯಾ ಮಹಿಳಾ ತಂಡದ ನೆಚ್ಚಿನ ಆಟಗಾರ್ತಿ ಯಾರು ಎಂಬ ಪ್ರಶ್ನೆಯೂ ಐಯ್ಯರ್‌ಗೆ ಬಂತು. ಇದಕ್ಕೆ ಶ್ರೇಯಸ್ ಐಯ್ಯರ್ ಉತ್ತರವನ್ನು ನೀಡಿದ್ದು ಭಾರತದ ಜೆಮಿಮಾ ರೊಡ್ರಿಗಸ್ ಮಹಿಳಾ ಕ್ರಿಕೆಟ್‌ನಲ್ಲಿ ನೆಚ್ಚಿನ ಆಟಗಾರ್ತಿ ಎಂದಿದ್ದಾರೆ.

ಕೀವಿಸ್ ವಿರುದ್ಧ ಅದ್ಭುತ ಪ್ರದರ್ಶನ
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಅದ್ಭುತ ಪ್ರದರ್ಶನವನ್ನು ನೀಡಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅಯ್ಯರ್ ಮೊದಲ ಪಂದ್ಯದಲ್ಲಿ ಶತಕವನ್ನು ಸಿಡಿಸಿ ಮಿಂಚಿದ್ದರು. 103 ರನ್‌ಗಳನ್ನು ಮೊದಲ ಪಂದ್ಯದಲ್ಲ ಗಳಿಸಿದ್ದರೆ ಎರಡನೇ ಮತ್ತು ಮೂರನೇ ಪಂದ್ಯದಲ್ಲೂ ಅರ್ಧ ಶತಕವನ್ನು ಸಿಡಿಸಿದ್ದರು. ಎರಡನೇ ಪಂದ್ಯದಲ್ಲಿ 52 ರನ್‌ಗಳಿಸಿದ್ದ ಐಯ್ಯರ್ ಮೂರನೇ ಪಂದ್ಯದಲ್ಲಿ 62 ರನ್‌ಗಳಿಸಿ ಮಿಂಚಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications