ವಿಶ್ವ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಅತ್ಯುನ್ನತ ಮಟ್ಟದ ಯಶಸ್ಸು ಸಾಧಿಸುತ್ತಿದೆ. ಎಲ್ಲಾ ಮಾದರಿಯಲ್ಲಿಯೂ ನಂಬರ್ 1 ಪಟ್ಟಕ್ಕೇರಿರುವ ಭಾರತ ತಂಡಕ್ಕೆ ಆಟಗಾರರ ವೈಯಕ್ತಿಕ ಸಾಧನೆಗಳು ಮತ್ತಷ್ಟು ಗರಿ ಮೂಡಿಸುವಂತಿದೆ. ಟೀಮ್ ಇಂಡಿಯಾದ ಭವಿಷ್ಯದ ತಾರೆ ಎನಿಸಿಕೊಂಡಿರುವ ಶುಬ್ಮನ್ ಗಿಲ್ ಏಕದಿನ ಮಾದರಿಯಲ್ಲಿ ವಿಶ್ವದ ನಂಬರ್ 1 ಸ್ಥಾನವನ್ನು ಅಲಂಕರಿಸಿದ್ದಾರೆ. ಪಾಕಿಸ್ತಾನದ ನಾಯಕ ಬಾಬರ್ ಅಜಂ ಅವರನ್ನು ಹಿಂದಿಕ್ಕಿರುವ ಶುಬ್ಮನ್ ಗಿಲ್ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಟೀಮ್ ಇಂಡಿಯಾ ಪರವಾಗಿ ಈ ಸಾಧನೆ ಮಾಡಿರುವ ಕೇವಲ ನಾಲ್ಕನೇ ಕ್ರಿಕೆಟಿಗ ಶುಬ್ಮನ್ ಗಿಲ್. ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ ಮಾತ್ರವೇ ಈ ಸಾಧನೆ ಮಾಡಿರುವ ಭಾರತೀಯ ಬ್ಯಾಟರ್‌ಗಳಾಗಿದ್ದರು. ಇದೀಗ ಈ ದಿಗ್ಗಜ ಆಟಗಾರರ ಸಾಲಿಗೆ ಶುಬ್ಮನ್ ಗಿಲ್ ಕೂಡ ಸೇರಿಕೊಂಡಿರುವುದು ವಿಶೇಷ.

ಅಂಡರ್ 19 ವಿಶ್ವಕಪ್‌ನಲ್ಲಿ ಭಾರತ ತಮಡದ ಪರವಾಗಿ ನೀಡಿದ ಅದ್ಭುತ ಪ್ರದರ್ಶನದ ಮೂಲಕ ಶುಬ್ಮನ್ ಗಿಲ್ ಎಲ್ಲರ ಗಮನವನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಅದಾದ ಬಳಿಕ ಈ ಯುವ ಆಟಗಾರನ ಮೇಲೆ ಎಲ್ಲರ ಗಮನ ನೆಟ್ಟಿತ್ತು. ಆ ಭರವಸೆಗಳಿಗೆ ಗಿಲ್ ಯಾವತ್ತೂ ನಿರಾಸೆಯಾಗುವಂತಾ ಪ್ರದರ್ಶಣ ನಿಡಲೇ ಇಲ್ಲ. ಒಂದೊಂದೇ ಹೆಜ್ಜೆ ಮುಂದಿಟ್ಟುಕೊಂಡು ಬಂದ ಶುಬ್ಮನ್ ಗಿಲ್ ಪ್ರಸ್ತುತ ಭಾರತ ಕ್ರಿಕೆಟ್ ತಂಡದ ಮೂರು ಮಾದರಿಯ ಆಟಗಾರ ಎನಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಏಕದಿನ ಕ್ರಿಕೆಟ್‌ನಲ್ಲಿ ಈಗ ವಿಶ್ವದ ಅಗ್ರ ಬ್ಯಾಟರ್ ಎಂಬ ಸಾಧನೆ ಮಾಡಿದ್ದಾರೆ.
23ರ ಹರೆಯದ ಶುಬ್ಮನ್ ಗಿಲ್ ತನ್ನಲ್ಲಿರುವ ಅದ್ಭುತ ಕೌಶಲ್ಯದ ಮೂಲಕ ಈಗ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈ ಬಾರಿಯ ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 92 ರನ್‌ಗಳಿಸಿರುವ ಶುಬ್ಮನ್ ಗಿಲ್ ಅವರಿಂದ ತನ್ನ ಅತ್ಯುತ್ತಮ ಪ್ರದರ್ಶನ ಇನ್ನಷ್ಟೇ ಬರಬೇಕಿದೆ. ಈಗಾಗಲೇ ಭಾರತ ಸೆಮಿಫೈನಲ್‌ಗೆ ಪ್ರವೇಶಿಸಿದ್ದು ನಿರ್ಣಾಯಕ ಹಂತದಲ್ಲಿ ಗಿಲ್ ಅವರಿಂದ ಮತ್ತಷ್ಟು ಉತ್ತಮ ಪ್ರದರ್ಶನವನ್ನು ನಿರೀಕ್ಷಿಸಲಾಗುತ್ತಿದೆ.
ಬಾಲ್ಯದಿಂದಲೇ ಕ್ರಿಕೆಟ್ ಮೇಲೆ ಒಲವು
ಶುಬ್ಮನ್ ಗಿಲ್ ಪಂಜಾಬ್‌ನ ಫಜಿಲ್ಕಾ ಎನ್ನುವ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದವರು. ತಂದೆ ಲಕ್ವಿಂದರ್ ಸಿಂಗ್ ಮೂಲತಃ ರೈತ. ಆದರೆ ಬಾಲ್ಯದಲ್ಲಿಯೇ ಶುಬ್ಮನ್ ಗಿಲ್ ಅವರಲ್ಲಿ ಕ್ರಿಕೆಟ್ ಮೇಲಿನ ಒಲವನ್ನು ಕಂಡ ಲಕ್ವಿಂದರ್ ಸಿಂಗ್ ಅದನ್ನು ಪೋಷಿಸಿ ಉತ್ತೇಜಿಸಿದರು. ಹೀಗಾಗಿಯೇ ಮಗನಿಗೆ ತಮ್ಮೂರಿನಲ್ಲಿ ಕ್ರಿಕೆಟ್‌ನ ಬೆಳವಣಿಗೆಗೆ ಪೂರಕವಾದ ವ್ಯವಸ್ಥೆಗಳು ಇಲ್ಲ ಎನ್ನುವ ಕಾರಣಕ್ಕೆ 2007ರಲ್ಲಿ ಮೊಹಾಲಿಗೆ ಇಡೀ ಕುಟುಂಬ ಸ್ಥಳಾಂತರಗೊಂಡಿದ್ದರು.
ಮಗನ ಬಾಲ್ಯದ ಬಗ್ಗೆ ತಂದೆಯ ಮಾತು
"ಶುಬ್ಮನ್ ಬಾಲ್ಯದಲ್ಲಿಯೇ ಕ್ರಿಕೆಟ್‌ಗಾಗಿ ಅರ್ಪಿಸಿಕೊಂಡಿದ್ದ. ಆತ ಯಾವತ್ತೂ ಗೊಂಬೆ, ಉಳಿದ ಆಟದ ಸಾಮಾಗ್ರಿಗಳನ್ನು ಇಷ್ಟ ಪಟ್ಟವನಲ್ಲ. ಆತನಿಗೆ ಬ್ಯಾಟ್ ಹಾಗೂ ಬಾಲ್‌ನಲ್ಲಿ ಆಡುವುದು ಎಂದರೆ ಇಷ್ಟ. ಆತ ಮಲಗಲು ತೆರಳುವಾಗಲೂ ಆಡುತ್ತಲೇ ಇರುತ್ತಿದ್ದ" ಎಂದು ಶುಬ್ಮನ್ ಗಿಲ್ ತಂದೆ ಹೇಳಿಕೊಂಡಿದ್ದರು. ಮುಂದುರಿದು ಅವರು "ನಮ್ಮ ಗ್ರಾಮ ಮೊಹಾಲಿಗಿಂತ 300 ಕಿ. ಮೀ ದೂರವಿದೆ. ಆದರೆ ಊರಿನಲ್ಲಿ ಅಗತ್ಯ ವ್ಯವಸ್ಥೆಗಳು ಇಲ್ಲವಾಗಿದ್ದ ಕಾರಣ ಆತನೊಂದಿಗೆ ಮೊಹಾಲಿಗೆ ಸ್ಥಳಾಂತರವಾದೆವು" ಎಂದು ವಿವರಿಸಿದ್ದಾರೆ.
ಮಗನಿಗಾಗಿ ಕುಟುಂಬದ ತ್ಯಾಗ
ಶುಬ್ಮನ್ ಗಿಲ್ ಕ್ರಿಕೆಟ್ ಭವಿಷ್ಯವನ್ನು ರೂಪಿಸಲು ಅವರ ಕುಟುಂಬ ತೆಗೆದುಕೊಂಡ ನಿರ್ಧಾರ ಸಣ್ಣದಲ್ಲ. ಮಗನ ಕನಸನ್ನು ನನಸಾಗಿಸಲು ಸುಮಾರು 15 ವರ್ಷಗಳ ಕಾಲ ಶುಬ್ಮನ್ ಕುಟುಂಬ ಗಟ್ಟಿಯಾಗಿ ನಿಂತಿತ್ತು. ತಮ್ಮ ಕೆಲಸ, ಕುಟುಂಬದ ಶುಭ ಸಮಾರಂಭಗಳು ಎಲ್ಲವನ್ನೂ ಬಿಟ್ಟು ಮಗನ ಕ್ರಿಕೆಟ್‌ಗಾಗಿ ಬೆಂಬಲವಾಗಿ ನಿಂತಿತ್ತು ಲಖ್ವಿಂದರ್ ಕುಟುಂಬ. ಮಗನ ಭವಿಷ್ಯಕ್ಕಾಗಿ ನಮ್ಮಿಂದ ಎಷ್ಟು ಸಮಯ ನೀಡಲು ಸಾಧ್ಯವಿತ್ತೋ ಅದನ್ನು ನಿಡಿದ್ದೇವೆ ಎಂದಿದ್ದಾರೆ ಗಿಲ್ ತಂದೆ ಲಖ್ವಿಂದರ್.
ತಂದೆಯೇ ಮೊದಲ ಗುರು
ಇನ್ನು ಶುಬ್ಮನ್ ಗಿಲ್‌ಗೆ ಆರಂಭಿಕ ಗುರು ಅವರ ತಂದೆಯೇ ಆಗಿದ್ದರು. ನಿತ್ಯವೂ 500-700 ಎಸೆತಗಳನ್ನು ಎದುರಿಸುವಂತೆ ಮಾಡಿದ್ದರು ಗಿಲ್ ತಂದೆ. ಇನ್ನು ವೇಗದ ಬೌಲಿಂಗ್ ಎದುರಿಸಲು ಸಹಾಯವಾಗುವಂತೆ ತಮ್ಮದೇ ಆದ ತಂತ್ರವನ್ನು ಬಳಸಿಕೊಂಡು ಅಭ್ಯಾಸ ಮಾಡಿಸುತ್ತಿದ್ದರು. ಹೀಗಾಗಿ ಗಿಲ್ ಅದ್ಭುತದ ಸಿದ್ಧತೆನ್ನು ಬಾಲ್ಯದಲ್ಲಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ನಂತರ ಅಂಡರ್ 14 ವಿಜಯ್ ಮರ್ಜೆಂಟ್ ಟ್ರೋಫಿಯಲ್ಲಿ ಪಂಜಾಬ್ ಪರ ಆಡುವ ಅವಕಾಶ ಗಿಟ್ಟಿಸಿಕೊಂಡ ಗಿಲ್ ನಂತರ ಸಿಕ್ಕ ಅವಕಾಶವನ್ನು ಬಾಚಿಕೊಳ್ಳುತ್ತಲೇ ಮುನ್ನುಗ್ಗಿದರು. ನಂತರ ಅಂಡರ್ 19 ವಿಶ್ವಕಪ್ ತಂಡಕ್ಕೆ ಆಯ್ಕೆಯಾದ ಬಳಿಕ ಭಾರತ ತಂಡಕ್ಕೆ ಸೇರಿಕೊಳ್ಳಲು ವೇದಿಕೆಯನ್ನು ಸೃಷ್ಟಿಸಿಕೊಂಡರು. ನಂತರ ನಡೆದಿದ್ದು ಇತಿಹಾಸ.