Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗುಜರಾತ್‌ಗೆ ಶುಭ ಸುದ್ದಿ: ಫೈನಲ್‌ ಪ್ರವೇಶಿಸಿದ ಟೈಟಾನ್ಸ್‌, ವೈಭವ್ ಸೂರ್ಯವಂಶಿ ಹೋರಾಟ ವ್ಯರ್ಥ

ನ್ಯೂ ಚಂಡೀಗಢ: ನಾಯಕ ಶುಭಮನ್‌ ಗಿಲ್ ಅವರು ಬಾರಿಸಿದ ಶತಕದ ಬಲದಿಂದ ಗುಜರಾತ್ ಟೈಟಾನ್ಸ್‌ 19ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿತು. ಈ ಮೂಲಕ ಗುಜರಾತ್ ಟೈಟಾನ್ಸ್‌ ಫೈನಲ್‌ಗೆ ಅರ್ಹತೆ ಪಡೆದಿದೆ. ಮೇ 31 ರಂದು ನಡೆಯಲಿರುವ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಕಾದಾಟ ನಡೆಸಲಿವೆ.

ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ 215 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕ ಸಾಯಿ ಸುದರ್ಶನ್‌ ಹಾಗೂ ನಾಯಕ ಶುಭಮನ್‌ ಗಿಲ್‌ ಜೋಡಿ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಪವರ್‌ ಪ್ಲೇನಲ್ಲಿ ರನ್‌ ಕಲೆ ಹಾಕಿ ರಾಯಲ್ಸ್ ತಂಡಕ್ಕೆ ಶಾಕ್ ನೀಡಿತು. ಮೊದಲ ಆರು ಓವರ್‌ಗಳಲ್ಲಿ ವಿಕೆಟ್ ಬೀಳದಂತೆ ಕಾಯ್ದುಕೊಂಡು ಬ್ಯಾಟ್ ಮಾಡಿದ ಟೈಟಾನ್ಸ್ ತಂಡದ ಆರಂಭಿಕ ಆಟಗಾರರು ಅಬ್ಬರಿಸಿದರು.

Shubman Gill

ಹಿಟ್‌ ವಿಕೆಟ್‌ಗೆ ಬಲಿ

ಸಾಯಿ ಸುದರ್ಶನ್‌ ಹಾಗೂ ಶುಭಮನ್‌ ಗಿಲ್‌ ಮೊದಲ ವಿಕೆಟ್‌ಗೆ 77 ಎಸೆತಗಳಲ್ಲಿ 167 ರನ್‌ ಸೇರಿಸಿತು. ಸಾಯಿ ಸುದರ್ಶನ್‌ ಅರ್ಧಶತಕ ಬಾರಿಸಿದ್ದಾಗ ಹಿಟ್‌ ವಿಕೆಟ್‌ಗೆ ಬಲಿಯಾದರು.ಸಾಯಿ ಸುದರ್ಶನ್‌ 8 ಬೌಂಡರಿ, 1 ಸಿಕ್ಸರ್‌ ನೆರವಿನಿಂದ 58 ರನ್‌ ಸಿಡಿಸಿದರು.

ಗಿಲ್‌ ಶತಕ

ನಾಯಕ ಶುಭಮನ್ ಗಿಲ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು ತಮ್ಮ ಅನುಭವದ ಲಾಭ ಬಳಿಸಿಕೊಂಡು ಬ್ಯಾಟ್ ಮಾಡಿ ಅಬ್ಬರಿಸಿದರು. ಇವರು 53 ಎಸೆತಗಳಲ್ಲಿ 15 ಬೌಂಡರಿ, 3 ಸಿಕ್ಸರ್‌ ಸಹಾಯದಿಂದ 104 ರನ್‌ ಬಾರಿಸಿ ಮಿಂಚಿದರು. ಈ ಮೂಲಕ ಶುಭಮನ್‌ ಗಿಲ್‌ ಐಪಿಎಲ್‌ನ ನಾಕೌಟ್‌ ಪಂದ್ಯದಲ್ಲಿ ಎರಡನೇ ಶತಕ ಬಾರಿಸಿದ ಮೊದಲ ಪ್ಲೇಯರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.

ಅಂತಿಮವಾಗಿ ಗುಜರಾತ್ ಟೈಟಾನ್ಸ್‌ 18.4 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 219 ರನ್‌ ಸಿಡಿಸಿ ಜಯ ಸಾಧಿಸಿತು.

Shubman Gill

ವೈಭವ್‌ ಜವಾಬ್ದಾರಿಯುತ ಆಟ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ್ ರಾಯಲ್ಸ್ ಆರಂಭದಲ್ಲೇ ಯಶಸ್ವಿ ಜೈಸ್ವಾಲ್ (1) ಮತ್ತು ಧ್ರುವ್ ಜುರೇಲ್ (7) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಬಂದ ರವೀಂದ್ರ ಜಡೇಜಾ (ಅಜೇಯ 36) ತಂಡಕ್ಕೆ ಆಸರೆಯಾದರು. ಇವರಿಗೆ ಸಾಥ್ ನೀಡಿದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ 47 ಎಸೆತಗಳಲ್ಲಿ 8 ಬೌಂಡರಿ, 7 ಸಿಕ್ಸರ್ ನೆರವಿನಿಂದ 96 ರನ್‌ಗಳ ಸ್ಫೋಟಕ ಇನಿಂಗ್ಸ್ ಆಡಿದರು. ಈ ಮೂಲಕ ವೈಭವ್ ಈ ಆವೃತ್ತಿಯಲ್ಲಿ 776 ರನ್ ಪೂರೈಸಿದರು.

ಕೊನೆಯಲ್ಲಿ ಡೊನೊವನ್ ಫೆರೀರಾ ಕೇವಲ 11 ಎಸೆತಗಳಲ್ಲಿ 38 ರನ್ ಚಚ್ಚಿದರು. ರಶೀದ್ ಖಾನ್ ಎಸೆದ 20ನೇ ಓವರ್‌ನಲ್ಲಿ ರಾಯಲ್ಸ್ 27 ರನ್ ಕೊಳ್ಳೆಹೊಡೆಯಿತು. ಅಂತಿಮವಾಗಿ ರಾಜಸ್ಥಾನ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 214 ರನ್ ಕಲೆಹಾಕಿತು. ಗುಜರಾತ್ ಪರ ರಬಾಡ ಮತ್ತು ಹೋಲ್ಡರ್ ತಲಾ 2 ವಿಕೆಟ್ ಪಡೆದರು.

Story first published: Friday, May 29, 2026, 23:32 [IST]
Other articles published on May 29, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+