Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

India vs Pakistan Match: ಪಾಕಿಸ್ತಾನ ವಿರುದ್ಧ ಅರ್ಧಶತಕ ಬಾರಿಸಿ ಗಣ್ಯರ ಪಟ್ಟಿಗೆ ಸೇರಿದ ಶುಭ್ಮನ್ ಗಿಲ್

ಭಾನುವಾರ, ಸೆಪ್ಟೆಂಬರ್ 10ರಂದು ಕೊಲಂಬೊದಲ್ಲಿ ನಡೆದ 2023ರ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ಭಾರತದ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ 37 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು.

ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಪಾಕಿಸ್ತಾನದ ವೇಗದ ದಾಳಿಯ ವಿರುದ್ಧ ಪ್ರಾಬಲ್ಯ ಸಾಧಿಸಿದ ಶುಭ್ಮನ್ ಗಿಲ್ ಅವರು ತಮ್ಮ ಏಕದಿನ ಕ್ರಿಕೆಟ್‌ನಲ್ಲಿ 8ನೇ ಅರ್ಧಶತಕವನ್ನು ಗಳಿಸಿದರು.

ಅಲ್ಲದೆ, ಶುಭ್ಮನ್ ಗಿಲ್ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ವಿರುದ್ಧ 50 ಪ್ಲಸ್ ಸ್ಕೋರ್ ಗಳಿಸಿದ 7ನೇ ಭಾರತೀಯ ಆರಂಭಿಕ ಬ್ಯಾಟ್ಸ್‌ಮನ್ ಎನಿಸಿದರು.

shubman-gill-joins-legendary-cricketers-club

ಪಂಜಾಬ್ ತಾರೆ ಶುಭ್ಮನ್ ಗಿಲ್ ಅವರು ಈ ಮೂಲಕ ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ ಮತ್ತು ವೀರೇಂದ್ರ ಸೆಹ್ವಾಗ್ ಸೇರಿದಂತೆ ಭಾರತೀಯ ಗಣ್ಯ ಬ್ಯಾಟರ್‌ಗಳ ಪಟ್ಟಿಯನ್ನು ಸೇರಿದರು.

ಎಡಗೈ ವೇಗಿ ಶಾಹೀನ್ ಶಾ ಆಫ್ರಿದಿ ವಿರುದ್ಧ ಶುಭ್ಮನ್ ಗಿಲ್ ರೊಚ್ಚಿಗೆದ್ದು ಆಡಿದರು. ಆಫ್ರಿದಿ ತಮ್ಮ ಮೊದಲ 3 ಓವರ್‌ಗಳಲ್ಲಿ 31 ರನ್‌ಗಳನ್ನು ಬಿಟ್ಟುಕೊಟ್ಟು ಬೆರಳಿನ ಗಾಯಕ್ಕೆ ತುತ್ತಾಗಿ ಮೈದಾನದಿಂದ ಹೊರನಡೆದರು.

ಮೊದಲ 15 ಓವರ್‌ಗಳಲ್ಲಿ ಭಾರತದ ಆರಂಭಿಕರಾದ ಶುಭ್ಮನ್ ಗಿಲ್ ಮತ್ತು ರೋಹಿತ್ ಶರ್ಮಾ 110 ರನ್‌ಗಳ ಜೊತೆಯಾಟ ದಾಟಿದಾಗ ಇಬ್ಬರೂ ವೈಯಕ್ತಿಕ ಅರ್ಧಶತಕ ಬಾರಿಸಿದರು.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಆರಂಭಿಕ ಕೆಲವು ಓವರ್‌ಗಳಲ್ಲಿ ನಸೀಮ್ ಶಾ ವಿರುದ್ಧ ತಿಣುಕಾಡಿದರೆ, ಸ್ಪಿನ್ನರ್ ಶಾದಾಬ್ ಖಾನ್ ಬೌಲಿಂಗ್‌ನಲ್ಲಿ ಆರ್ಭಟಿಸಿದರು. ರೋಹಿತ್ ತಮ್ಮ 50ನೇ ಏಕದಿನ ಅರ್ಧಶತಕ ಗಳಿಸಿದಾಗ ಲೆಗ್ ಸ್ಪಿನ್ನರ್‌ಗೆ 3 ಸಿಕ್ಸರ್‌ಗಳನ್ನು ಬಾರಿಸಿದರು.

ಇನ್ನು ಸೆಪ್ಟೆಂಬರ್ 2ರಂದು ಪಲ್ಲೆಕೆಲೆಯಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಎ ಗುಂಪಿನ ಪಂದ್ಯದಲ್ಲಿ ಶುಭ್ಮನ್ ಗಿಲ್ ರನ್ ಗಳಿಸಲು ಪರದಾಡಿದ್ದರು. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ ಶುಭ್ಮನ್ ಗಿಲ್ 10 ರನ್ ಗಳಿಸಲು 32 ಎಸೆತಗಳನ್ನು ತೆಗೆದುಕೊಂಡರು ಮತ್ತು ಹ್ಯಾರಿಸ್ ರೌಫ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.

ಪಾಕಿಸ್ತಾನ ವಿರುದ್ಧದ ಸೂಪರ್ 4 ಪಂದ್ಯಕ್ಕೂ ಮುನ್ನ ಗುಜರಾತ್ ಟೈಟನ್ಸ್ ಸ್ಟಾರ್ ಬ್ಯಾಟರ್ ಶುಭ್ಮನ್ ಗಿಲ್ಲ ನೆಟ್‌ನಲ್ಲಿ ಬೆವರಿಳಿಸಿದ್ದರು. ಕೊಲಂಬೊದಲ್ಲಿ ಭಾರತದ ಎಲ್ಲಾ 3 ದಿನಗಳ ಅಭ್ಯಾಸದ ಅವಧಿಯಲ್ಲಿ ಶುಭ್ಮನ್ ಗಿಲ್ ಬ್ಯಾಟಿಂಗ್ ಮಾಡಿದರು.

ವಿಶೇಷವಾಗಿ, ಶುಭ್ಮನ್ ಗಿಲ್ ಎಡಗೈ ಥ್ರೋ-ಡೌನ್ ಸ್ಪೆಷಲಿಸ್ಟ್ ನುವಾನ್ ಸೆನೆವಿರತ್ನೆ ವಿರುದ್ಧ ದೀರ್ಘಕಾಲ ಬ್ಯಾಟ್ ಮಾಡಿದರು. ಪಂದ್ಯದ ಮುನ್ನಾದಿನದಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಾಕಿಸ್ತಾನದ ವೇಗದ ದಾಳಿಯ ವೈವಿಧ್ಯತೆಗೆ ತಯಾರಿ ನಡೆಸಿದ್ದರ ಕುರಿತು ಹೇಳಿದ್ದರು.

ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಜೋಡಿ ಪಾಕಿಸ್ತಾನ ವೇಗದ ಬೌಲರ್‌ಗಳ ವಿರುದ್ಧ ಪ್ರಾಬಲ್ಯ ಹೊಂದಿದ್ದರು. ಕೊಲಂಬೊದ ಉತ್ತಮ ಬ್ಯಾಟಿಂಗ್ ಪಿಚ್‌ನಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳ ಮೂಲಕ ತಮ್ಮ ಫಾರ್ಮ್‌ ಮುಂದುವರೆಸಿದರು.

ರೋಹಿತ್ ಶರ್ಮಾ ಅವರು ನಸೀಮ್ ಶಾ ವಿರುದ್ಧ ರನ್ ಗಳಿಸಲು ಪರದಾಡುತ್ತಿದ್ದಾಗ ಪವರ್‌ಪ್ಲೇಯಲ್ಲಿ ವೇಗವಾಗಿ ರನ್ ಗಳಿಸುವ ಜವಾಬ್ದಾರಿಯನ್ನು ಶುಭ್ಮನ್ ಗಿಲ್ ತೆಗೆದುಕೊಂಡರು.

ಬಳಿಕ ರೋಹಿತ್ ಶರ್ಮಾ 49 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ ಸಮೇತ 56 ರನ್ ಗಳಿಸಿ ಔಟಾದರೆ, ಅವರ ಹಿಂದೆಯೇ ಶುಭ್ಮನ್ ಗಿಲ್ 52 ಎಸೆತಗಳಲ್ಲಿ 10 ಬೌಂಡರಿ ಮೂಲಕ 58 ರನ್ ಗಳಿಸಿದ್ದಾಗ ವಿಕೆಟ್ ಒಪ್ಪಿಸಿದರು.

ಸದ್ಯ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದು, ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಭಾರತ ತಂಡ ಈವರೆಗೆ 24.1 ಓವರ್‌ಗಳಲ್ಲಿ 2 ವಿಕೆಟ್‌ಗೆ 147 ರನ್ ಗಳಿಸಿದೆ. ವಿರಾಟ್ ಕೊಹ್ಲಿ 8 ರನ್ ಮತ್ತು ಕೆಎಲ್ ರಾಹುಲ್ 17 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

Story first published: Sunday, September 10, 2023, 18:20 [IST]
Other articles published on Sep 10, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+