SL vs IRE Test Series: ಐರ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಯುವ ತಂಡವನ್ನು ಪ್ರಕಟಿಸಿದ ಶ್ರೀಲಂಕಾ
ಇದೇ ಏಪ್ರಿಲ್ 16ರಂದು ಆರಂಭವಾಗಲಿರುವ ಪ್ರವಾಸಿ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಶ್ರೀಲಂಕಾ ತನ್ನ ಯುವ ಆಟಗಾರರ ಬಲಿಷ್ಠ ತಂಡವನ್ನು ಪ್ರಕಟಿಸಿದೆ.
ಎರಡು ಪಂದ್ಯಗಳ ಸರಣಿಯ ಮೊದಲ ಪಂದ್ಯ ಏಪ್ರಿಲ್ 16ರಂದು ಪ್ರಾರಂಭವಾಗಲಿದ್ದು, ಈ ಪಂದ್ಯವು ಗಾಲೆಯ ಗಾಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಆಂಡ್ರ್ಯೂ ಬಾಲ್ಬಿರ್ನಿ ನಾಯಕತ್ವದ ಐರ್ಲೆಂಡ್ ತಂಡದ ವಿರುದ್ಧ ಸರಣಿ ಗೆಲ್ಲುವ ಉದ್ದೇಶದಿಂದ ಶ್ರೀಲಂಕಾ ತಂಡವನ್ನು ಪ್ರಕಟಿಸಲಾಗಿದೆ.

ವಿಕೆಟ್ ಕೀಪರ್- ಬ್ಯಾಟರ್ ಸದೀರ ಸಮರವಿಕ್ರಮ ಅವರು ಆರು ವರ್ಷಗಳ ಸುದೀರ್ಘ ವಿಶ್ರಾಂತಿಯ ನಂತರ ಶ್ರೀಲಂಕಾ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. 27 ವರ್ಷದ ಸದೀರ ಸಮರವಿಕ್ರಮ 2017ರಲ್ಲಿ ಶ್ರೀಲಂಕಾ ಪರ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಮತ್ತೊಬ್ಬ ವಿಕೆಟ್ ಕೀಪರ್- ಬ್ಯಾಟರ್ ನಿರೋಶನ್ ಡಿಕ್ವೆಲ್ಲಾ ಅವರನ್ನು ಮೊದಲ ಟೆಸ್ಟ್ ಪಂದ್ಯಕ್ಕೆ ಕೈಬಿಟ್ಟಿದ್ದರಿಂದ ಸಮರವಿಕ್ರಮ ಐರ್ಲೆಂಡ್ ವಿರುದ್ಧ ವಿಕೆಟ್ ಕೀಪಿಂಗ್ ಜವಾಬ್ದಾರಿ ತೆಗೆದುಕೊಳ್ಳಲಿದ್ದಾರೆ.
ಇತ್ತೀಚಿಗಗೆ ನ್ಯೂಜಿಲೆಂಡ್ ವಿರುದ್ಧದ ಪ್ರವಾಸದಲ್ಲಿ ಕಾಣಿಸಿಕೊಂಡ ನಂತರ ಒಶಾಡ ಫೆರ್ನಾಂಡೊ ಅವರನ್ನು ತಂಡದಿಂದ ಕೈಬಿಡಲಾಗಿದೆ. ಇದೇ ವೇಳೆ 28 ವರ್ಷದ ದುಶನ್ ಹೇಮಂತ ಶ್ರೀಲಂಕಾ ರಾಷ್ಟ್ರೀಯ ತಂಡಕ್ಕೆ ಚೊಚ್ಚಲ ಕರೆಯನ್ನು ಪಡೆದಿದ್ದಾರೆ.
ಐರ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಶ್ರೀಲಂಕಾ ನಾಯಕನಾಗಿ ದಿಮುತ್ ಕರುಣಾರತ್ನೆ
ಇನ್ನು ಅನುಭವಿ ಆಟಗಾರರಾದ ಏಂಜೆಲೊ ಮ್ಯಾಥ್ಯೂಸ್, ಕುಸಾಲ್ ಮೆಂಡಿಸ್ ಮತ್ತು ದಿನೇಶ್ ಚಾಂಡಿಮಾಲ್ ಅವರಂತಹ ಪ್ರಬಲ ಬ್ಯಾಟಿಂಗ್ ಲೈನ್-ಅಪ್ ಅನ್ನು ಶ್ರೀಲಂಕಾ ತಂಡ ಹೊಂದಿದೆ.
34 ವರ್ಷದ ದಿಮುತ್ ಕರುಣಾರತ್ನೆ ಶ್ರೀಲಂಕಾ ಟೆಸ್ಟ್ ತಂಡವನ್ನು ಮುನ್ನಡೆಸಲಿದ್ದು, ಇವರು ಆರಂಭಿಕ ಬ್ಯಾಟ್ಸ್‌ಮನ್ ಆಗಿರುವುದರಿಂದ ಇನ್ನಿಂಗ್ಸ್‌ನ ಶ್ರೀಲಂಕಾ ತಂಡಕ್ಕೆ ಆರಂಭದಲ್ಲಿ ಉತ್ತಮ ಅಡಿಪಾಯವನ್ನು ಒದಗಿಸಲು ಎದುರು ನೋಡುತ್ತಾರೆ.
24 ವರ್ಷದ ಪಾತುಮ್ ನಿಸ್ಸಾಂಕಾ ಅವರ ದುರಾದೃಷ್ಟ ಮುಂದುವರೆದಿದ್ದು, ಐರ್ಲೆಂಡ್ ವಿರುದ್ಧದ ಟೆಸ್ಟ್ ತಂಡದಿಂದ ಹೊರಗುಳಿದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದರೂ, ಪಾತುಮ್ ನಿಸ್ಸಾಂಕಾ ಅವರ ಇತ್ತೀಚಿನ ಕಳಪೆ ಫಾರ್ಮ್‌ನ ಕಾರಣದಿಂದ ನ್ಯೂಜಿಲೆಂಡ್ ಪ್ರವಾಸಕ್ಕೂ ಅವರನ್ನು ತಂಡದಿಂದ ಕಡೆಗಣಿಸಲಾಗಿತ್ತು.
ಶ್ರೀಲಂಕಾ ತಂಡ ತನ್ನ ಕೊನೆಯ ಟೆಸ್ಟ್ ಸರಣಿಯನ್ನು ನ್ಯೂಜಿಲೆಂಡ್ ತಂಡದ ವಿರುದ್ಧ ಆಡಿತ್ತು. ಆದರೆ, ಅಲ್ಲಿ ಅವರು ಕಿವೀಸ್ ವಿರುದ್ಧ 2-0 ಅಂತರದ ಸೋಲು ಅನುಭವಿಸಿದ್ದರು.
ದಿಮುತ್ ಕರುಣಾರತ್ನೆ ನಾಯಕತ್ವದ ತಂಡವು ತಮ್ಮ ಪ್ರದರ್ಶನವನ್ನು ಉತ್ತಮಗೊಳಿಸಲು ಮತ್ತು ಮುಂಬರುವ ಐರ್ಲೆಂಡ್ ವಿರುದ್ಧದ ಸರಣಿಯನ್ನು ಗೆಲ್ಲಲು ಪ್ರಯತ್ನಿಸಲಿದೆ. ಮೊದಲ ಟೆಸ್ಟ್ ಪಂದ್ಯದ ನಂತರ ಎರಡನೇ ಟೆಸ್ಟ್ ಪಂದ್ಯ ಏಪ್ರಿಲ್ 24ರಿಂದ 28ರವರೆಗೆ ಗಾಲೆಯಲ್ಲಿ ನಡೆಯಲಿದೆ.
ಐರ್ಲೆಂಡ್ ವಿರುದ್ಧ ಶ್ರೀಲಂಕಾ ಟೆಸ್ಟ್ ತಂಡ
ದಿಮುತ್ ಕರುಣಾರತ್ನೆ (ನಾಯಕ), ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ದಿನೇಶ್ ಚಾಂಡಿಮಾಲ್, ಧನಂಜಯ ಡಿ ಸಿಲ್ವಾ, ಕಮಿಂದು ಮೆಂಡಿಸ್, ನಿಶಾನ್ ಮದುಷ್ಕಾ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ (ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಪ್ರಭಾತ್ ಜಯಸೂರ್ಯ, ದುಶನ್ ಹೇಮಂತ, ಲಸಿತ್ ಎಂಬುಲ್ದೇನಿಯ, ಅಸಿತ ಫೆರ್ನಾಂಡೋ, ವಿಶ್ವ ಫೆರ್ನಾಂಡೋ, ಮಿಲನ್ ರಥನಾಯಕ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications