SL Vs NZ 1st Test: 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ನ್ಯೂಜಿಲೆಂಡ್: ಭಾರತಕ್ಕೆ ಹೆಚ್ಚಾಯ್ತು ತಲೆಬಿಸಿ

ಶ್ರೀಲಂಕಾ ವಿರುದ್ದದ ಟೆಸ್ಟ್ ಸರಣಿಯ ಮೊದಲನೇ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ಸಂಕಷ್ಟಕ್ಕೆ ಸಿಲುಕಿದೆ. ಕ್ರಿಸ್ಟ್‌ಚರ್ಚ್‌ನ ಹಾಗ್ಲೆ ಓವಲ್ ಅಂಗಳದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಎರಡನೇ ದಿನದಾಟದ ಅಂತ್ಯಕ್ಕೆ 162 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದು, ಇನ್ನೂ 193 ರನ್‌ಗಳಿಂದ ಹಿನ್ನಡೆಯಲ್ಲಿದೆ.
ಮೊದಲನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 305 ರನ್ ಕಲೆಹಾಕಿದ್ದ ಶ್ರೀಲಂಕಾ ಎರಡನೇ ದಿನ 50 ರನ್ ಗಳಿಸುವಷ್ಟರಲ್ಲಿ ಉಳಿದ ನಾಲ್ಕು ವಿಕೆಟ್ ಕಳೆದುಕೊಳ್ಳುವ ಮೂಲಕ 355 ರನ್‌ಗಳಿಗೆ ಆಲೌಟ್ ಆಯಿತು. ನಾಯಕ ಟಿಮ್ ಸೌಥಿ 5 ವಿಕೆಟ್ ಪಡೆದರೆ, ಮ್ಯಾಟ್ ಹೆನ್ರಿ 4 ವಿಕೆಟ್ ಪಡೆದುಕೊಂಡರು, ಮೈಕೆಲ್ ಬ್ರೇಸ್‌ವೆಲ್ ಒಂದು ವಿಕೆಟ್ ಪಡೆದರು.
ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ಉತ್ತಮ ಆರಂಭವನ್ನೇ ಪಡೆಯಿತು. ಟಾಮ್ ಲಾಥಮ್ ಮತ್ತು ಡಿವೋನ್ ಕಾನ್ವೆ ಮೊದಲನೇ ವಿಕೆಟ್‌ಗೆ 67 ರನ್‌ಗಳ ಜೊತೆಯಾಟ ಆಡಿದರು. 30 ರನ್ ಗಳಿಸಿದ ಡಿವೋನ್ ಕಾನ್ವೆ ಔಟಾದರು. ತಕ್ಷಣವೇ ಇನ್ನೆರೆಡು ವಿಕೆಟ್ ಕಳೆದುಕೊಳ್ಳುವ ಮೂಲಕ ನ್ಯೂಜಿಲೆಂಡ್ ಸಂಕಷ್ಟಕ್ಕೆ ಸಿಲುಕಿತು.

ಟಾಮ್ ಲಾಥಮ್ ಅರ್ಧಶತಕ
ಕೇನ್ ವಿಲಿಯಮ್ಸನ್ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಹೆನ್ರಿ ನಿಕೋಲಸ್ 2 ರನ್ ಗಳಿಸಿ ಔಟಾದರು. 67 ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡಿದ್ದ ನ್ಯೂಜಿಲೆಂಡ್ 76 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು. ನಂತರ ಟಾಮ್ ಲಾಥಮ್ ಮತ್ತು ಡೇರಿಲ್ ಮಿಚೆಲ್ ಉತ್ತಮ ಜೊತೆಯಾಟ ಆಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು.
ಈ ಜೋಡಿ 4ನೇ ವಿಕೆಟ್‌ಗೆ 58 ರನ್‌ಗಳನ್ನು ಗಳಿಸಿತು. 67 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಟಾಮ್ ಲಾಥಮ್ ಅಸಿತಾ ಫರ್ನಾಂಡೊಗೆ ಕ್ಲೀನ್ ಬೌಲ್ಡ್ ಆದರು, ನಂತರ ಬಂದ ವಿಕೆಟ್ ಕೀಪರ್ ಬ್ಯಾಟರ್ ಟಾಮ್ ಬ್ಲಂಡೆಲ್ 7 ರನ್‌ಗಳಿಗೆ ಔಟಾಗುವ ಮೂಲಕ ನ್ಯೂಜಿಲೆಂಡ್ ಹಿನ್ನಡೆ ಅನುಭವಿಸಿತು.
ಡೇರಿಲ್ ಮಿಚೆಲ್ ಅಜೇಯ 40 ರನ್ ಗಳಿಸಿದ್ದು ಮೂರನೇ ದಿನಕ್ಕೆ ವಿಕೆಟ್ ಉಳಿಸಿಕೊಂಡಿದ್ದಾರೆ. ಮಿಚೆಲ್ ಬ್ರೇಸ್‌ವೆಲ್ ಅಜೇಯ 9 ರನ್ ಗಳಿಸಿದ್ದು ಮೂರನೇ ದಿನ ದೊಡ್ಡ ಮೊತ್ತ ಗಳಿಸುವ ಉತ್ಸಾಹದಲ್ಲಿದ್ದಾರೆ. ಶ್ರೀಲಂಕಾದ ಮೊದಲ ಇನ್ನಿಂಗ್ಸ್ ಸ್ಕೋರ್ ಸಮಗೊಳಿಸಲು ನ್ಯೂಜಿಲೆಂಡ್ ಇನ್ನೂ 193 ರನ್ ಗಳಿಸಬೇಕಿದೆ. ಅಸಿತಾ ಫರ್ನಾಂಡೊ ಮತ್ತು ಲಾಹಿರು ಕುಮಾರ ತಲಾ ವಿಕೆಟ್ ಪಡೆದರು, ಕಸುನ್ ರಜಿತ ಒಂದು ವಿಕೆಟ್ ಪಡೆದರು.

ಭಾರತಕ್ಕೆ ಇದು ಶುಭಸುದ್ದಿಯಲ್ಲ
ಶ್ರೀಲಂಕಾ ನ್ಯೂಜಿಲೆಂಡ್ ವಿರುದ್ಧ ಮೇಲುಗೈ ಸಾಧಿಸಿರುವುದು ಭಾರತ ತಂಡಕ್ಕೆ ತಲೆನೋವಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಬೇಕಾದರೆ ಭಾರತ ಆಸ್ಟ್ರೇಲಿಯಾ ವಿರುದ್ಧ ಗೆಲ್ಲಬೇಕಾಗಿದೆ, ಆದರೆ ಎರಡನೇ ದಿನದಲ್ಲೂ ಆಸ್ಟ್ರೇಲಿಯಾ ಅತ್ಯುತ್ತಮ ಬ್ಯಾಟಿಂಗ್ ಮುಂದುವರೆಸಿದ್ದು, ಬೃಹತ್ ಮೊತ್ತದತ್ತ ಮುನ್ನಡೆದಿದೆ. ಒಂದು ವೇಳೆ ಭಾರತ ಈ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರೂ, ಶ್ರೀಲಂಕಾ ನ್ಯೂಜಿಲೆಂಡ್ ವಿರುದ್ಧ ಸೋಲಬೇಕಾಗಿದೆ.
ಭಾರತ ಆಸ್ಟ್ರೇಲಿಯಾ ವಿರುದ್ಧ ಸೋತು, ಶ್ರೀಲಂಕಾ ನ್ಯೂಜಿಲೆಂಡ್ ವಿರುದ್ಧದ ಎರಡೂ ಟೆಸ್ಟ್ ಪಂದ್ಯಗಳನ್ನು ಗೆದ್ದರೆ, ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಲಿದ್ದಾರೆ.

ಶ್ರೀಲಂಕಾ, ನ್ಯೂಜಿಲೆಂಡ್ ಪ್ಲೇಯಿಂಗ್ ಇಲೆವೆನ್
ನ್ಯೂಜಿಲೆಂಡ್: ಟಾಮ್ ಲ್ಯಾಥಮ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್, ಟಿಮ್ ಸೌಥಿ (ನಾಯಕ), ಮ್ಯಾಟ್ ಹೆನ್ರಿ, ನೀಲ್ ವ್ಯಾಗ್ನರ್, ಬ್ಲೇರ್ ಟಿಕ್ನರ್.
ಶ್ರೀಲಂಕಾ: ಓಷಾದ ಫೆರ್ನಾಂಡೊ, ದಿಮುತ್ ಕರುಣಾರತ್ನೆ (ನಾಯಕ), ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ದಿನೇಶ್ ಚಾಂಡಿಮಲ್, ಧನಂಜಯ ಡಿ ಸಿಲ್ವಾ, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ಕಸುನ್ ರಜಿತ, ಪ್ರಭಾತ್ ಜಯಸೂರ್ಯ, ಅಸಿತ ಫೆರ್ನಾಂಡೋ, ಲಹಿರು ಕುಮಾರ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications