
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದದಲ್ಲಿ ಶ್ರೀಲಂಕಾ ಉತ್ತಮ ಸ್ಥಿತಿಯಲ್ಲಿದೆ. ಮೊದಲನೇ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ 6 ವಿಕೆಟ್ ಕಳೆದುಕೊಂಡು 305 ರನ್ ಕಲೆಹಾಕಿದೆ. ನಾಯಕ ದಿಮುತ್ ಕರುಣರತ್ನೆ ಮತ್ತು ಕುಶಾಲ್ ಮೆಂಡಿಸ್ ಅರ್ಧಶತಕ ಗಳಿಸಿ ತಂಡಕ್ಕೆ ಆಸರೆಯಾದರು.
ಕ್ರಿಸ್ಟ್‌ಚರ್ಚ್‌ನ ಹಾಗ್ಲೆ ಓವಲ್ ಅಂಗಳದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಶ್ರೀಲಂಕಾವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಬೇಕೆನ್ನುವ ಕಿವೀಸ್ ಪಡೆಯ ಲೆಕ್ಕಾಚಾರ ತಲೆಕೆಳಗಾಯಿತು. ಶ್ರೀಲಂಕಾದ ಬ್ಯಾಟರ್ ಗಳು ಅತ್ಯುತ್ತಮ ಪ್ರದರ್ಶನ ನೀಡಿದರು.
ಆರಂಭಿಕ ಬ್ಯಾಟರ್ ಓಶದ ಫರ್ನಾಂಡೊ 13 ರನ್‌ಗಳಿಗೆ ಔಟ್ ಆಗುವ ಮೂಲಕ ನಿರಾಸೆ ಅನುಭವಿಸಿದರು. ಮತ್ತೊಬ್ಬ ಆರಂಭಿಕರಾದ ದಿಮುತ್ ಕರುಣರತ್ನೆ 87 ಎಸೆತಗಳಲ್ಲಿ 50 ರನ್ ಗಳಿಸುವ ಮೂಲಕ ಅರ್ಧಶತಕ ಗಳಿಸಿದರು.
ಕುಶಾಲ್ ಮೆಂಡಿಸ್ ಅತ್ಯುತ್ತಮ ಬ್ಯಾಟಿಂಗ್ ಮಾಡಿದರು. 83 ಎಸೆತಗಳಲ್ಲಿ 16 ಬೌಂಡರಿ ಸಹಿತ 87 ರನ್ ಗಳಿಸುವ ಮೂಲಕ ಶ್ರೀಲಂಕಾದ ರನ್ ಗಳಿಕೆಯ ವೇಗವನ್ನು ಹೆಚ್ಚಿಸಿದರು. ಕರುಣರತ್ನೆ ಮತ್ತು ಕುಶಾಲ್ ಮೆಂಡಿಸ್ ಎರಡನೇ ವಿಕೆಟ್‌ಗೆ 137 ರನ್‌ಗಳ ಜೊತೆಯಾಟ ಆಡಿದರು.

ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ
ಕುಶಾಲ್ ಮೆಂಡಿಸ್ ಮತ್ತು ದಿಮುತ್ ಕರುಣರತ್ನೆ ಔಟಾದ ನಂತರ ಬಂದ ಆಟಗಾರರು ದೊಡ್ಡ ಮೊತ್ತ ಗಳಿಸದೇ ಇದ್ದರು, ಅತ್ಯಮೂಲ್ಯ ರನ್‌ಗಳ ಕಾಣಿಕೆಯನ್ನು ನೀಡಲು ಸಫಲವಾದರು. ದಿನೇಶ್ ಚಾಂಡಿಮಾಲ್ 39 ರನ್ ಗಳಿಸಿದರು. ಏಂಜಲೋ ಮ್ಯಾಥ್ಯೂಸ್ 47 ರನ್ ಗಳಿಸಿದರು, ಅಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ 7000 ರನ್ ಪೂರೈಸಿದರು, ಈ ಸಾಧನೆ ಮಾಡಿದ ಮೂರನೇ ಲಂಕಾ ಆಟಗಾರ ಎನಿಸಿಕೊಂಡಿದ್ದಾರೆ.
ನಿರೋಶನ್ ಡಿಕ್ವೆಲ್ಲಾ ಮಾತ್ರ 7 ರನ್ ಗಳಿಸಿ ನಿರಾಸೆ ಮೂಡಿಸಿದರು. ಧನಂಜಯ ಡಿಸಿಲ್ವ ಅಜೇಯ 39 ರನ್ ಗಳಿಸಿದ್ದು 2ನೇ ದಿನಕ್ಕೆ ವಿಕೆಟ್ ಉಳಿಸಿಕೊಂಡಿದ್ದಾರೆ. ಕಸುನ್ ರಜಿತ ಕೂಡ 16 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.
ನಾಯಕ ಟಿಮ್ ಸೌಥಿ 3 ವಿಕೆಟ್ ಪಡೆದರೆ, ಮ್ಯಾಟ್ ಹೆನ್ರಿ 2 ವಿಕೆಟ್ ಪಡೆದರು. ಮೈಕೆಲ್ ಬ್ರೇಸ್‌ವೆಲ್ ಒಂದು ವಿಕೆಡ್ ಪಡೆದುಕೊಂಡರು. ಬೆಳಕಿನ ಸಮಸ್ಯೆಯಿಂದಾಗಿ 75 ಓವರ್ ಗಳಿಗೆ ಮೊದಲ ದಿನದಾಟವನ್ನು ಮುಕ್ತಾಯಗೊಳಿಸಲಾಯಿತು.
ವಿಶ್ವ ಟೆಸ್ಟ್‌ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಲು ಶ್ರೀಲಂಕಾ ನ್ಯೂಜಿಲೆಂಡ್ ವಿರುದ್ಧದ ಎರಡೂ ಪಂದ್ಯಗಳನ್ನು ಗೆಲ್ಲಬೇಕಿದೆ. ಭಾರತ ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಟೆಸ್ಟ್‌ನಲ್ಲಿ ಸೋತರೆ ಮಾತ್ರ ಶ್ರೀಲಂಕಾಗೆ ಅವಕಾಶವಿದೆ. ಒಂದು ವೇಳೆ ಭಾರತ ಆಸ್ಟ್ರೇಲಿಯಾ ವಿರುದ್ಧದ ಸರಣಿಯ 4ನೇ ಟೆಸ್ಟ್ ಗೆದ್ದರೆ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಲಿದ್ದು, ಶ್ರೀಲಂಕಾ ರೇಸ್‌ನಿಂದ ಹೊರಬೀಳಲಿದೆ.

ಉಭಯ ತಂಡಗಳ ಆಡುವ ಬಳಗ
ನ್ಯೂಜಿಲೆಂಡ್: ಟಾಮ್ ಲ್ಯಾಥಮ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್, ಟಿಮ್ ಸೌಥಿ (ನಾಯಕ), ಮ್ಯಾಟ್ ಹೆನ್ರಿ, ನೀಲ್ ವ್ಯಾಗ್ನರ್, ಬ್ಲೇರ್ ಟಿಕ್ನರ್.
ಶ್ರೀಲಂಕಾ: ಓಷಾದ ಫೆರ್ನಾಂಡೊ, ದಿಮುತ್ ಕರುಣಾರತ್ನೆ (ನಾಯಕ), ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ದಿನೇಶ್ ಚಾಂಡಿಮಲ್, ಧನಂಜಯ ಡಿ ಸಿಲ್ವಾ, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ಕಸುನ್ ರಜಿತ, ಪ್ರಭಾತ್ ಜಯಸೂರ್ಯ, ಅಸಿತ ಫೆರ್ನಾಂಡೋ, ಲಹಿರು ಕುಮಾರ.