ಶ್ರೀಲಂಕಾ ಪ್ರವಾಸ ಕೈಗೊಂಡು ಟೆಸ್ಟ್ ಸರಣಿಯಲ್ಲಿ ಆಡುತ್ತಿರುವ ಪಾಕಿಸ್ತಾನ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ರೋಚಕವಾಗಿ ನಡೆದ ಈ ಪಂದ್ಯದಲ್ಲಿ ಪಾಕಿಸ್ತಾನ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದು ಶ್ರೀಲಂಕಾ ತಂಡಕ್ಕೆ ಅದರ ತವರಿನಲ್ಲಿಯೇ ಸೋಲುಣಿಸುವಲ್ಲಿ ಬಾಬರ್ ಬಳಗ ಯಶಸ್ವಿಯಾಗಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ 1-0 ಅಂತರದ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ 131 ರನ್‌ಗಳ ಸುಲಭ ಗುರಿಯನ್ನು ಪಡೆದುಕೊಂಡಿತು. ಈ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡ ಕೂಡ ಆರಂಭಿಕ ಆಘಾತವನ್ನು ಅನುಭವಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಅದರಲ್ಲೂ ನಾಲ್ಕನೇ ದಿನದಾಟದ ಅಂತ್ಯದಲ್ಲಿ 48 ರನ್‌ಗಳನ್ನು ಗಳಿಸಿ 3 ವಿಕೆಟ್ ಕಳೆದುಕೊಂಡಾಗ ಶ್ರೀಲಂಕಾ ಮುಂದೆಯೂ ಗೆಲುವಿನ ಅವಕಾಶಗಳು ತೆರೆದೇ ಇತ್ತು. ಆದರೆ ಪಾಕ್ ಮುಂದಿದ್ದ ಗುರಿ ಅಲ್ಪವಾಗಿದ್ದ ಕೊನೆಯ ದಿನದಾಟದಲ್ಲಿ ಈ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗಿದೆ.

ಕೊನೆಯ ಇನ್ನಿಂಗ್ಸ್‌ನಲ್ಲಿ ಇಮಾಮ್ ಉಲ್ ಹಕ್ ಪಾಕಿಸ್ತಾನದ ಪರವಾಗಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ ಸೌದ್ ಶಕೀಲ್ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಉತ್ತಮ ಜೊತೆಯಾಟವೊಂದರಲ್ಲಿ ಭಾಗುಯಾದ ಕಾರಣ ಪಾಕ್‌ಗೆ ಈ ಗುರಿಯನ್ನು ತಲುಪಲು ಕಾರಣವಾಯಿತು. ಹೀಗಾಗಿ 4 ವಿಕೆಟ್‌ಗಳ ಅಂತರದಿಂದ ಪಾಕಿಸ್ತಾನ ತಂಡ ಈ ಮೊದಲ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಇನ್ನು ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ ತಂಡ ಧನಂಜಯ ಡಿಸಿಲ್ವ ಅವರ ಭರ್ಜರಿ ಶತಕದ ಕಾರಣದಿಂದಾಗಿ 312 ರನ್‌ಗಳನ್ನು ಗಳಿಸಿ ಆಲೌಟ್ ಆಗಿತ್ತು. ನಂತರ ಪಾಕಿಸ್ತಾನ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ 461 ರನ್‌ಗಳಿಸಿ ಮುನ್ನಡೆ ಸಾಧಿಸಿತು. ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದರೂ ಸೌದ್ ಶಕೀಬ್ ಅಮೋಘ ದ್ವಿಶತಕ ಸಿಡಿಸಿ ಪಾಕಿಸ್ತಾನ ತಂಡವನ್ನು ಹಿನ್ನಡೆಯಿಂದ ಕಾಪಾಡಿದ್ಗದು ಮಾತ್ರವಲ್ಲದೆ ತಂಡಕ್ಕೆ ಭರ್ಜರಿ ಮುನ್ನಡೆ ದೊರೆಯುವಂತೆ ಮಾಡಿದರು. ಈ ಪ್ರದರ್ಶನ ಈ ಪಂದ್ಯದಲ್ಲಿ ಪಾಕಿಸ್ತಾನ ಹಿಡಿತ ಸಾಧಿಸುವಂತೆ ಮಾಡಿತು.
ಮೊದಲ ಇನ್ನಿಂಗ್ಸ್‌ನಲ್ಲಿ 149 ರನ್‌ಗಳ ಮುನ್ನಡೆಯನ್ನು ಪಡೆದುಕೊಂಡ ಪಾಕಿಸ್ತಾನ ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ ಪರವಾಗಿ ಧನಂಜಯ ಡಿಸಿಲ್ವ 82 ರನ್‌ಗಳಿಸಿದ್ದರೆ ನಿಶನ್ ಮಧುಶಂಕ 52 ರನ್‌ಗಳ ಕೊಡುಗೆ ನೀಡಿದ್ದು ಹೊರತುಪಡಿಸಿದರೆ ಉಳಿದ ಬ್ಯಾಟರ್‌ಗಳು ನಿರಾಸೆ ಮೂಡಿಸಿದರು. ಈ ಕಾರಣದಿಂದಾಗಿ ಶ್ರೀಲಂಕಾ 279 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತವಾಯಿತು. ಹೀಗಾಗಿ ಕೊನೆಯ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನದ ಗೆಲುವಿಗೆ 131 ರನ್‌ಗಳ ಸುಲಭ ಗುರಿ ಮುಂದಿತ್ತು.
ಶ್ರೀಲಂಕಾ ಆಡುವ ಬಳಗ: ದಿಮುತ್ ಕರುಣಾರತ್ನೆ (ನಾಯಕ), ನಿಶಾನ್ ಮದುಷ್ಕಾ, ಕುಸಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ದಿನೇಶ್ ಚಾಂಡಿಮಲ್, ಸದೀರ ಸಮರವಿಕ್ರಮ (ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಪ್ರಭಾತ್ ಜಯಸೂರ್ಯ, ವಿಶ್ವ ಫೆರ್ನಾಂಡೋ, ಕಸುನ್ ರಜಿತ
ಬೆಂಚ್: ಪಾತುಂ ನಿಸ್ಸಾಂಕ, ಕಮಿಂದು ಮೆಂಡಿಸ್, ಪ್ರವೀಣ್ ಜಯವಿಕ್ರಮ, ದಿಲ್ಶನ್ ಮಧುಶಂಕ, ಲಕ್ಷಿತಾ ಮಾನಸಿಂಗ್
ಪಾಕಿಸ್ತಾನ ಆಡುವ ಬಳಗ: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಶಾನ್ ಮಸೂದ್, ಬಾಬರ್ ಅಜಮ್ (ನಾಯಕ), ಸೌದ್ ಶಕೀಲ್, ಸರ್ಫರಾಜ್ ಅಹ್ಮದ್ (ವಿಕೆಟ್ ಕೀಫರ್), ಅಘಾ ಸಲ್ಮಾನ್, ನೌಮನ್ ಅಲಿ, ಅಬ್ರಾರ್ ಅಹ್ಮದ್, ಶಾಹೀನ್ ಅಫ್ರಿದಿ, ನಸೀಮ್ ಶಾ
ಬೆಂಚ್: ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ಹುರೈರಾ, ಮೊಹಮ್ಮದ್ ನವಾಜ್, ಅಮೀರ್ ಜಮಾಲ್, ಹಸನ್ ಅಲಿ