ಸೋಮವಾರ, ಸೆಪ್ಟೆಂಬರ್ 25ರಂದು ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 2023ರ ಏಷ್ಯನ್ ಗೇಮ್ಸ್‌ನ ಮಹಿಳಾ ಕ್ರಿಕೆಟ್ ಪಂದ್ಯಾವಳಿಯ ಫೈನಲ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡವು ಫೈನಲ್‌ನಲ್ಲಿ ಶ್ರೀಲಂಕಾ ತಂಡವನ್ನು 19 ರನ್‌ಗಳಿಂದ ಸೋಲಿಸಿತು.
ಈ ಮೂಲಕ ಭಾರತ ಮಹಿಳಾ ತಂಡವು ಕ್ರಿಕೆಟ್‌ನಲ್ಲಿ ತನ್ನ ಚೊಚ್ಚಲ ಏಷ್ಯನ್ ಗೇಮ್ಸ್ ಚಿನ್ನದ ಪದಕವನ್ನು ಗೆದ್ದುಕೊಂಡಿತು. ರನ್ನರ್-ಅಪ್ ಶ್ರೀಲಂಕಾ ಮಹಿಳಾ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು.
ಈ ವೇಳೆ ಭಾರತದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಅವರು ಕ್ರಿಕೆಟ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಕ್ಕಾಗಿ ಹರ್ಷಗೊಂಡಿದ್ದಾರೆ ಮತ್ತು ರಾಷ್ಟ್ರಗೀತೆಯನ್ನು ನುಡಿಸುವಾಗ ನನ್ನ ಕಣ್ಣಲ್ಲಿ ನೀರು ಬಂದಿತ್ತು ಎಂದು ಹೇಳಿದ್ದಾರೆ.

ಇದು ತನಗೆ ಬಹಳ ವಿಶೇಷವಾದ ಕ್ಷಣವಾಗಿದೆ ಮತ್ತು ಬಹುರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಪಟ್ಟಿಗೆ ಕೊಡುಗೆ ನೀಡಿರುವು ಖುಷಿ ಕೊಟ್ಟಿದೆ ಎಂದು ಸ್ಮೃತಿ ಮಂಧಾನ ತಿಳಿಸಿದರು.
"ಇದು ತುಂಬಾ ವಿಶೇಷವಾಗಿದೆ. ನಾವು ಇದನ್ನು ಟಿವಿಯಲ್ಲಿ ನೋಡಿದ್ದೇವೆ. ನೀರಜ್ ಚೋಪ್ರಾ ಚಿನ್ನ ಗೆದ್ದಾಗ, ನಾನು ಕ್ರಿಕೆಟ್ ಪಂದ್ಯದಲ್ಲಿ ಆಡುತ್ತಿದೆ. ರಾಷ್ಟ್ರಗೀತೆಯನ್ನು ನುಡಿಸುವ ಮತ್ತು ಭಾರತದ ರಾಷ್ಟ್ರಧ್ವಜವನ್ನು ಮೇಲೇರಿದ ರೀತಿ, ಇದು ಬಹಳ ವಿಶೇಷವಾಗಿತ್ತು ಮತ್ತು ನನ್ನ ಕಣ್ಣಲ್ಲಿ ನೀರು ಬಂತು".
"ನಾವು ಭಾರತದ ಪದಕ ಪಟ್ಟಿಗೆ ಕೊಡುಗೆ ನೀಡಿದ್ದಕ್ಕೆ ನಿಜವಾಗಿಯೂ ಸಂತೋಷವಾಗಿದೆ. ಚಿನ್ನ ಚಿನ್ನವೇ. ಇಂದು ನಾವು ನಮ್ಮ ಅತ್ಯುತ್ತಮವಾದುದನ್ನು ನೀಡಿದ್ದಕ್ಕಾಗಿ ನಿಜವಾಗಿಯೂ ಸಂತೋಷವಾಗಿದೆ," ಎಂದು ಸ್ಮೃತಿ ಮಂಧಾನ ತಮ್ಮ ಭಾವನೆ ವ್ಯಕ್ತಪಡಿಸಿದರು.

ಟಿಟಾಸ್ ಸಧು ಅವರ ಅದ್ಭುತ ಸ್ಪಿನ್, ದೀಪ್ತಿ ಶರ್ಮಾ ಮತ್ತು ದೇವಿಕಾ ವೈದ್ಯ ಅವರ ಅದ್ಭುತ ಬೌಲಿಂಗ್‌ನಿಂದ ಭಾರತವು 117 ರನ್‌ಗಳ ಸಾಧಾರಣ ಮೊತ್ತವನ್ನು ರಕ್ಷಿಸಲು ನೆರವಾಯಿತು ಮತ್ತು ತಮ್ಮ ಚೊಚ್ಚಲ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿ ಭಾರತ ತಂಡ ಸ್ಮೃತಿ ಮಂಧಾನ 46 ರನ್‌ಗಳ ಅಮೋಘ ಬ್ಯಾಟಿಂಗ್ ಮತ್ತು ಜೆಮಿಮಾ ರೋಡ್ರಿಗಸ್ 42 ರನ್‌ಗಳ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 116 ರನ್ ಗಳಿಸಿತು.
ಶ್ರೀಲಂಕಾ ಪರ ಉದೇಶಿಕಾ ಪ್ರಬೋಧನಿ 16 ರನ್ ನೀಡಿ 2 ವಿಕೆಟ್, ಇನೋಕಾ ರಣವೀರ 21 ರನ್ ನೀಡಿ 2 ವಿಕೆಟ್ ಮತ್ತು ಸುಗಂದಿಕಾ ಕುಮಾರಿ 30 ರನ್ ನೀಡಿ 2 ವಿಕೆಟ್ ಪಡೆದರು.

ಭಾರತದ 117 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡವು 8 ವಿಕೆಟ್ ಕಳೆದುಕೊಂಡು 97 ರನ್‌ಗಳಿಗೆ ನಿಯಂತ್ರಣಗೊಂಡಿತು.
ಟಿಟಾಸ್ ಸಧು ಕೇವಲ 6 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತದ ಅತ್ಯುತ್ತಮ ಬೌಲರ್ ಎನಿಸಿದರು. ರಾಜೇಶ್ವರಿ ಗಾಯಕ್ವಾಡ್ ಎರಡು ವಿಕೆಟ್ ಮತ್ತು ದೇವಿಕಾ ವೈದ್ಯ ಒಂದು ವಿಕೆಟ್ ಪಡೆದರು.
ಈ ಚಿನ್ನದೊಂದಿಗೆ ಭಾರತ 2023ರ ಏಷ್ಯನ್ ಗೇಮ್ಸ್‌ನಲ್ಲಿ 2 ಚಿನ್ನ, 3 ಬೆಳ್ಳಿ ಮತ್ತು 6 ಕಂಚಿನ ಪದಕಗಳನ್ನು ಒಳಗೊಂಡಂತೆ 11 ಪದಕಗಳನ್ನು ಹೊಂದಿದೆ. ಏಷ್ಯನ್ ಗೇಮ್ಸ್‌ನಲ್ಲಿ ಅತ್ಯುತ್ತಮ ಪ್ರಯತ್ನಕ್ಕಾಗಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅಭಿನಂದಿಸಿದ್ದಾರೆ.
"ಭಾರತೀಯ ಮಹಿಳಾ ಕ್ರಿಕೆಟ್ ತಂಡವು 2023ರ ಏಷ್ಯನ್ ಗೇಮ್ಸ್‌ನಲ್ಲಿ ಶ್ರೀಲಂಕಾ ವಿರುದ್ಧ ಪ್ರಬಲ ಗೆಲುವಿನೊಂದಿಗೆ ಚಿನ್ನವನ್ನು ಗೆದ್ದಿದೆ. 18 ವರ್ಷದ ಟಿಟಾಸ್ ಸಧು ಅವರ ಬೌಲಿಂಗ್ ಅದ್ಭುತ (6ಕ್ಕೆ3). ಈ ಐತಿಹಾಸಿಕ ಸಾಧನೆಗಾಗಿ ತಂಡ ಮತ್ತು ಸಹಾಯಕ ಸಿಬ್ಬಂದಿಗೆ ಅಭಿನಂದನೆಗಳು," ಎಂದು ಎಕ್ಸ್(ಟ್ವಿಟ್ಟರ್)ನಲ್ಲಿ ಜಯ್ ಶಾ ಬರೆದುಕೊಂಡಿದ್ದಾರೆ.