ಆ ನಿರ್ಧಾರಕ್ಕೆ ನಾವು ಸಿದ್ಧವಾಗಿರಲಿಲ್ಲ: ಕೊಹ್ಲಿ ನಾಯಕತ್ವದ ತ್ಯಜಿಸಿದ ಬಗ್ಗೆ ಗಂಗೂಲಿ ಸ್ಪೋಟಕ ಹೇಳಿಕೆ
ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಭಾರತ ಮತ್ತೊಮ್ಮೆ ಸೋಲು ಅನುಭವಿಸಿದ ಬಳಿಕ ಟೀಮ್ ಇಂಡಿಯಾ ನಾಯಕತ್ವದ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಬಿಸಿಸಿಐ ಅಧ್ಯಕ್ಷರಾಗಿದ್ದ ಸೌರವ್ ಗಂಗೂಲಿ ನೀಡಿದ ಹೇಳಿಕೆ ಕುತೂಹಲ ಮೂಡಿಸಿದೆ.
ಟೀಮ್ ಇಂಡಿಯಾದ ಮೂರು ಮಾದರಿಯ ನಾಯಕನಾಗಿದ್ದ ವಿರಾಟ್ ಕೊಹ್ಲಿಯನ್ನು ವೈಟ್‌ಬಾಲ್ ಮಾದರಿಯ ನಾಯಕತ್ವದಿಂದ ಬಿಸಿಸಿಐ ಕೆಳಕ್ಕಿಳಿಸಿತ್ತು. ಈ ವಿಚಾರದ ಬಗ್ಗೆ ಸ್ವತಃ ವಿರಾಟ್ ಕೊಹ್ಲಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಅಲ್ಲದೆ ಈ ಬೆಳವಣಿಗೆ ಅಂದು ಬಿಸಿಸಿಐ ಅಧ್ಯಕ್ಷರಾಗಿದ್ದ ಸೌರವ್ ಗಂಗೂಲಿ ಹಾಗೂ ವಿರಾಟ್ ಕೊಹ್ಲಿ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿತ್ತು.

ಈ ಮಧ್ಯೆ 2022ರ ಆರಂಭದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಟೆಸ್ಟ್ ಸರಣಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡು ಸೋಲು ಅನುಭವಿಸಿತ್ತು. ಈ ಸೋಲಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ವೈಟ್‌ಬಾಲ್ ಬಳಿಕ ಟೆಸ್ಟ್ ಸರಣಿಯ ನಾಯಕತ್ವಕ್ಕೂ ರಾಜೀನಾಮೆ ನೀಡಿದ್ದರು. ಈ ವಿಚಾರವಾಗಿ ಸೌರವ್ ಗಂಗೂಲಿ ಮಾತನಾಡಿದ್ದಾರೆ. ಅಂದು ವಿರಾಟ್ ಕೊಹ್ಲಿ ತೆಗೆದುಕೊಂಡ ಆ ನಿರ್ಧಾರಕ್ಕೆ ಬಿಸಿಸಿಐ ಸಿದ್ಧವೇ ಆಗಿರಲಿಲ್ಲ ಎಂದಿದ್ದಾರೆ ಸೌರವ್ ಗಂಗೂಲಿ.
"ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವ ತೊರೆಯುವ ಬಗ್ಗೆ ಬಿಸಿಸಿಐ ಸಿದ್ಧವೇ ಆಗಿರಲಿಲ್ಲ. ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ನಮಗೂ ಇದು ಅನಿರೀಕ್ಷಿತವೇ ಆಗಿತ್ತು. ವಿರಾಟ್ ಕೊಹ್ಲಿ ಮಾತ್ರವೇ ಟೆಸ್ಟ್ ನಾಯಕತ್ವವನ್ನು ಯಾವ ಕಾರಣಕ್ಕೆ ತೊರೆದರು ಎಂಬುದಕ್ಕೆ ಉತ್ತರ ನೀಡಬಹುದು. ಈಗಾಗಲೇ ಅವರು ನಾಯಕತ್ವ ತ್ಯಜಿಸಿರುವ ಕಾರಣ ಆ ಬಗ್ಗೆ ಮಾತನಾಡಿಯೂ ಪ್ರಯೋಜನವಿಲ್ಲ. ಆ ಸಂದರ್ಭದಲ್ಲಿ ರೋಹಿತ್ ಶರ್ಮಾ ಅವರೇ ಉತ್ತಮ ಆಯ್ಕೆಯಾಗಿದ್ದ ಕಾರಣ ಆಯ್ಕೆಗಾರರು ಅವರನ್ನು ನಾಯಕನಾಗಿ ನೇಮಿಸಿದರು" ಎಂದು ಸೌರವ್ ಗಂಗೂಲಿ ಹೇಳಿಕೆ ನೀಡಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ರೋಹಿತ್ ಶರ್ಮಾ ನಾಯಕತ್ವ ನಿರ್ವಹಿಸಿದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ಅಭಿಮಾನಿಗಳು ಮಾತ್ರವಲ್ಲದೆ ಕ್ರಿಕೆಟ್ ಪಂಡಿತರು ಕೂಡ ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಆದರೆ ಸೌರವ್ ಗಂಗೂಲಿ ಮಾತ್ರ ರೋಹಿತ್ ಶರ್ಮಾ ಬೆಂಬಲಕ್ಕೆ ನಿಂತಿದ್ದಾರೆ.
"ಆ ಸಂದರ್ಭದಲ್ಲಿ ಭಾರತ ತಂಡವನ್ನು ಟೆಸ್ಟ್ ಮಾದರಿಯಲ್ಲಿ ಮುನ್ನಡೆಸಲು ರೋಹಿತ್ ಶರ್ಮಾ ಅವರೇ ಅತ್ಯಂತ ಸೂಕ್ತ ಆಯ್ಕೆಯಾಗಿದ್ದರು. ವಾರು ಐದು ಐಪಿಎಲ್ ಟ್ರೋಫಿಗಳನ್ನು ಗೆದ್ದ ನಾಯಕ. ಯಾವಾಗೆಲ್ಲಾ ಭಾರತ ತಂಡವನ್ನು ಮುನ್ನಡೆಸುವ ಅವಕಾಶ ದೊರೆತಿತ್ತೋ ಆಗೆಲ್ಲಾ ಅವರು ಅದ್ಭುತವಾಗಿ ಮುನ್ನಡೆಸಿದ್ದರು. ಏಷ್ಯಾಕಪ್‌ನಲ್ಲಿಯೂ ಮುನ್ನಡೆಸಿ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಈ ಅವಧಿಯಲ್ಲಿ ಅವರು ಭಾರತ ತಂಡವನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಹಂತಕ್ಕೂ ಮುನ್ನಡೆಸಿದ್ದಾರೆ. ಆದರೂ ಫೈನಲ್‌ನಲ್ಲಿ ನಾವು ಸೋತೆವು ಎಂದಿದ್ದಾರೆ ಸೌರವ್ ಗಂಗೂಲಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications