ODI ನಾಯಕತ್ವ ವಿವಾದ: ವಿರಾಟ್ ಕೊಹ್ಲಿ ತನ್ನ ಕಥೆ ಹೇಳಿದ್ದಾಗಿದೆ, ಗಂಗೂಲಿ ಬಾಯ್ಬಿಡಲಿ ಎಂದ ರವಿಶಾಸ್ತ್ರಿ

ಭಾರತ ಟಿ20 ತಂಡದ ನಾಯಕತ್ವವನ್ನು ತೊರೆಯದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಎಂದಿಗೂ ಕೇಳಲಿಲ್ಲ ಎಂಬ ವಿರಾಟ್ ಕೊಹ್ಲಿ ಹೇಳಿಕೆಯು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ವಿರಾಟ್ ಕೊಹ್ಲಿ ಉತ್ತರದಿಂದ ಅನೇಕ ಆಯಾಮಗಳು ತೆರೆದುಕೊಂಡಿದ್ದು, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯನ್ನ ಪೇಚಿಗೆ ಸಿಲುಕಿಸಿದ್ದನ್ನು ಕಂಡಿದ್ದೇವೆ.
ಸೌರವ್ ಗಂಗೂಲಿ ವಿರಾಟ್ ಕೊಹ್ಲಿ ಟಿ20 ನಾಯಕತ್ವದಿಂದ ಕೆಳಗಿಳಿಯುವ ಮುನ್ನ ಖಾಸಗಿಯಾಗಿ ಕರೆ ಮಾಡಿ, ನಾಯಕತ್ವ ತ್ಯಜಿಸದಂತೆ ಕೇಳಿಕೊಂಡಿದ್ದೆ, ಆದ್ರೆ ವಿರಾಟ್ ಒಪ್ಪಲಿಲ್ಲ ಎಂಬ ಹೇಳಿಕೆ ನೀಡಿದ್ದರು. ಆದ್ರೆ ವಿರಾಟ್ ಇದಕ್ಕೆ ತದ್ವಿರುದ್ದ ಹೇಳಿಕೆ ನೀಡುವ ಮೂಲಕ ಆಶ್ಚರ್ಯ ಮೂಡಿಸಿದ್ದಾರೆ. ಜೊತೆಗೆ ಸೌರವ್ ಗಂಗೂಲಿ ಹೇಳಿದ್ದು ನಿಜವೇ? ಅಥವಾ ವಿರಾಟ್ ಕೊಹ್ಲಿ ಹೇಳುತ್ತಿರುವುದು ಸತ್ಯವೇ? ಎಂಬ ಪ್ರಶ್ನೆಗಳನ್ನ ಹುಟ್ಟುಹಾಕಿದೆ.
ಇದೀಗ ಈ ನಾಯಕತ್ವ ವಿಚಾರಕ್ಕೆ ಸಂಬಂಧಿಸಿದಂತೆ ಸೌರವ್ ಗಂಗೂಲಿ ಬಾಯ್ದಿಡಲಿ ಎಂದು ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
"ವಿರಾಟ್ ಕಥೆಯ ತನ್ನ ಭಾಗವನ್ನು ಹೇಳಿದ್ದಾರೆ. ಅದೇ ರೀತಿ ಮಂಡಳಿಯ ಅಧ್ಯಕ್ಷರು ತಮ್ಮ ಕಥೆಯನ್ನು ಹೇಳುವ ಅಗತ್ಯವಿದೆ. ಉತ್ತಮ ಸಂವಹನದಿಂದ, ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಬಹುದಿತ್ತು'' ಎಂದು ರವಿಶಾಸ್ತ್ರಿ ಇಂಡಿಯನ್ ಎಕ್ಸ್‌ಪ್ರೆಸ್ ಇ.ಅಡ್ಡಾ ಜೊತೆಗಿನ ಸಂವಾದದಲ್ಲಿ ಹೇಳಿದರು.
ಇದರ ಜೊತೆಗೆ ರೋಹಿತ್ ಶರ್ಮಾಗೆ ಲಿಮಿಟೆಡ್ ಓವರ್ ನಾಯಕತ್ವ ನೀಡಿರುವುದರ ಕುರಿತಾಗಿಯೂ ರವಿಶಾಸ್ತ್ರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ರೋಹಿತ್ ಶರ್ಮಾ ಈಗ ಟಿ20 ನಾಯಕ. ಅವರು ವೈಟ್ ಬಾಲ್ ನಾಯಕನಾಗಿರಬೇಕು. ಒಮ್ಮೆ ವಿರಾಟ್ ಅವರು ಟಿ20 ಫಾರ್ಮೆಟ್‌ನಲ್ಲಿ ಮುನ್ನಡೆಸಲು ಬಯಸುವುದಿಲ್ಲ ಎಂದು ಹೇಳಿದಾಗ ಅದು ರೋಹಿತ್‌ಗೆ ತೆರೆದುಕೊಂಡಿತು. ಅವರು ವೈಟ್ ಬಾಲ್ ನಾಯಕನಾಗಿರಬೇಕು'' ಎಂದು ಶಾಸ್ತ್ರಿ ಹೇಳಿದರು.
ಇದರ ಜೊತೆಗೆ ವಿರಾಟ್ ಕೊಹ್ಲಿ ನಾಯಕತ್ವದ ಕುರಿತಾಗಿಯೂ ಶಾಸ್ತ್ರಿ ಹೊಗಳಿದ್ದಾರೆ. "ವಿರಾಟ್ ಯಾವುದೇ ಅನುಮಾನವಿಲ್ಲದೆ ಉತ್ತಮ ಟೆಸ್ಟ್ ನಾಯಕನಾಗಿದ್ದಾನೆ. ಅವರು ಏನು ಮಾಡಿದ್ದಾರೆಂದು ನೀವೇ ನೋಡಿ, ವಿಶ್ವದ ಯಾವುದೇ ನಾಯಕ ಅಂತಹ ಉತ್ಸಾಹದಿಂದ ತಂಡವನ್ನ ಮುನ್ನಡೆಸುವುದಿಲ್ಲ'' ಎಂದು ಒಪ್ಪಿಕೊಂಡರು.
"ವಿರಾಟ್ ಜೊತೆಗಿನ ನನ್ನ ಸಂಬಂಧ ಅದ್ಭುತವಾಗಿತ್ತು, ಇಬ್ಬರು ಸಮಾನ ಮನಸ್ಕ ಜನರು ತಮ್ಮ ಕೆಲಸದ ಬಗ್ಗೆ ನಡೆಯುತ್ತಿದ್ದೆವು. ನಾನು ವಿರಾಟ್ ಬಳಿ, ಡ್ರೈವ್, ಹಸಿವು ಮತ್ತು ಆತ್ಮವಿಶ್ವಾಸದ ಕುರಿತಾಗಿ ನನ್ನನ್ನೇ ನಾನು ನೋಡುತ್ತೇನೆ'' ಎಂದು ಅವರು ಹೇಳಿದರು.
ಇತ್ತೀಚೆಗಷ್ಟೇ ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿ ನಡುವೆ ವಿಶ್ವಾಸದ ಕೊರತೆಯಿದೆ ಎಂದು ನನಗೆ ಅನ್ನಿಸುತ್ತಿದೆ ಎಂದು ಪಾಕ್ ಮಾಜಿ ಆಟಗಾರ ಸಲ್ಮಾನ್ ಭಟ್ ಹೇಳಿದ್ದಾರೆ. ಇದರ ಜೊತೆಗೆ ತಂಡವನ್ನು ಒಗ್ಗೂಡಿಸುವುದು ರೋಹಿತ್ ಶರ್ಮಾಗೆ ಸವಾಲಾಗಿದೆ ಎಂದು ಬಟ್ ಹೇಳಿದ್ದಾರೆ.
ಸದ್ಯ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾದಲ್ಲಿದ್ದು, ವಿರಾಟ್ ಕೊಹ್ಲಿ ಟೆಸ್ಟ್ ಫಾರ್ಮೆಟ್‌ನಲ್ಲಿ ಮಾತ್ರ ಭಾರತವನ್ನು ಮುನ್ನಡೆಸಲಿದ್ದಾರೆ. ಗಾಯಾಳು ರೋಹಿತ್ ಶರ್ಮಾ ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದು, ಏಕದಿನ ಸರಣಿ ಹೊತ್ತಿಗೆ ತಂಡವನ್ನ ಸೇರಿಕೊಳ್ಳುವ ಸಾಧ್ಯತೆ ಇದೆ.
ಡಿಸೆಂಬರ್ 26ರಂದು ಸೆಂಚುರಿಯನ್ ಅಂಗಳದಲ್ಲಿ ಬಲಿಷ್ಠ ತಂಡಗಳಾದ ಭಾರತ ಹಾಗೂ ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications