ಪಾಕಿಸ್ತಾನ ಪ್ರವಾಸದಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸ್ಥಿರ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ರಾವಲ್ಪಿಂಡಿ ಮೈದಾನದಲ್ಲಿ ಈ ಹಿಂದೆ ಯಾವ ತಂಡವೂ ಮಾಡದ ಸಾಧನೆ ಮಾಡಿ ಬೀಗಿದೆ. ಮೊದಲ ಟಿ20 ಪಂದ್ಯದಲ್ಲಿ ಪಾಕ್ ವಿರುದ್ಧ ದಕ್ಷಿಣ ಆಫ್ರಿಕಾ 55 ರನ್‌ಗಳ ಭರ್ಜರಿ ಜಯ ದಾಖಲಿಸಿ, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಮೈದಾನದಲ್ಲಿ ನಡೆದಿದ್ದ ಟಿ20 ಪಂದ್ಯಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬ್ಯಾಟ್ ಮಾಡಿದ ತಂಡ ಗೆದ್ದಿದೆ.
ಈ ಪಂದ್ಯದಲ್ಲಿ ಟಾಸ್ ಸೋತರೂ ಸಹ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ರೆಜಾ ಹೆಂಡ್ರಿಕ್ಸ್ ಹಾಗೂ ಕ್ವಿಂಟನ್ ಡಿಕಾಕ್ ಜೋಡಿ ಮೊದಲ ವಿಕೆಟ್‌ಗೆ 44 ರನ್ ಜೊತೆಯಾಟದ ಕಾಣಿಕೆ ನೀಡಿದೆ. ಡಿಕಾಕ್ 5 ಬೌಂಡರಿ ನೆರವಿನಿಂದ 23 ರನ್ ಬಾರಿಸಿ ಔಟ್ ಆಗಿದ್ದಾರೆ. ಟೋನಿ ಡಿ ಜೊರ್ಜಿ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 33 ರನ್ ಸಿಡಿಸಿ ಆಧಾರವಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಯಾವೊಬ್ಬ ಬ್ಯಾಟರ್ ಬಿಗ್ ಇನಿಂಗ್ಸ್ ಕಟ್ಟದೇ ನಿರಾಸೆ ಅನುಭವಿಸಿದ್ದಾರೆ. ಜಾರ್ಜ್ ಲಿಂಡೆ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 36 ರನ್ ಬಾರಿಸಿ ತಂಡಕ್ಕೆ ನೆರವಾಗಿದ್ದಾರೆ.

ಆರಂಭಿಕ ರೆಜಾ ಹೆಂಡ್ರಿಕ್ಸ್ 40 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 60 ರನ್ ಸಿಡಿಸಿ ಮಿಂಚಿದ್ದಾರೆ. ಅಂತಿಮವಾಗಿ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 194 ರನ್ ಕಲೆ ಹಾಕಿದೆ. ಪಾಕ್ ಪರ ಮೊಹಮ್ಮದ್ ನವಾಜ್ 3, ಸೈಮ್ ಅಯೂಬ್ 2 ವಿಕೆಟ್ ಉರುಳಿಸಿದ್ದಾರೆ.
ಪಾಕಿಸ್ತಾನ ತಂಡದ ಬ್ಯಾಟರ್‌ಗಳು ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಆರಂಭಿಕರಾದ ಸಾಹಿಬ್‌ಜಾದಾ ಫರ್ಹಾನ್ 24, ಸೈಮ್ ಅಯೂಬ್ 1 ಬೌಂಡರಿ, 4 ಸಿಕ್ಸರ್ ಸಹಾಯದಿಂದ 37 ರನ್ ಸಿಡಿಸಿದರು. ಮೊಹಮ್ಮದ್ ನವಾಜ್ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 36 ರನ್ ಸಿಡಿಸಿದರು. ಅಂತಿಮವಾಗಿ ಪಾಕ್ 18.1 ಓವರ್‌ಗಳಲ್ಲಿ 139 ರನ್‌ಗೆ ಆಲೌಟ್ ಆಯಿತು.
ಟಿ20 ಸರಣಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮುನ್ನಡೆ ಸಾಧಿಸಿದೆ. ಈ ಮೂಲಕ ರಾವಲ್ಪಿಂಡಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಮೊದಲು ಬ್ಯಾಟಿಂಗ್ ಮಾಡಿದ ತಂಡವಾಗಿ ಹೊಸ ಇತಿಹಾಸ ನಿರ್ಮಿಸಿತು.