
ದಕ್ಷಿಣ ಆಫ್ರಿಕಾದ ಬ್ಯಾಟರ್ ಡೇವಿಡ್ ಮಿಲ್ಲರ್ ಪುತ್ರಿ ನಿಧನರಾಗಿದ್ದಾರೆ. ಈ ಬಗ್ಗೆ ಸ್ವತಃ ಡೇವಿಡ್ ಮಿಲ್ಲರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳದೇ ಇದ್ದರು, ಮಗಳ ಜೊತೆಗಿನ ವಿಡಿಯೋವನ್ನು ಹಂಚಿಕೊಂಡಿದ್ದು, RIP ಮೈ ರಾಕ್‌ಸ್ಟಾರ್ ಎಂದು ಬರೆದುಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಮಿಲ್ಲರ್ ತನ್ನ ಮಗಳೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ, "ನನ್ನ ಪುಟ್ಟ ರಾಕ್‌ಸ್ಟಾರ್ RIP. ನಿನ್ನನ್ನು ಯಾವಾಗಲೂ ಪ್ರೀತಿಸುತ್ತೇನೆ." ಎಂದು ಶೀರ್ಷಿಕೆ ನೀಡಿದ್ದಾರೆ.
ಡೇವಿಡ್ ಮಿಲ್ಲರ್ ಮಗಳು ಕ್ಯಾನ್ಸರ್ ನಿಂದ ಪೀಡಿತಳಾಗಿದ್ದಳು, ಹಲವು ವರ್ಷಗಳ ಹೋರಾಟ್ ನಂತರ ಅವಳು ಇಹಲೋಕ ತ್ಯಜಿಸಿದ್ದಾಳೆ. ಮಿಲ್ಲರ್, ಪ್ರತ್ಯೇಕ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, ಮಗಳ ಹಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮಗಳು ಕ್ಯಾನ್ಸರ್ ಜೊತೆ ಹೋರಾಡಿದ ಹಲವು ಫೋಟೊಗಳನ್ನು ಅದರಲ್ಲಿ ನೋಡಬಹುದಾಗಿದೆ.
"ನನ್ನ ಸ್ಕಟ್ ನಿನ್ನನ್ನು ತುಂಬಾ ಕಳೆದುಕೊಳ್ಳುತ್ತೇನೆ! ನಾನು ತಿಳಿದಿರುವ ಹೃದಯ ನಿನ್ನದು. ನೀನು ಸಾಕಷ್ಟು ಹೋರಾಟವನ್ನು ಮಾಡಿದೆ. ಯಾವಾಗಲೂ ನಂಬಲಾಗದಷ್ಟು ಧನಾತ್ಮಕ ನಗು ನಿನ್ನ ಮುಖದಲ್ಲಿ ಇರುತ್ತಿತ್ತು" ಎಂದು ಮಗಳ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಮಗಳೇ
"ನಿನ್ನ ಪ್ರಯಾಣದಲ್ಲಿ ನೀನು ಪ್ರತಿಯೊಬ್ಬ ವ್ಯಕ್ತಿಯನ್ನು ಮತ್ತು ಪ್ರತಿ ಸವಾಲನ್ನು ಸ್ವೀಕರಿಸಿದ್ದೀಯಾ. ಜೀವನದಲ್ಲಿ ಪ್ರತಿಯೊಂದು ಕ್ಷಣವನ್ನು ಪಾಲಿಸುವುದರ ಬಗ್ಗೆ ನೀನು ನನಗೆ ತುಂಬಾ ಕಲಿಸಿದ್ದೀಯಾ!" ಎಂದು ಡೇವಿಡ್ ಮಿಲ್ಲರ್ ಮಗಳ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ.
"ನಿನ್ನ ಜೊತೆಯಲ್ಲಿ ಬದುಕಿನಲ್ಲಿ ಪ್ರಯಾಣ ಮಾಡಿದ್ದಕ್ಕೆ ನನಗೆ ತುಂಬಾ ಹೆಮ್ಮೆ ಅನಿಸುತ್ತಿದೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ!" ಎಂದು ಮಿಲ್ಲರ್ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಭಾರತದ ವಿರುದ್ಧದ ಸರಣಿಯಲ್ಲಿರುವ ಮಿಲ್ಲರ್
ಡೇವಿಡ್ ಮಿಲ್ಲರ್ ಸದ್ಯ ಭಾರತದ ಪ್ರವಾಸದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಪ್ರಮುಖ ಬ್ಯಾಟರ್ ಆಗಿರುವ ಅವರು, ರಾಂಚಿಯಲ್ಲಿ ಎರಡನೇ ಏಕದಿನ ಪಂದ್ಯವನ್ನಾಡಲು ಸಜ್ಜಾಗುತ್ತಿದ್ದರು.
ಇತ್ತೀಚೆಗೆ ತಾನೆ, ಡೇವಿಡ್ ಮಿಲ್ಲರ್ ಭಾರತದ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ್ದರು. ಮೊದಲನೇ ಏಕದಿನ ಪಂದ್ಯದಲ್ಲಿ ಕೂಡ ಅತ್ಯುತ್ತಮ ಆಟವಾಡಿದ್ದ ಅವರು ಅರ್ಧಶತಕ ಗಳಿಸಿದ್ದರು.