ಗಾಯಾಳುಗಳಿಂದ ಕಳೆಗುಂದಿತೆ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ?

ಲಂಡನ್, ಜೂನ್ 13: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಶುರುವಾಗಿ ಇನ್ನು ಎರಡು ವಾರ ಕಳೆದಿಲ್ಲ. ಆಗಲೇ ಎಲ್ಲಾ ತಂಡಗಳಿಗೆ ಗಾಯದ ಸಮಸ್ಯೆಯ ತಲೆಬಿಸಿ ಎದುರಾಗಿದೆ. ಟೂರ್ನಿಯಲ್ಲಿ ಈ ಬಾರಿ ಘಾಟನುಘಟಿ ಆಟಗಾರರೇ ಗಾಯದ ಸಮಸ್ಯೆಗೆ ತುತ್ತಾಗಿರುವುದು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳೇ ಹೊಡೆತ ಅನುಭವಿಸಿವೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಈ ಬಾರಿ ಟ್ರೋಫಿ ಎತ್ತಿ ಹಿಡಿಯುವ ಹಾಟ್ ಫೇವರಿಟ್ ಟೀಮ್ ಇಂಡಿಯಾಗೆ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರ ಗಾಯದ ಸಮಸ್ಯೆ ನುಂಗಲಾರದ ತುತ್ತಾದರೆ, ಆತಿಥೇಯ ಇಂಗ್ಲೆಂಡ್, ಹಾಲಿ ಚಾಂಪಿಯನ್ಸ್ ಆಸ್ಟ್ರೇಲಿಯಾ ಮತ್ತು ಎರಡು ಬಾರಿ ಚಾಂಪಿಯನ್ಸ್ ವೆಸ್ಟ್ ಇಂಡೀಸ್ ಕೂಡ ಸ್ಟಾರ್ ಆಟಗಾರರ ಸೇವೆಯಿಂದ ವಂಚಿತಗೊಂಡಿವೆ.
ಟೀಮ್ ಇಂಡಿಯಾಗಂತೂ ಧವನ್ ಗಾಯದ ಸಮಸ್ಯೆ ಭಾರಿ ಹೊಡೆತವೇ ಸರಿ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಧವನ್ ಶತಕ ಸಿಡಿಸಿದರೂ, ಕೈಬೆರಳಿಗೆ ಪೆಟ್ಟು ತಿಂದು ಕನಿಷ್ಠ ಮೂರು ವಾರಗಳ ವಿಶ್ರಾಂತಿ ಮೊರೆ ಹೋಗುವಂತಾಗಿದೆ. ಅವರ ಬದಲಾಗಿ ರಿಷಭ್ ಪಂತ್‌ಗೆ ಕರೆ ನೀಡಲಾಗಿದೆ. ಆದರೆ, ಧವನ್ ಸೇವೆಗೆ ಲಭ್ಯರಾಗುವುದರ ಮಹತ್ವವನ್ನು ಅರಿತ ಭಾರತ ತಂಡ ಎಡಗೈ ಆರಂಭಿಕ ಬ್ಯಾಟ್ಸ್‌ಮನ್‌ನ ಚೇತರಿಕೆಗಾಗಿ ಕಾದು ನೋಡುವ ತಂತ್ರ ಅನುಸರಿಸಿದೆ.
ಈ ರೀತಿಯ ಗಾಯದ ಸಮಸ್ಯೆಗಳಿಂದಾಗಿ ಬಹುತೇಕ ಎಲ್ಲ ತಂಡಗಳಿಗೂ ತಮ್ಮ ಆಡುವ 11 ಆಟಗಾರರಲ್ಲಿ ಮರು ಸಂಯೋಜನೆ ತರುವ ತಲೆ ಬಿಸಿ ಎದುರಾಗಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಹೀಗಾಗಿ ಪ್ರಸಕ್ತ ವಿಶ್ವಕಪ್‌ನಲ್ಲಿ ಒಂದೆಡೆ ಮಳೆರಾಯನ ಆರ್ಭಟ, ಮತ್ತೊಂದೆಡೆ ಸತತ ಗಾಯದ ಸಮಸ್ಯೆಗಳು ಟೂರ್ನಿಯ ಸೊಬಗನ್ನು ಕಳೆಗುಂದುವಂತೆ ಮಾಡಿಬಿಟ್ಟಿದೆ.

ಬಟ್ಲರ್‌ಗೆ ಸೊಂಟದ ಸಮಸ್ಯೆ
ಆತಿಥೇಯ ಇಂಗ್ಲೆಂಡ್ ತಂಡ ಈ ಬಾರಿ ತವರು ನೆಲದಲ್ಲಿ ಪ್ರಶಸ್ತಿ ಗೆದ್ದು ಇತಿಹಾಸ ಬರೆಯುವುದನ್ನು ಎದುರು ನೋಡುತ್ತಿದೆ. ಆದರೆ, ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬಾಗಿರುವ ಜೋಸ್ ಬಟ್ಲರ್ ಗಾಯದ ಸಮಸ್ಯೆಗೆ ತುತ್ತಗಿರುವುದು ಇಂಗ್ಲೆಂಡ್ ತಂಡದಲ್ಲಿ ತಲೆಬಿಸಿ ತಂದೊಡ್ಡಿದೆ. ಕಾರ್ಡಿಫ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಬಟ್ಲರ್ ಸೊಂಟ ನೋವಿನ ಸಮಸ್ಯೆಗೆ ತುತ್ತಾದರು. ಜೂನ್ 3ರಂದು ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬಟ್ಲರ್ ಇಂಗ್ಲೆಂಡ್ ಪರ ವಿಶ್ವಕಪ್ ಟೂರ್ನಿಯಲ್ಲಿ ಅತಿ ವೇಗದ ಶತಕ ಸಿಡಿಸಿ ಅಬ್ಬರಿಸಿದ್ದರು. ಆದರೀಗ ಗಾಯದ ಸಮಸ್ಯೆ ಎದುರಿಸುತ್ತಿರುವುದು ಆತಿಥೇಯ ತಂಡಕ್ಕೆ ಹಿನ್ನಡೆ ತಂದೊಡ್ಡಿದೆ.

ರಸೆಲ್‌ಗೆ ಮಂಡಿ ನೋವು
ವೆಸ್ಟ್ ಇಂಡೀಸ್ ತಂಡದ ದೈತ್ಯ ಪ್ರತಿಭೆ ಆಂಡ್ರೆ ರಸೆಲ್ ಮಂಡಿ ನೋವಿನ ಸಮಸ್ಯೆ ಎದುರಿಸುತ್ತಿದ್ದು, ಕೆರಿಬಿಯನ್ ಪಡೆಗೆ ಭಾರಿ ಹಿನ್ನಡೆಯಾಗಿದೆ. ತಮ್ಮ ಸಂಪೂರ್ಣ ಫಿಟ್ನೆಸ್‌ನಲ್ಲಿ ಇದ್ದರೆ ರಸೆಲ್ ಚೆಂಡು ಮತ್ತು ದಾಂಡಿನಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಬಲ್ಲರು ಎಂಬುದನ್ನು ಕಳೆದ ತಿಂಗಳು ಅಂತ್ಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇಡೀ ಕ್ರಿಕೆಟ್ ಜಗತ್ತೇ ವೀಕ್ಷಿಸಿದೆ. ಇಂತಹ ಸ್ಟಾರ್ ಆಲ್‌ರೌಂಡರ್‌ನ ಸೇವೆ ಸದ್ಯಕ್ಕೆ ಇಲ್ಲದೇ ಇರುವುದು ವಿಂಡೀಸ್‌ನ ಬಲ ಕುಗ್ಗುವಂತೆ ಮಾಡಿದೆ. ಆದರೂ, ರಸೆಲ್ ಬಹುಬೇಗನೆ ಚೇತರಿಸುವ ಸೂಚನೆ ನೀಡಿದ್ದಾರೆ. ಹೀಗಿರುವಾಗ ಗಾಯದಿಂದ ಚೇತರಿಸಿ ಅವರು ಅಷ್ಟೇ ಪ್ರಭಾಯುತ ಆಟ ಆಡಬಲ್ಲರೇ ಎಂಬುದನ್ನು ಕಾದು ನೋಡಬೇಕಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮಂಡಿ ನೋವು ಎದುರಿಸಿದ್ದ ರಸೆಲ್, ಬಳಿಕ ಆಸ್ಟ್ರೇಲಿಯಾ ವಿರುದ್ಧ ಆಡಿದರಾದರೂ ಅಷ್ಟು ಪ್ರಭಾವಯುತ ಪ್ರದರ್ಶನ ಅವರಿಂದ ಹೊರಬರಲಿಲ್ಲ. ಬಳಿಕ ವಿಂಡೀಸ್ ಮತ್ತು ದಕ್ಷಿಣ ಆಫ್ರಿಕಾ ನಡುವಣ ಪಂದ್ಯ ಮಳೆಯಿಂದ ರದ್ದಾಗಿತ್ತು ಇದರೊಂದಿಗೆ ಸಾಕಷ್ಟು ವಿರಾಮ ಸಿಕ್ಕಿದ್ದು ರಸೆಲ್ ಫಿಟ್ನೆಸ್‌ಗೆ ಮರಳಿದ್ದಾರೆಯೇ? ಎಂಬ ಪ್ರಶ್ನೆ ಎಲ್ಲರನ್ನ ಕಾಡಲಾರಂಭಿಸಿದೆ.

ಸ್ಟೇನ್ ಟೂರ್ನಿಯಿಂದಲೇ ಔಟ್
ಟೂರ್ನಿಯಲ್ಲಿ ಗಾಯದ ಸಮಸ್ಯೆಯಿಂದ ಗಂಭೀರ ಪರಿಣಾಮ ಎದುರಿಸಿರುವುದು ದಕ್ಷಿಣ ಆಫ್ರಿಕಾ ತಂಡ. ತನ್ನ ಪ್ರಮುಖ ವೇಗದ ಬೌಲರ್‌ಗಳಾದ ಡೇಲ್ ಸ್ಟೇನ್, ಕಗಿಸೊ ರಬಾಡ ಹಾಗೂ ಲುಂಗಿ ಎನ್ಗಿಡಿ ಟೂರ್ನಿಗೂ ಮೊದಲೇ ಗಾಯಕ್ಕೆ ತುತ್ತಾಗಿದ್ದರು. ಆದರೂ ರಬಾಡ ಸಂಪೂರ್ಣ ಚೇತರಿಸಿದರೆ, ಎನ್ಗಿಡಿ ಕೇವಲ ಮೊದಲ ಪಂದ್ಯದಲ್ಲಿ ಆಡಿ ನಂತರ ಮರಳಿ ಚೇತರಿಕೆಯ ಮೊರೆ ಹೋಗಿದ್ದರು. ಇನ್ನು ಭುಜದ ನೋವಿನ ಕಾರಣ ತಂಡದಲ್ಲಿ ಇದ್ದು ಒಂದು ಪಂದ್ಯವನ್ನೂ ಆಡದೇ ಇದ್ದ ಅನುಭವಿ ವೇಗದ ಬೌಲರ್ ಡೇಲ್ ಸ್ಟೇನ್, ಕೊನೆಗೆ ಅಭಯಾಸದ ವೇಳೆ ಮತ್ತೊಮ್ಮೆ ಭುಜದ ನೋವಿಗೆ ತುತ್ತಾಗಿ ಅನಿವಾರ್ಯವಾಗಿ ಟೂರ್ನಿಯಿಂದಲೇ ಹೊರ ನಡೆಯುವಂತಾಯಿತು. ಪರಿಣಾಮ ದಕ್ಷಿಣ ಆಫ್ರಿಕಾ ತಂಡ ಟೂರ್ನಿಯಲ್ಲಿ ನಾಲ್ಕು ಪಂದ್ಯಗಳನ್ನು ಆಡಿದರೂ ಮೊದಲ ಗೆಲುವಿಗಾಗಿ ಹಪಾಹಪಿಸುವಂತಾಗಿದೆ. ಇದೇ ವೇಳೆ ಎನ್ಗಿಡಿ ಜೂನ್ 15ರಂದು ನಡೆಯಲಿರುವ ಅಫಘಾನಿಸ್ತಾನ ವಿರುದ್ಧದ ಪಂದ್ಯದ ಹೊತ್ತಿಗೆ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ.

ಕಾಂಗರೂ ಪಡೆಗೂ ಗಾಯದ ಬರೆ
ಸ್ಟಾರ್ ಆಲ್‌ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಸ್ನಾಯು ಸೆಳೆತಕ್ಕೆ ತುತ್ತಾಗಿರುವುದು ಆಸ್ಟ್ರೇಲಿಯಾ ತಂಡದ ಆಡುವ 11 ಆಟಗಾರರ ಪಟ್ಟಿಯಲ್ಲಿ ಇನ್ನಿಲ್ಲದ ಬದಲಾವಣೆಗಳನ್ನು ತರುವ ತಲೆನೋವನ್ನು ತಂದೊಡ್ಡಿದೆ. ಸ್ಟೋಯ್ನಿಸ್ ಚೇತರಿಸದೇ ಇದ್ದರೆ ಅವರ ಸ್ಥಾನದಲ್ಲಿ ಮತ್ತೊಬ್ಬ ಆಲ್‌ರೌಂಡರ್‌ನನ್ನು ತಂಡಕ್ಕೆ ಸೇರಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಈಗಾಗಲೇ ಮಿಚೆಲ್ ಮಾರ್ಷ್‌ಗೆ ಬುಲಾವ್ ನೀಡಿದೆ. ಶ್ರೀಲಂಕಾ ವಿರುದ್ಧ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಸ್ಟೋಯ್ನಿಸ್ ಅವರ ಅಂತಿಮ ಫಿಟ್ನೆಸ್ ಪರೀಕ್ಷೆ ನಡೆಯಲಿದೆ. ಇಲ್ಲಿ ಅವರು ತಮ್ಮ ಫಿಟ್ನೆಸ್ ಸಾಬೀತು ಪಡಿಸದೇ ಇದ್ದರೆ, ಅವರ ವಿಶ್ವಕಪ್ ಪಯಣ ಅಂತ್ಯಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications