GT vs SRH: ಮೈದಾನದಲ್ಲೇ ಹಾರ್ದಿಕ್ ನಾಚಿಕೆಗೆಟ್ಟ ನಡತೆ: ಅನುಭವಿ ಶಮಿಗೆ ನಿಂದಿಸಿದ ಪಾಂಡ್ಯ: ವಿಡಿಯೋ

ಐಪಿಎಲ್ ಟೂರ್ನಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿರುವ ಗುಜರಾತ್ ಟೈಟನ್ಸ್ ತಂಡ ಈ ಬಾರಿಯ ಟೂರ್ನಿಯ ಆರಂಭಿಕ ಮೂರು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಭರ್ಜರಿ ಗೆಲುವು ಸಾಧಿಸಿತ್ತು. ಆದರೆ ಈ ಗೆಲುವಿನ ಓಟವನ್ನು ನಾಲ್ಕನೇ ಪಂದ್ಯದಲ್ಲಿ ಮುಂದುವರಿಸಲು ಹಾರ್ದಿಕ್ ಪಾಂಡ್ಯ ಪಡೆಗೆ ಸಾಧ್ಯವಾಗಲಿಲ್ಲ. ಸೋಮವಾರ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ ಹೀನಾಯ ಸೋಲು ಅನುಭವಿಸಿದೆ. ಈ ಮೂಲಕ ಮೊದಲ ಸೋಲಿನ ರುಚಿ ಅನುಭವಿಸಿದೆ.
ಈ ಪಂದ್ಯದವರೆಗೂ ನಾಯಕನಾಗಿ ತೋರಿದ ಪ್ರಬುದ್ಧತೆಗೆ ಹಾರ್ದಿಕ್ ಪಾಂಡ್ಯ ಸಾಕಷ್ಟು ಮೆಚ್ಚುಗೆಯನ್ನು ಪಡೆದುಕೊಂಡಿದ್ದರು. ಅನೇಕ ಕ್ರಿಕೆಟ್ ಪಂಡಿತರು ಹಾರ್ದಿಕ್ ಪಾಂಡ್ಯ ಮುನ್ನಡೆಸುತ್ತಿರುವ ರೀತಿಗೆ ತಲೆದೂಗಿದ್ದರು. ಆದರೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ತೋರಿದ ಒಂದು ವರ್ತನೆ ಅಭಿಮಾನಿಗಳನ್ನು ಕೆರಳುವಂತೆ ಮಾಡಿದೆ. ತನ್ನದೇ ತಂಡದ ಹಿರಿಯ ಆಟಗಾರನಿಗೆ ಹಾರ್ದಿಕ್ ಪಾಂಡ್ಯ ನಿಂದಿಸಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಎದುರಾಳಿ ತಂಡದ ನಾಯಕ ಕೇನ್ ವಿಲಿಯಮ್ಸನ್ ಬಾರಿಸಿದ ಚೆಂಡು ಗಾಳಿಯಲ್ಲಿ ಹಾರಿ ಫಿಲ್ಡರ್ ಮೊಹಮ್ಮದ್ ಶಮಿ ಬಳಿ ಬಂದಿತ್ತು. ಆದರೆ ಆ ಚೆಂಡನ್ನು ಶಮಿ ಕ್ಯಾಚ್ ಪಡೆಯಲು ಸಾಧ್ಯವಾಗಿರಲಿಲ್ಲ. ಶಮಿ ಚೆಂಡಿಗಾಗಿ ಕಾಯುತ್ತಿದ್ದ ಸ್ಥಳದಿಂದ ಕೆಲ ಅಂತರ ಮುಂದೆ ಬಿದ್ದಿತ್ತು. ಈ ಸಂದರ್ಭದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಶಮಿ ಮೇಲೆ ರೇಗಾಡಿದರು. ಮಾತ್ರವಲ್ಲದೆ ನಿಂದನಾತ್ಮಕ ಪದವನ್ನು ಬಳಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.

ಹಾರ್ದಿಕ್ ವರ್ತನೆಗೆ ಕಟು ಟೀಕೆ
ಮೊಹಮ್ಮದ್ ಶಮಿ ಗುಜರಾತ್ ಟೈಟನ್ಸ್ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದಾರೆ. ಅನುಭವಿ ಆಟಗಾರನಾಗಿರುವ ಶಮಿ ಟೀಮ್ ಇಂಡಿಯಾದಲ್ಲಿಯೂ ಸುದೀರ್ಘ ಕಾಲದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅನುಭವ ವಯಸ್ಸಿನಲ್ಲಿ ಹಾರ್ದಿಕ್ ಪಾಂಡ್ಯ ಅವರಿಗಿಂತ ದೊಡ್ಡವರಾಗಿರುವ ಮೊಹಮ್ಮದ್ ಶಮಿ ವಿರುದ್ಧ ಪಾಂಡ್ಯ ಅವರ ವರ್ತನೆ ಕ್ರಿಕೆಟ್ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಹಾರ್ದಿಕ್ ಪಾಂಡ್ಯ ಅವರ ಮೇಲೆ ಟೀಕೆಗಳು ವ್ಯಕ್ತವಾಗುತ್ತಿದೆ.

ಉತ್ತಮ ಬ್ಯಾಟಿಂಗ್ ನಡೆಸಿದ ಎಸ್‌ಆರ್‌ಹೆಚ್
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ ಟೈಟನ್ಸ್ ತಂಡ 163 ರನ್‌ಗಳ ಸವಾಲಿನ ಗುರಿಯನ್ನು ಎಸ್‌ಆರ್‌ಹೆಚ್ ತಂಡದ ಮುಂದಿಟ್ಟಿತ್ತು. ಇದನ್ನು ಬೆನ್ನಟ್ಟಿದ ಸನ್‌ರೈಸರ್ಸ್ ಹಯದರಾಬಾದ್ ತಂಡಕ್ಕೆ ಉತ್ತಮ ಆರಂಭ ದೊರೆತಿತ್ತು. ಮೊದಲ ವಿಕೆಟ್‌ಗೆ 64 ರನ್‌ಗಳ ಕೊಡುಗೆ ಬಂದಿತ್ತು. ಎಸ್‌ಆರ್‌ಹೆಚ್ ನಾಯಕ ಕೇನ್ ವಿಲಿಯಮ್ಸನ್ ಈ ಪಂದ್ಯದಲ್ಲಿ ಫಾರ್ಮ್‌ಗೆ ಮರಳಿದ್ದರು. 13ನೇ ಓವರ್‌ನಲ್ಲಿ 1 ವಿಕೆಟ್ ಕಳೆದುಕೊಂಡು 97 ರನ್‌ಗಳಿಸುವ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ಸುಲಭ ಗೆಲುವು ಸಾಧಿಸುವ ಹಾದಿಯಲ್ಲಿತ್ತು.
ಕ್ಯಾಚ್ ಪಡೆಯಲು ಶಮಿ ವಿಫಲ
ವಿಕೆಟ್ ಪಡೆಯಲು ಸಾಧ್ಯವಾಗದ ಕಾರಣ ಜಿಟಿ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೇಸತ್ತು ಹೋಗಿದ್ದರು. ಆದರೆ ಈ ಹಂತದಲ್ಲಿ ವಿಕೆಟ್ ಪಡೆಯುವ ಉತ್ತಮ ಅವಕಾಶವನ್ನು ಹಾರ್ದಿಕ್ ಪಾಂಡ್ಯ ಸೃಷ್ಟಿಸಿದ್ದರು. ಎಸ್‌ಆರ್‌ಹೆಚ್ ದಾಂಡಿಗ ರಾಹುಲ್ ತ್ರಿಪಾಠಿಗೆ ಪುಲ್‌ಟಾಸ್ ಎಸೆತವನ್ನು ಎಸೆದಿದ್ದರು ಪಾಂಡ್ಯ. ಈ ಎಸೆತವನ್ನು ತ್ರಿಪಾಠಿ ಅಪ್ಪರ್ ಕಟ್ ಮಾಡಿದ್ದರು. ಇದು ಥರ್ಡ್‌ಮ್ಯಾನ್ ಸ್ಥಾನದಲ್ಲಿದ್ದ ಶಮಿ ಬಳಿಗೆ ಹಾರಿತ್ತು. ಆದರೆ ಈ ಚೆಂಡನ್ನು ಹಿಡಿಯುವಲ್ಲಿ ಶಮಿ ವಿಫಲವಾದರು.
ಹೀಗಾಗಿ ಗುಜರಾತ್ ಟೈಟನ್ಸ್ ತಂಡ ವಿಕೆಟ್ ಪಡೆಯುವ ಉತ್ತಮ ಅವಕಾಶವನ್ನು ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ತಮ್ಮ ತಾಳ್ಮೆಯನ್ನು ಕಳೆದುಕೊಂಡಿದ್ದಾರೆ. ಕ್ಯಾಚ್ ಪಡೆಯದ ಶಮಿ ವಿರುದ್ಧ ರೇಗಾಡಿದ ನಾಯಕ ಹಾರ್ದಿಕ್ ಪಾಂಡ್ಯ ನಿಂದನೆಯನ್ನೂ ಮಾಡಿದ್ದಾರೆ. ಇದು ಕ್ಯಾಮರಾದಲ್ಲಿಯೂ ಸ್ಪಷ್ಟವಾಗಿ ದಾಖಲಾಗಿದೆ.

ಸಾಯಿ ಸುದರ್ಶನ್ ವಿರುದ್ಧವೂ ತಾಳ್ಮೆ ಕಳೆದುಕೊಂಡ ಹಾರ್ದಿಕ್
ಇನ್ನು ಹಾರ್ದಿಕ್ ಪಾಂಡ್ಯ ಮೊಹಮ್ಮದ್ ಶಮಿಯನ್ನು ಮಾತ್ರ ನಿಂದಿಸಿಲ್ಲ. ಪ್ರತ್ಯೇಕ ಘಟನೆಯಲ್ಲಿ ಸಾಯಿ ಸುದರ್ಶನ್ ವಿರುದ್ಧವೂ ಹಾರ್ದಿಕ್ ತಾಳ್ಮೆ ಕಳೆದುಕೊಂಡಿದ್ದಾರೆ. ಫಿಲ್ಡಿಂಗ್‌ನಲ್ಲಿ ಮಾಡಿದ ಎಡವಟ್ಟಿಗೆ ಸಾಯಿ ಸುದರ್ಶನ್ ವಿರುದ್ಧ ಸಿಡುಕಿದ್ದಾರೆ ಹಾರ್ದಿಕ್ ಪಾಂಡ್ಯ. ಈ ಟೂರ್ನಿ ಮೊದಲ ಮೂರು ಪಂದ್ಯಗಳಲ್ಲಿ ಗೆದ್ದು ಅಜೇಯವಾಗುಳಿದಿದ್ದ ಗುಜರಾತ್ ಟೈಟನ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಸೋಲು ಅನುಭವಿಸುವ ಮೂಲಕ ಮೊದಲ ಬಾರಿಗೆ ಸೋಲಿನ ರುಚಿ ಕಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications