
ಕೊಲಂಬೋ: ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ ಶ್ರೀಲಂಕಾ ಕ್ರಿಕೆಟ್ ತಂಡ ಪ್ರಕಟವಾಗಿದೆ. ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಶುಕ್ರವಾರ (ಸೆಪ್ಟೆಂಬರ್ 10) 15 ಜನರ ತಂಡ ಪ್ರಕಟಿಸಿದೆ. ದಸುನ್ ಶನಕ ತಂಡದ ನಾಯಕರಾಗಿ ಹೆಸರಿಸಲ್ಪಟ್ಟಿದ್ದಾರೆ.
ಟಿ20 ವಿಶ್ವಕಪ್ 2021ರ ಆವೃತ್ತಿ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ಮತ್ತು ಓಮನ್‌ನಲ್ಲಿ ಅಕ್ಟೋಬರ್ 17ರಿಂದ ನವೆಂಬರ್ 14ರ ವರೆಗೆ ನಡೆಯಲಿದೆ. 16 ತಂಡಗಳು ಈ ಪ್ರತಿಷ್ಠಿತ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಟಿ20 ವಿಶ್ವಕಪ್‌ಗೂ ಮುನ್ನ ಲಂಕಾ ತಂಡ ಓಮನ್‌ಗೆ ತೆರಳಲಿದ್ದು ಅಲ್ಲಿ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಆಡಲಿದೆ.
ಅಕ್ಟೋಬರ್ 7 ಮತ್ತು ಅಕ್ಟೋಬರ್ 9ರಂದು ಶ್ರೀಲಂಕಾ ಮತ್ತು ಓಮನ್ ಮಧ್ಯೆ ಅಭ್ಯಾಸ ಪಂದ್ಯ ನಡೆಯಲಿದೆ. ಅದಾಗಿ ಅಕ್ಟೋಬರ್ 12 ಮತ್ತು ಅಕ್ಟೋಬರ್ 14ರಂದು ಮತ್ತೆರಡು ಅಭ್ಯಾಸ ಪಂದ್ಯಗಳನ್ನಾಡಲಿದೆ. ಟಿ20 ವಿಶ್ವಕಪ್‌ನಲ್ಲಿ ಆರಂಭಿಕ ಪಂದ್ಯವಾಗಿ ಶ್ರೀಲಂಕಾ ತಂಡ ನಮೀಬಿಯಾದ ಸವಾಲು ಸ್ವೀಕರಿಸಲಿದೆ.
ವಿವಿಧ ಗ್ರೂಪ್‌ಗಳ ಮಾಹಿತಿ
ಶ್ರೀಲಂಕಾ ತಂಡ ಗ್ರೂಪ್ 'ಎ'ಯಲ್ಲಿದೆ. ಗ್ರೂಪ್ 'ಬಿ'ಯಲ್ಲಿ ಬಾಂಗ್ಲಾದೇಶ ಸ್ಕಾಟ್ಲೆಂಡ್, ಪಪುವಾ ನ್ಯೂ ಗಿನಿಯಾ ಮತ್ತು ಓಮನ್ ದೇಶಗಳಿವೆ. ಗ್ರೂಪ್ 'ಎ'ಯಲ್ಲಿ ಶ್ರೀಲಂಕಾ, ಐರ್ಲೆಂಡ್, ನೆದರ್ಲ್ಯಾಂಡ್ಸ್ ಮತ್ತು ನಮೀಬಿಯಾ ದೇಶಗಳಿವೆ. ಗ್ರೂಪ್-1ರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಗ್ರೂಪ್ 'ಎ'ಯ ವಿನ್ನರ್, ಗ್ರೂಪ್ 'ಬಿ'ಯ ರನ್ನರ್ ತಂಡಗಳು ಸ್ಪರ್ಧಿಸಲಿವೆ. ಗ್ರೂಪ್-2ರಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಗ್ರೂಪ್ 'ಎ'ಯ ರನ್ನರ್ ಮತ್ತು ಗ್ರೂಪ್ 'ಬಿ'ಯ ವಿನ್ನರ್ ತಂಡಗಳು ಸೆಣಸಾಡಲಿವೆ.
ಟಿ20 ವಿಶ್ವಕಪ್‌ಗೆ ಶ್ರೀಲಂಕಾದ 15 ಜನರ ತಂಡ
ಕುಸಾಲ್ ಪೆರೆರಾ, ಅವಿಷ್ಕಾ ಫೆರ್ನಾಂಡೊ, ಭಾನುಕಾ ರಾಜಪಕ್ಸ, ಧನಂಜಯ ಡಿ ಸಿಲ್ವಾ, ದಸನು ಶನಕ (ನಾಯಕ), ಚರಿತ್ ಅಸಲಂಕ, ವನಿಂದು ಹಸರಂಗ, ಚಮಿಕ ಕರುಣರತ್ನೆ, ಅಕಿಲ ದನಂಜಯ, ಮಹೇಶ್ ತೀಕ್ಷಣ, ದಿನೇಶ್ ಚಾಂಡಿಮಾಲ್, ಕಮಿಂದು ಮೆಂಡಿಸ್, ಬಿನುರ ಫೆರ್ನಾಂಡೊ, ಪ್ರವೀಣ್ ಜಯವಿಕ್ರಮ, ದುಶ್ಮಂತ ಚಮೀರ.