SL vs WI T20: ವಿಂಡೀಸ್ ಮಣಿಸಿದ ಲಂಕಾಗೆ ಟಿ20 ಸರಣಿ
ವಿಕೆಟ್ ಕೀಪರ್ ಬ್ಯಾಟರ್ ಕುಸಾಲ್ ಮೆಂಡಿಸ್ ಹಾಗೂ ಕುಸಾಲ್ ಪೆರೆರಾ ಅವರು ಬಾರಿಸಿದ ಅರ್ಧಶತಕದ ನೆರವಿನಿಂದ ಶ್ರೀಲಂಕಾ ಮೂರನೇ ಟಿ20 ಕ್ರಿಕೆಟ್ ಪಂದ್ಯದಲ್ಲಿ 9 ವಿಕೆಟ್ ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ, ತವರಿನಲ್ಲಿ ನಡೆದ ಮೂರು ಪಂದ್ಯಗಳ ಟಿ20 ಸರಣಿಯನ್ನು 2-1 ರಿಂದ ತನ್ನದಾಗಿಸಿಕೊಂಡಿದೆ.
ಟಾಸ್ ಗೆದ್ದರೂ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 162 ರನ್ ಕಲೆ ಹಾಕಿತು. ಸ್ಪರ್ಧಾತ್ಮಕ ಮೊತ್ತವನ್ನು ಹಿಂಬಾಲಿಸಿದ ಶ್ರೀಲಂಕಾ 18 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 166 ರನ್ ಕಲೆ ಹಾಕಿ ಗೆಲುವು ದಾಖಲಿಸಿತು. ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆಲುವು ದಾಖಲಿಸಿ ಶುಭಾರಂಭ ಮಾಡಿತ್ತು. ಎರಡನೇ ಟಿ20 ಪಂದ್ಯದಲ್ಲಿ ಆತಿಥೇಯ ಲಂಕಾ ಸೊಗಸಾದ ಪ್ರದರ್ಶನ ನೀಡಿ ಸಮಬಲ ಸಾಧಿಸಿತ್ತು. ಮೂರನೇ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಲಂಕಾ ಸರಣಿಯನ್ನು ವಶಕ್ಕೆ ಪಡೆದಿದೆ.

ಕಳಪೆ ಆರಂಭ
ವೆಸ್ಟ್ ಇಂಡೀಸ್ ತಂಡದ ಆರಂಭ ಕಳಪೆಯಾಗಿತ್ತು. ವಿಂಡೀಸ್ ತಂಡದ ಓಪನರ್ ಇವಾನ್ ಲೂಯಿಸ್ ಸೊನ್ನೆ ಸುತ್ತಿದರು. ಎರಡನೇ ವಿಕೆಟ್‌ಗೆ ಬ್ರಾಂಡನ್ ಕಿಂಗ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಶಾಯ್ ಹೋಪ್ 29 ಎಸೆತಗಳಲ್ಲಿ 37 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಬ್ರಾಂಡನ್ ಕಿಂಗ್ 23 ರನ್ ಬಾರಿಸಿ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ರೋಸ್ಟನ್ ಚೇಸ್ ಹಾಗೂ ಶೆರ್ಫೇನ್ ರುದರ್ಫೋರ್ಡ್ ಜವಾಬ್ದಾರಿ ಮರೆತರು.
ಆರನೇ ವಿಕೆಟ್‌ಗೆ ರೋವ್ಮನ್ ಪೊವೆಲ್ (37) ಹಾಗೂ ಗುಡಾಕೇಶ್ ಮೋತಿ (32) ಜೊತೆಗೂಡಿ 26 ಎಸೆತಗಳಲ್ಲಿ 54 ರನ್ ಸಿಡಿಸಿದರು. ರೊಮಾರಿಯೋ ಶೆಫರ್ಡ್ (18) ತಂಡದ ಮೊತ್ತವನ್ನು ಹಿಗ್ಗಿಸಿದರು. ಲಂಕಾ ಪರ ಮಹೇಶ್ ತೀಕ್ಷಣ ಹಾಗೂ ವನಿಂದು ಹಸರಂಗ ತಲಾ ಎರಡು ವಿಕೆಟ್ ಕಬಳಿಸಿದರು.
ಮೊದಲ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ
ಗುರಿಯನ್ನು ಹಿಂಬಾಲಿಸಿದ ಲಂಕಾ ತಂಡದ ಆರಂಭಿಕರಾದ ಪತನು ನಿಸಂಕಾ ಹಾಗೂ ಕುಸಾಲ್ ಮೆಂಡಿಸ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 60 ರನ್ ಸೇರಿಸಿತು. ಪತನು 7 ಬೌಂಡರಿ, 1 ಸಿಕ್ಸರ್ ಸಹಾಯದಿಂದ 39 ರನ್ ಬಾರಿಸಿ ಔಟ್ ಆದರು.
ಎರಡನೇ ವಿಕೆಟ್‌ಗೆ ಕುಸಾಲ್ ಮೆಂಡಿಸ್ ಹಾಗೂ ಕುಸಾಲ್ ಪೆರೆರಾ ಜೊತೆಗೂಡಿ ತಂಡಕ್ಕೆ ಅಗತ್ಯ ರನ್ ಕಲೆ ಹಾಕಿ ಮಿಂಚಿದರು. ಈ ಜೋಡಿ 76 ಎಸೆತಗಳಲ್ಲಿ ಅಜೇಯ 106 ರನ್ ಸಿಡಿಸಿ ತಂಡಕ್ಕೆ ಆಧಾರವಾಯಿತು. ಕುಸಾಲ್ ಮೆಂಡೀಸ್ 5 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 68 ರನ್ ಸಿಡಿಸಿದರೆ, ಕುಸಾಲ್ ಪೆರೆರಾ 7 ಬೌಂಡರಿ ಸೇರಿದಂತೆ 55 ರನ್ ಬಾರಿಸಿ ಗೆಲುವಿನಲ್ಲಿ ಮಿಂಚಿದರು. ಮೂರನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಕುಸಾಲ್ ಮೆಂಡೀಸ್ ಮುಡಿಗೆ ಪಂದ್ಯ ಶ್ರೇಷ್ಠ ಹಾಗೂ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ ಪತನು ನಿಸಂಕಾ ಸರಣಿ ಶ್ರೇಷ್ಠ ಗರಿ ಸಂದಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications