ಆಸ್ಟ್ರೇಲಿಯಾ ಸದ್ಯ ಶ್ರೀಲಂಕಾ ಪ್ರವಾಸದಲ್ಲಿದೆ. ಈ ವೇಳೆ ಮೊದಲು ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಸರಣಿಯ ಮೊದಲ ಪಂದ್ಯ ಗಾಲೆಯಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟ್ ಮಾಡಲು ಮುಂದಾಗಿದೆ. ತಂಡಕ್ಕೆ ಆರಂಭಿಕರು ಉತ್ತಮ ಜೊತೆಯಾಟದ ಕಾಣಿಕೆ ನೀಡಿದ್ದರ ಫಲವಾಗಿ, ಉತ್ತಮ ಮೊತ್ತದತ್ತ ಪ್ರವಾಸಿ ತಂಡ ದೃಷ್ಟಿ ನೆಟ್ಟಿದೆ. ಇದೇ ವೇಳೆ ಭರವಸೆಯ ಬ್ಯಾಟರ್ ಸ್ಟೀವನ್ ಸ್ಮಿತ್ ದಾಖಲೆಯನ್ನು ಬರೆದಿದ್ದಾರೆ. ಮೊದಲ ಪಂದ್ಯದಲ್ಲಿ ಒಂದು ರನ್ ಬಾರಿಸುತ್ತಿದ್ದಂತೆ ಸ್ಮಿತ್ ದಾಖಲೆಯ ಒಡೆಯನಾಗಿದ್ದಾರೆ.
ಈ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಂಡ ಸ್ಮಿತ್, ವಿಶ್ವ ದಾಖಲೆಯನ್ನು ನಿರ್ಮಿಸಿದರು. ಮೂರನೇ ಕ್ರಮಾಂಕದ ಆಟಗಾರ ಮಾರ್ನಸ್ ಲಂಬುಶೇನ್ ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಬಂದ ಸ್ಮಿತ್, ಮೈದಾನಕ್ಕೆ ಇಳಿಯುತ್ತಿದ್ದಂತೆ ವಿಶ್ವ ದಾಖಲೆಯ ಕನಸು ಹೊಂದಿದ್ದರು. ಇನಿಂಗ್ಸ್‌ನ 31ನೇ ಓವರ್‌ನ್ನು ಪ್ರಭಾತ್ ಜಯಸೂರ್ಯ ಬೌಲ್ ಮಾಡಿದರು. ಚೆಂಡನ್ನು ಮಿಡ್ ಆನ್‌ನತ್ತ ತಳುತ್ತಲೇ ಸಿಂಗಲ್ ಪಡೆದರು.

ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಮಿತ್ ಖಾತೆ ಓಪನ್ ಮಾಡುತ್ತಿದ್ದಂತೆ, ವಿಶ್ವ ದಾಖಲೆ ಬರೆದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಮಿತ್ 10 ಸಾವಿರ ರನ್ ಗಡಿ ದಾಟಿದ ಹಿರಿಮೆ ತಮ್ಮದಾಗಿಸಿಕೊಂಡರು. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ 15ನೇ ಆಟಗಾರ ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಆಸೀಸ್‌ನ ನಾಲ್ಕನೇ ಬ್ಯಾಟರ್ ಎಂಬ ಹೆಗ್ಗಳಿಕೆ ಸಹ ಸ್ಮಿತ್ ಅವರದ್ದಾಗಿದೆ. ಆಸ್ಟ್ರೇಲಿಯಾ ಪರ ಅಲನ್ ಬಾರ್ಡರ್, ಸ್ಟೀವ್ ವಾ ಮತ್ತು ರಿಕಿ ಪಾಂಟಿಂಗ್ ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್‌ಗಳ ಗಡಿ ದಾಟಿದ್ದಾರೆ.
ಸಿಡ್ನಿಯಲ್ಲಿ ಭಾರತದ ವಿರುದ್ಧ ನಡೆದ ಕೊನೆಯ ಹಾಗೂ 5 ನೇ ಟೆಸ್ಟ್ ಪಂದ್ಯದಲ್ಲಿ 10,000 ಟೆಸ್ಟ್ ರನ್‌ಗಳ ಕ್ಲಬ್‌ಗೆ ಸೇರಲು ಅವರಿಗೆ ಉತ್ತಮ ಅವಕಾಶ ಸಿಕ್ಕಿತ್ತು ಆದರೆ ಅವರು ಅದನ್ನು ಒಂದು ರನ್‌ನಿಂದ ತಪ್ಪಿಸಿಕೊಂಡರು.

ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಸ್ಟೀವನ್ ಸ್ಮಿತ್, ಒಂದು ರನ್ ಬಾರಿಸುತ್ತಿದ್ದಂತೆ 10 ಸಾವಿರ ರನ್ ಬಾರಿಸಿ ದಾಖಲೆ ಬರೆದರು. ಅತಿ ಕಡಿಮೆ ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಇವರು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ದಾಖಲೆ ಅಳಿಸಿದ್ದಾರೆ. ಸಚಿನ್ 122 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ಸ್ಮಿತ್ ತಮ್ಮ 115ನೇ ಟೆಸ್ಟ್ ಪಂದ್ಯದಲ್ಲಿ 10,000 ರನ್ ಪೂರ್ಣಗೊಳಿಸಿದರು. ಈ ಮೂಲಕ ಶ್ರೀಲಂಕಾದ ಕುಮಾರ್ ಸಂಗಕ್ಕಾರ್ ಅವರ ದಾಖಲೆಯನ್ನು ಸರಿಗಟ್ಟಿದರು. ಅತಿ ಕಡಿಮೆ ಪಂದ್ಯಗಳಲ್ಲಿ 10,000 ರನ್ ಗಳಿಸಿದ ದಾಖಲೆ ಬ್ರಿಯಾನ್ ಲಾರಾ ಹೆಸರಿನಲ್ಲಿದ್ದು, ಇವರು111 ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಬ್ರಿಯಾನ್ ಲಾರಾ - 111 ಇನಿಂಗ್ಸ್
ಕುಮಾರ್ ಸಂಗಕ್ಕಾರ - 115 ಇನಿಂಗ್ಸ್
ಯೂನಿಸ್ ಖಾನ್ - 116 ಇನಿಂಗ್ಸ್
ರಿಕಿ ಪಾಂಟಿಂಗ್ - 118 ಇನಿಂಗ್ಸ್
ಜೋ ರೂಟ್ - 118 ಇನಿಂಗ್ಸ್
ರಾಹುಲ್ ದ್ರಾವಿಡ್ - 120 ಇನಿಂಗ್ಸ್
ಸಚಿನ್ ತೆಂಡೂಲ್ಕರ್ - 122 ಇನಿಂಗ್ಸ್