
ಮಯಾಂಕ್ ಅಗರ್ವಾಲ್ ಟೀಮ್ ಇಂಡಿಯಾದ ಆರಂಭಿಕ ಆಟಗಾರನಾಗಿ ಹಲವಾರು ಅತ್ಯುತ್ತಮ ಪ್ರದರ್ಶನಗಳನ್ನು ನೀಡಿರುವ ಪ್ರತಿಭೆ. ಹೆಚ್ಚಾಗಿ ಟೆಸ್ಟ್ ಪಂದ್ಯಗಳಲ್ಲಿ ಅವಕಾಶ ಗಿಟ್ಟಿಸಿಕೊಂಡು ಉತ್ತಮ ಪ್ರದರ್ಶನಗಳನ್ನು ನೀಡುತ್ತಾ ಬಂದಿರುವ ಮಯಾಂಕ್ ಅಗರ್ವಾಲ್ ಇತ್ತೀಚೆಗಷ್ಟೇ ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಪಂದ್ಯವೊಂದರಲ್ಲಿ ಆಕರ್ಷಕ 150 ರನ್ ಬಾರಿಸುವುದರ ಮೂಲಕ ಟೀಮ್ ಇಂಡಿಯಾ ಪರ ಆಪತ್ಬಾಂಧವನಾಗಿ ಪ್ರದರ್ಶನ ನೀಡಿದ್ದರು.
ಹೀಗೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಮಯಾಂಕ್ ಅಗರ್ವಾಲ್ ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಪ್ರಕಟವಾಗಿರುವ ಭಾರತ ತಂಡದ 18 ಆಟಗಾರರನ್ನೊಳಗೊಂಡ ಪಟ್ಟಿಯಲ್ಲಿಯೂ ಕೂಡ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಹೀಗೆ ಪ್ರಕಟವಾಗಿರುವ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಮಯಾಂಕ್ ಅಗರ್ವಾಲ್ ಸದ್ಯ ಮುಂಬೈನಲ್ಲಿ ಅಭ್ಯಾಸವನ್ನು ನಡೆಸುತ್ತಿದ್ದು ಶೀಘ್ರದಲ್ಲಿಯೇ ದಕ್ಷಿಣ ಆಫ್ರಿಕಾಕ್ಕೆ ಹಾರಲಿದ್ದಾರೆ.
ಇನ್ನು ಮಯಾಂಕ್ ಅಗರ್ವಾಲ್ ಭಾರತದ ಓರ್ವ ಕ್ರಿಕೆಟಿಗ ಎಂಬ ಕಾರಣಕ್ಕೆ ಕರ್ನಾಟಕದ ಜನತೆ ಇಷ್ಟಪಟ್ಟರೆ, ಕನ್ನಡಿಗ ಎಂಬ ಕಾರಣಕ್ಕೆ ಮತ್ತಷ್ಟು ಹೆಚ್ಚು ಇಷ್ಟಪಡುವುದು ವಾಸ್ತವ. ಹೀಗೆ ಕರ್ನಾಟಕದವರೇ ಆದ ಮಯಾಂಕ್ ಅಗರ್ವಾಲ್ ಬಗ್ಗೆ ಕನ್ನಡಿಗರಲ್ಲಿ ವಿಶೇಷವಾದ ಪ್ರೀತಿ ಮತ್ತು ಗೌರವವಿದ್ದರೆ, ಕರ್ನಾಟಕ ಮತ್ತು ಕನ್ನಡ ಭಾಷೆ ಎಂದರೆ ಮಯಾಂಕ್ ಅಗರ್ವಾಲ್ ಅವರಿಗೂ ಕೂಡ ಅಷ್ಟೇ ಗೌರವವಿದೆ. ಈ ಹಿಂದೆ ಹಲವಾರು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕೆಎಲ್ ರಾಹುಲ್ ಜೊತೆ ಮೈದಾನದಲ್ಲಿ ಕನ್ನಡದಲ್ಲಿಯೇ ಮಾತನಾಡುವ ಮೂಲಕ ಕನ್ನಡಿಗರ ಮನಗೆದ್ದಿದ್ದ ಮಯಾಂಕ್ ಅಗರ್ವಾಲ್ ಇದೀಗ ಮತ್ತೊಮ್ಮೆ ಕರ್ನಾಟಕದ ಜನತೆಯ ಹೃದಯವನ್ನು ಗೆದ್ದಿದ್ದಾರೆ.
ಹೌದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯವಾಗಿರುವ ಮಯಾಂಕ್ ಅಗರ್ವಾಲ್ ಇತ್ತೀಚೆಗಷ್ಟೇ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಅನುಯಾಯಿಗಳ ಜೊತೆ ಪ್ರಶ್ನೋತ್ತರ ಆಟವನ್ನು ಆಡಿದ್ದಾರೆ. ತಮ್ಮ ಅನುಯಾಯಿಗಳು ಕೇಳಿದ ಭಿನ್ನ ವಿಭಿನ್ನ ರೀತಿಯ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿದ ಮಯಾಂಕ್ ಅಗರ್ವಾಲ್ ತಮ್ಮ ನೆಚ್ಚಿನ ಕನ್ನಡ ನಟರು ಯಾರು ಎಂಬುದನ್ನು ಕೂಡ ಬಿಚ್ಚಿಟ್ಟಿದ್ದಾರೆ.
ಹೀಗೆ ಇನ್ಸ್ಟಾಗ್ರಾಂ ಪ್ರಶ್ನೋತ್ತರದಲ್ಲಿ ಅನುಯಾಯಿಯೊಬ್ಬರು ನಿಮಗೆ ಇಷ್ಟವಾಗುವ ಕನ್ನಡ ನಟ ಯಾರು ಎಂಬ ಪ್ರಶ್ನೆಯನ್ನು ಮಯಾಂಕ್ ಅಗರ್ವಾಲ್ ಅವರಿಗೆ ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರ ನೀಡಿರುವ ಮಯಾಂಕ್ ಅಗರ್ವಾಲ್ ಕಿಚ್ಚ ಸುದೀಪ್ ಮತ್ತು ಯಶ್ ಎಂದು ಬರೆದುಕೊಂಡಿದ್ದಾರೆ. ಮಯಾಂಕ್ ಅಗರ್ವಾಲ್ ಅವರು ಅಭಿಮಾನಿ ಕೇಳಿದ ಪ್ರಶ್ನೆಗೆ ಉತ್ತರ ನೀಡುವುದರ ಮೂಲಕ ಕಿಚ್ಚ ಸುದೀಪ್ ಮತ್ತು ಯಶ್ ತಮ್ಮ ನೆಚ್ಚಿನ ನಟರು ಎಂಬ ವಿಷಯವನ್ನು ಬಹಿರಂಗಪಡಿಸಿದ್ದು, ಸದ್ಯ ಕಿಚ್ಚ ಸುದೀಪ್ ಮತ್ತು ಯಶ್ ಅಭಿಮಾನಿಗಳು ಖ್ಯಾತ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ನಮ್ಮ ನೆಚ್ಚಿನ ಹೀರೋನ ಅಭಿಮಾನಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದರ ಮೂಲಕ ಖುಷಿ ಪಡುತ್ತಿದ್ದಾರೆ.
ಹಾಗೂ ಮತ್ತೋರ್ವ ಅನುಯಾಯಿ ರಜಿನಿಕಾಂತ್ ಅವರ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ಪ್ರಶ್ನೆಯನ್ನು ಕೇಳಿದ್ದು, ಈ ಪ್ರಶ್ನೆಗೆ ಉತ್ತರಿಸಿರುವ ಮಯಾಂಕ್ ಅಗರ್ವಾಲ್ ತಲೈವಾ ಎಂದು ಬರೆದುಕೊಂಡಿದ್ದಾರೆ.