ಭಾರತ ತಂಡದ ಆಟಗಾರ ಮತ್ತು ಐಪಿಎಲ್‌ನ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಕಳೆದ ಕೆಲವು ತಿಂಗಳುಗಳಿಂದ ಬ್ಯಾಟಿಂಗ್‌ನಲ್ಲಿ ಕಳಪೆ ಫಾರ್ಮ್‌ನಲ್ಲಿ ಆಡುತ್ತಿದ್ದು, ಅದು ಐಪಿಎಲ್‌ನಲ್ಲಿಯೂ ಮುಂದುವರೆದಿದೆ.
ಇತ್ತೀಚೆಗೆ ಕೆಎಲ್ ರಾಹುಲ್ ಅವರ ಮಾವ ಮತ್ತು ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಾತನಾಡಿ, ತಮ್ಮ ಕುಟುಂಬವು ಮನೆಯಲ್ಲಿ ಕ್ರಿಕೆಟ್ ಬಗ್ಗೆ ಚರ್ಚಿಸುವುದಿಲ್ಲ ಮತ್ತು ಆತನ ಮನಸ್ಸನ್ನು ಆಟದಿಂದ ಹೊರತರಲು ಪ್ರಯತ್ನಿಸುವುದಿಲ್ಲ ಎಂದು ಹೇಳಿದ್ದಾರೆ.

2023ರ ಜನವರಿಯಲ್ಲಿ ಖಾಸಗಿ ಸಮಾರಂಭದಲ್ಲಿ ಸುನೀಲ್ ಶೆಟ್ಟಿ ಮಗಳು ಅಥಿಯಾ ಶೆಟ್ಟಿ ಜೊತೆ ಕೆಎಲ್ ರಾಹುಲ್ ವಿವಾಹವಾಗಿದ್ದರು. ರಾಹುಲ್ ಕಳಪೆ ಬ್ಯಾಟಿಂಗ್ ಫಾರ್ಮ್ ಬಗ್ಗೆ ಮಾತನಾಡಿದ ಸುನೀಲ್ ಶೆಟ್ಟಿ, ಅವನು ಈಗಾಗಲೇ ರಾಷ್ಟ್ರೀಯ ತಂಡಕ್ಕಾಗಿ ಆಡುತ್ತಿರುವುದರಿಂದ ನಾನು ಕ್ರಿಕೆಟ್ ಕಲಿಸಲು ಸಾಧ್ಯವಿಲ್ಲ ಮತ್ತು ಆತ ಆಡುತ್ತಿರುವುದು ಗಲ್ಲಿ ಕ್ರಿಕೆಟ್ ಅಲ್ಲ ಎಂದು ತಿಳಿಸಿದರು.
"ನಾವು ಕೆಎಲ್ ರಾಹುಲ್ ವೈಫಲ್ಯದ ಬಗ್ಗೆ ಚರ್ಚಿಸುವುದಿಲ್ಲ ಏಕೆಂದರೆ, ಆತ ಇನ್ನೂ ಚಿಕ್ಕವನು ಮತ್ತು ಹೋರಾಟಗಾರ ಎಂದು ನಮಗೆಲ್ಲರಿಗೂ ತಿಳಿದಿದೆ. ನಾವು ಹೆಚ್ಚು ಪ್ರೀತಿಯನ್ನು ತೋರಿಸುತ್ತೇವೆ. ಪ್ರಪಂಚದ ಎಲ್ಲದರ ಬಗ್ಗೆ ನಾವು ಮಾತನಾಡುತ್ತೇವೆ ಮತ್ತು ಆತನ ಮನಸ್ಸನ್ನು ಕದಡಿಸಲು ಪ್ರಯತ್ನಿಸುವುದಿಲ್ಲ. ಕೆಎಲ್ ರಾಹುಲ್‌ಗೆ ಕ್ರಿಕೆಟ್ ಆಡುವುದನ್ನು ನಾನು ಕಲಿಸಿ ಕೊಡಬೇಕಾಗಿಲ್ಲ," ಎಂದು ಸುನೀಲ್ ಶೆಟ್ಟಿ ಅವರು ಆರ್‌ಜೆ ಸಿದ್ಧಾರ್ಥ್ ಕಣ್ಣನ್ ಜೊತೆ ಮಾತನಾಡುವಾಗ ಹೇಳಿದ್ದಾರೆ.

ಕೆಎಲ್ ರಾಹುಲ್ ಅವರು ಸದ್ಯ ಕಠಿಣ ಸಮಯವನ್ನು ಎದುರಿಸುತ್ತಿದ್ದಾರೆ. ಆದರೆ ಕಳಪೆ ಬ್ಯಾಟಿಂಗ್ ಬಗ್ಗೆ ಆತನ ಬಳಿ ಚರ್ಚಿಸುವುದಿಲ್ಲ ಎಂದು ಖಡಾಖಂಡಿತವಾಗಿ ಸುನೀಲ್ ಶೆಟ್ಟಿ ಉತ್ತರಿಸಿದರು.
"ಕೆಎಲ್ ರಾಹುಲ್ ಕಠಿಣ ಸಮಯ ಎದುರಿಸುವುದನ್ನು ನಾವು ನೋಡಬಹುದು. ಅಲ್ಲಿಂದ ಹೊರಬರಲು ಮತ್ತು ಕಷ್ಟಪಟ್ಟು ಕೆಲಸ ಮಾಡಲು ಆತ ಸಿದ್ಧನಿದ್ದಾನೆ. ಅದು ಚಿತ್ರತಂಡವಲ್ಲ, ಅವನು ಮೈದಾನಕ್ಕೆ ಹೋಗಬೇಕು, ಚೆಂಡನ್ನು ಎದುರಿಸಬೇಕು ಮತ್ತು ಆಡಬೇಕು. ಅವನು ಅದನ್ನು ಮಾಡುತ್ತಾನೆ ಮತ್ತು ಮುಂದುವರಿಸುತ್ತಾನೆ," ಎಂದು ಸುನೀಲ್ ಶೆಟ್ಟಿ ತಿಳಿಸಿದ್ದಾರೆ.
ಕಳಪೆ ಬ್ಯಾಟಿಂಗ್ ಫಾರ್ಮ್‌ನ ನಂತರ ಕೆಎಲ್ ರಾಹುಲ್ ಭಾರತೀಯ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡರು. ಮಾರ್ಚ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಬದಲಾಗಿ ಶುಭ್ಮನ್ ಗಿಲ್ ಆಡಿದರು.

ಕೆಎಲ್ ರಾಹುಲ್ 2022ರ ಟಿ20 ಪಂದ್ಯಗಳಲ್ಲಿ ಬ್ಯಾಟ್‌ನಿಂದ ಕಡಿಮೆ ರನ್‌ಗಳನ್ನು ಗಳಿಸಿದ್ದಾರೆ. ಆಡಿದ 16 ಇನ್ನಿಂಗ್ಸ್‌ಗಳಲ್ಲಿ 28.93 ಸರಾಸರಿಯಲ್ಲಿ ಮತ್ತು 126.53ರ ಸ್ಟ್ರೈಕ್‌ರೇಟ್‌ನಲ್ಲಿ 434 ರನ್ ಕಲೆಹಾಕಿದ್ದಾರೆ. ಗಮನಾರ್ಹ ಅಂಶವೆಂದರೆ, ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ತನ್ನ 2023ರ ಐಪಿಎಲ್ ಅಭಿಯಾನವನ್ನು ಉತ್ತಮವಾಗಿ ಆರಂಭಿಸಲಿಲ್ಲ. ಇದುವರೆಗೆ ಎರಡು ಪಂದ್ಯಗಳಿಂದ ಕೇವಲ 28 ರನ್ ಗಳಿಸಿದ್ದಾರೆ.
2018ರಿಂದ ಪ್ರತಿ ಐಪಿಎಲ್ ಆವೃತ್ತಿಯಲ್ಲೂ 500ಕ್ಕಿಂತ ಹೆಚ್ಚು ರನ್ ಬಾರಿಸಿರುವ 30 ವರ್ಷದ ಕೆಎಲ್ ರಾಹುಲ್, ಟಿ20 ಪಂದ್ಯಾವಳಿಯಲ್ಲಿ ಯಾವಾಗಲೂ ತಮ್ಮ ಅತ್ಯುನ್ನತ ಶ್ರೇಣಿ ಆಟವನ್ನು ಮುಂಚೂಣಿಗೆ ತರುತ್ತಾರೆ. ಲಕ್ನೋ ಫ್ರಾಂಚೈಸ್ ಕೂಡ ಬಾರಿಯ ಋತುವಿನಲ್ಲಿ ತಮ್ಮ ತಂಡದ ನಾಯಕನಿಂದ ಅದೇ ರೀತಿಯ ಪ್ರದರ್ಶನವನ್ನು ನಿರೀಕ್ಷಿಸುತ್ತಿದೆ.