ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಗೆ ಟೀಮ್ ಇಂಡಿಯಾ ಆಟಗಾರರನ್ನು ಆಯ್ಕೆ ಮಾಡಲಾಗಿದ್ದು ಶುಕ್ರವಾರ ತಂಡವನ್ನು ಪ್ರಕಟಿಸಲಾಯಿತು. ಈ ತಂಡಗಳಲ್ಲಿ ಸ್ಥಾನ ಪಡೆದಿರುವ ಹಾಗೂ ತಂಡದಿಂದ ಕೈಬಿಟ್ಟಿರುವ ಆಟಗಾರರ ವಿಚಾರವಾಗಿ ಸಾಕಷ್ಟು ಚರ್ಚೆಗಲು ನಡೆಯುತ್ತಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲಿ ಅವಕಾಶ ನೀಡದೆ ನಿರ್ಲಕ್ಷಿಸಿರುವ ಓರ್ವ ಆಟಗಾರನ ಪರವಾಗಿ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮಾತನಾಡಿದ್ದು ಆಯ್ಕೆ ಸಮಿತಿಯ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದಾರೆ.
ಮುಂದಿನ ತಿಂಗಳು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಮುಂಬೈನ ಆಟಗಾರ ಸರ್ಫರಾಜ್ ಖಾನ್ ಅವರನ್ನು ಕಡೆಗಣಿಸಲಾಗಿದೆ. ದೇಶೀಯ ಕ್ರಿಕೆಟ್‌ನಲ್ಲಿ ಸತತ ಎರಡು ವರ್ಷಗಳಿಂದ ಅದ್ಭುತವಾಗಿ ರನ್ ಮಳೆಹರಿಸುತ್ತಿರುವ ಸರ್ಫರಾಜ್ ಖಾನ್ ಅವರನ್ನು ಮತ್ತೊಂದು ಬಾರಿ ಆಯ್ಕೆಗೆ ಪರಿಗಣಿಸದಿರುವುದಕ್ಕೆ ಸುನಿಲ್ ಗವಾಸ್ಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಆಯ್ಕೆಯ ಮಾನದಂಡವನ್ನು ಕಟುವಾಗಿ ಖಂಡಿಸಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ಹಾಲಿ ಕಾಮೆಂಟೇಟರ್ ಆಗಿರುವ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ರಣಜಿ ಟ್ರೋಫಿ ಟೂರ್ನಿಯನ್ನು ಮುಂದುವರಿಸುವ ಅಗತ್ಯವನ್ನು ಪ್ರಶ್ನಿಸಿದ್ದಾರೆ. ಟೆಸ್ಟ್ ತಂಡದ ಆಯ್ಕೆಗೂ ಐಪಿಎಲ್‌ನಲ್ಲಿ ಆಡಿರುವ ಪ್ರದರ್ಶನವನ್ನು ಪರಿಗಣಿಸುವುದಾದರೆ ರಣಜಿ ಟ್ರೋಫಿ ಮುಂದುವರಿಸುವ ಅಗತ್ಯ ಕಂಡುಬರುತ್ತಿಲ್ಲ ಎಂದಿದ್ದಾರೆ ಗವಾಸ್ಕರ್. ಭಾರತ ಟೆಸ್ಟ್ ತಂಡಕ್ಕೆ ಸರ್ಫರಾಜ್ ಖಾನ್ ಅವರನ್ನು ಸೇರ್ಪಡೆಗೊಳಿಸಲು ಇದು ಅತ್ಯಂತ ಸೂಕ್ತವಾದ ಸಂದರ್ಭ ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ
"ಕಳೆದ ಮೂರು ರಣಜಿ ಆವೃತ್ತಿಗಳಲ್ಲಿ ಸರ್ಫರಾಜ್ ಖಾನ್ ನೂರರ ಸರಾಸರಿಯಲ್ಲಿ ರನ್ ಬಾರಿಸಿದ್ದಾರೆ. ಈಗ ಅವರು ತಂಡಕ್ಕೆ ಸೇರ್ಪಡೆಗೊಳಿಸಲು ಇನ್ನೇನು ಹೆಚ್ಚು ಮಾಡಲು ಸಾಧ್ಯವಿದೆ. ಆತನನ್ನು ಆಡುವ ಬಳಗದಲ್ಲಿ ಸೇರ್ಪಡೆಗೊಳಿಸದೆ ಇರಬಹುದು. ಆದರೆ ಆತನನ್ನು ತಂಡದಲ್ಲಿ ಆಯ್ಕೆ ಮಾಡಬೇಕಾಗಿತ್ತು" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್.
"ಈ ಮೂಲಕ ಆತ ರಣಜಿ ಟೂರ್ನಿಯಲ್ಲಿ ನೀಡಿರುವ ಪ್ರದರ್ಶನವನ್ನು ಪರಿಗಣಿಸಲಾಗಿದೆ ಎಂದು ಅರ್ಥೈಬಹುದಾಗಿತ್ತು. ಇಲ್ಲವಾದರೆ ರಣಜಿ ಟ್ರೋಫಿ ಆಡಿಸುವುದನ್ನು ನಿಲ್ಲಿಸಿಬಿಡಿ. ಕೇವಲ ಐಪಿಎಲ್‌ನಲ್ಲಿ ಆಡಿ ಅಲ್ಲಿ ಉತ್ತಮವಾದ ಪ್ರದರ್ಶನವನ್ನು ನೀಡಿದ ಕಾರಣಕ್ಕೆ ಟೆಸ್ಟ್ ತಂಡಕ್ಕೂ ಆಯ್ಕೆ ಮಾಡುವುದಾದರೆ ರಣಜಿ ಟೂರ್ನಿಯ ಉಪಯೋಗ ಏನೂ ಇರುವುದಿಲ್ಲ" ಎಂದು ಸುನಿಲ್ ಗವಾಸ್ಕರ್ ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ರಣಜಿ ಟೂರ್ನಿಯಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುವ ಸರ್ಫರಾಜ್ ಖಾನ್ 2022-23 ರ ರಣಜಿ ಟ್ರೋಫಿಯಲ್ಲಿ ಆಡು ಪಂದ್ಯಗಳನ್ನಾಡಿದ್ದು ಅದರಲ್ಲಿ ಮೂರು ಶತಕಗಳನ್ನು ಸೇರಿದಂತೆ 92.66 ರ ಸರಾಸರಿಯಲ್ಲಿ 556 ರನ್ ಗಳಿಸಿದರು. ಇನ್ನು ಅದಕ್ಕೂ ಹಿಂದಿನ ಬಲಗೈ ಬ್ಯಾಟರ್ 2021-22 ರಣಜಿ ಋತುವಿನಲ್ಲಿ 122.75 ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದ ಸರ್ಫರಾಜ್ ನಾಲ್ಕು ಶತಕಗಳು ಸೇರಿದಂತೆ 982 ರನ್ ಗಳಿಸಿದ್ದರು. ಸರ್ಫರಾಜ್ ಖಾನ್ ಈವರೆಗೆ 37 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ್ದು 13 ಶತಕ ಸೇರಿದಂತೆ 79.65 ಸರಾಸರಿಯಲ್ಲಿ 3505 ರನ್ ಗಳಿಸಿದ್ದಾರೆ.
ಟೀಮ್ ಇಂಡಿಯಾ ಟೆಸ್ಟ್ ತಂಡ ಹೀಗಿದೆ
ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯಾ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕತ್, ನವದೀಪ್ ಸೈನಿ.