ಆಸ್ಟ್ರೇಲಿಯಾ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಸೋಲನ್ನು ಎದುರಿಸಬೇಕಾಯಿತು. ಇದರೊಂದಿಗೆ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಈಗ 1-1ರಲ್ಲಿ ಸಮಬಲಗೊಂಡಿದೆ. ಪರ್ತ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿತ್ತು. ಪರ್ತ್ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದರು. ಆದರೆ, ಅಡಿಲೇಡ್ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ 7 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 11 ರನ್ ಗಳಿಸಿ ಔಟಾದರು.
ಅಡಿಲೇಡ್ ಟೆಸ್ಟ್ ಪಂದ್ಯದ ಸೋಲಿನ ಬಳಿಕ ಟೀಮ್ ಇಂಡಿಯಾ ತೀಕೆಗಳಿಗೆ ಗುರಿಯಾಗಿದೆ. ಆದರೆ, ವಿರಾಟ್ ಕೊಹ್ಲಿ ಅವರು ಮಾಜಿ ದಿಗ್ಗಜ ಬ್ಯಾಟರ್ ಸುನಿಲ್ ಗವಾಸ್ಕರ್ ಚಿತ್ತ ಕದ್ದಿದ್ದಾರೆ. ಅಡಿಲೇಡ್ ಟೆಸ್ಟ್‌ನಲ್ಲಿ ಮುಜುಗರದ ಸೋಲಿನ ನಂತರ ವಿರಾಟ್ ಕೊಹ್ಲಿ ತಕ್ಷಣ ಅಭ್ಯಾಸ ಆರಂಭಿಸಿದ್ದಾರೆ. ಪಂದ್ಯ ಮುಗಿದ ತಕ್ಷಣ ನೆಟ್‌ಗೆ ಮರಳಿದ ಕೊಹ್ಲಿ ವೇಗದ ಬೌಲರ್‌ಗಳ ಎಸೆತಗಳನ್ನು ಎದುರಿಸಿದ್ದಾರೆ. ಇದನ್ನು ತಿಳಿದ ಸುನಿಲ್ ಗವಾಸ್ಕರ್ ಅವರು ವಿರಾಟ್ ಕೊಹ್ಲಿ ಅವರನ್ನು ಹೊಗಳಿದ್ದಾರೆ. ಟೀಮ್ ಇಂಡಿಯಾದ ಇತರ ಆಟಗಾರರು ವಿರಾಟ್ ಕೊಹ್ಲಿಯಿಂದ ಕಲಿಯಬೇಕಾಗಿದೆ ಎಂದು ಹೇಳಿದ್ದಾರೆ.

ಇಂದು ನೆಟ್ಸ್‌ಗೆ ಹೋಗುವ ಮೂಲಕ ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ಮೇಲಿರುವ ತಮ್ಮ ಸಮರ್ಪಣಾ ಮನೋಭಾವವನ್ನು ತೋರಿಸಿದ್ದಾರೆ. ಆದರೆ ನಾನು ಎಲ್ಲರಿಂದ ಇದನ್ನು ನೋಡಲು ಬಯಸುತ್ತೇನೆ. ಅವರು ರನ್ ಗಳಿಸಿಲ್ಲ. ಆದರೆ ಭಾರತ ತಂಡಕ್ಕೆ ಅವರು ನೀಡಿರುವ ಕೊಡುಗೆ ಬಗ್ಗೆ ತುಂಬಾ ಹೆಮ್ಮೆಪಡುತ್ತಾರೆ. ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಅವರು ರನ್ ಗಳಿಸಿಲ್ಲ, ಆದ್ದರಿಂದ ಅವರು ನೆಟ್ಸ್‌ನಲ್ಲಿದ್ದಾರೆ ಎಂದು ಕೊಹ್ಲಿ ಬಗ್ಗೆ ಗವಾಸ್ಕರ್ ಗುಣಗಾನ ಮಾಡಿದ್ದಾರೆ.
ಅಡಿಲೇಡ್ ಟೆಸ್ಟ್ ಸೋಲಿನ ನಂತರ ತಮ್ಮ ಹೋಟೆಲ್ ಕೊಠಡಿಗಳಲ್ಲಿ ಸಮಯವನ್ನು ವ್ಯರ್ಥ ಮಾಡಬೇಡಿ. ಅಭ್ಯಾಸದಲ್ಲಿ ಬೆವರು ಹರಿಸುವ ಮೂಲಕ ಎರಡು ಹೆಚ್ಚುವರಿ ದಿನಗಳನ್ನು ಬಳಸಿಕೊಳ್ಳುವಂತೆ ಟೀಮ್ ಇಂಡಿಯಾಕ್ಕೆ ಸುನಿಲ್ ಗವಾಸ್ಕರ್ ಸಲಹೆ ನೀಡಿದ್ದಾರೆ.
'ಸರಣಿಯ ಉಳಿದ ಭಾಗವನ್ನು ಮೂರು ಪಂದ್ಯಗಳ ಟೆಸ್ಟ್ ಸರಣಿಯಾಗಿ ಪರಿಗಣಿಸಿ. ಇದು ಐದು ಟೆಸ್ಟ್‌ಗಳ ಸರಣಿ ಎಂಬುದನ್ನು ಮರೆತುಬಿಡಿ. ಮುಂದಿನ ಕೆಲವು ದಿನಗಳನ್ನು ಭಾರತ ತಂಡವು ಅಭ್ಯಾಸಕ್ಕಾಗಿ ಬಳಸಿಕೊಳ್ಳಬೇಕು. ಇದು ಬಹಳ ಮುಖ್ಯ. ನೀವು ಕ್ರಿಕೆಟ್ ಆಡಲು ಇಲ್ಲಿಗೆ ಬಂದಿರುವ ಕಾರಣ ನಿಮ್ಮ ಹೋಟೆಲ್ ಕೋಣೆಯಲ್ಲಿ ಅಥವಾ ನೀವು ಎಲ್ಲಿಗೆ ಹೋದರೂ ಕುಳಿತುಕೊಳ್ಳಲು ಸಾಧ್ಯವಿಲ್ಲ. ನೀವು ಇಡೀ ದಿನ ಅಭ್ಯಾಸ ಮಾಡುವ ಅಗತ್ಯವಿಲ್ಲ. ಬೆಳಿಗ್ಗೆ ಅಥವಾ ಮಧ್ಯಾಹ್ನ ನೀವು ಯಾವುದೇ ಸಮಯದಲ್ಲಿ ಅಭ್ಯಾಸ ಮಾಡಬಹುದು. ಆದರೆ ಈ ದಿನಗಳನ್ನು ವ್ಯರ್ಥ ಮಾಡಬೇಡಿ ಎಂದು ಗವಾಸ್ಕರ್ ಹೇಳಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಡಿಸೆಂಬರ್ 14ರಿಂದ ಆರಂಭವಾಗಲಿದೆ. ಈ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯಲಿದೆ. ಕಳೆದ ಬಾರಿ ಇದೇ ಮೈದಾನದಲ್ಲಿ ಟೀಮ್ ಇಂಡಿಯಾ ಐತಿಹಾಸಿಕ ಗೆಲುವು ಸಾಧಿಸಿತ್ತು.