ಟೀಮ್ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ ಕುತೂಹಲಕಾರಿ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ವಿಚಾರವಾಗಿ ಸುರೇಶ್ ರೈನಾ ಹಂಚಿಕೊಂಡಿರುವ ಈ ಮಾತು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸದಿರದು. ನೆಟ್ಸ್‌ನಲ್ಲಿ ಯಾರ ಬೌಲಿಂಗ್ ಎದುರಿಸುವುದು ಕಷ್ಟ ಎಂಬ ಪ್ರಶ್ನೆಗೆ ಸುರೇಶ್ ರೈನಾ ಮಾಜಿ ನಾಯಕ ಎಂಎಸ್ ಧೋನಿಯ ಹೆಸರು ಹೇಳಿ ಎಲ್ಲರನ್ನು ಹುಬ್ಬೇರುವಂತೆ ಮಾಡಿದ್ದಾರೆ. ಆದರೆ ರೈನಾ ಏ ಹೆಸರು ಹೇಳುವುದಕ್ಕೆ ನೀಡಿದ ಕಾರಣ ಕೇಳಿದರೆ ನೀವೂ ನಗೋದು ಖಂಡಿತಾ!
ಟೀಮ್ ಇಂಡಿಯಾದ ಮಾಜಿ ಆಲ್‌ರೌಂಡರ್ ಸುರೇಶ್ ರೈನಾ 2020ರಲ್ಲಿ ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಕೆಲವೇ ನಿಮಿಷಗಳ ಅಂತರದಲ್ಲಿ ನಿವೃತ್ತಿ ಹೇಳಿ ಅಚ್ಚರಿ ಮೂಡಿಸಿದ್ದರು. 15 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಒಟ್ಟು 18 ಟೆಸ್ಟ್, 226 ಏಕದಿನ ಮತ್ತು 78 ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಬ್ಯಾಟಿಂಗ್ ಬೌಲಿಂಗ್ ಹಾಗೂ ಫಿಲ್ಡಿಂಗ್‌ನಲ್ಲಿ ಅದ್ಭುತವಾಗಿ ತಂಡಕ್ಕೆ ಕೊಡುಗೆ ನೀಡುತ್ತಿದ್ದ ರೈನಾ 2011ರ ಏಕದಿನ ವಿಶ್ವಕಪ್ ಹಾಗೂ 2013ರ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿಯೂ ಕೊಡುಗೆ ನೀಡಿದ್ದಾರೆ.

ಸುರೇಶ್ ರೈನಾ ಭಾರತ ತಂಡದಲ್ಲಿ ಜಹೀರ್ ಖಾನ್ ಅವರಂಥಾ ಅನುಭವಿ ಆಟಗಾರನಿಂದ ಹಿಡಿದು, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ ಮಾತ್ರವಲ್ಲದೆ ಜಸ್ಪ್ರೀತ್ ಬೂಮ್ರಾ ಅವರೊಂದಿಗೂ ತಂಡದಲ್ಲಿ ಆಡಿದ್ದಾರೆ. ಈ ಎಲ್ಲರನ್ನೂ ನೆಟ್ಸ್‌ನಲ್ಲಿ ಎದುರಿಸಿದ್ದಾರೆ ಸುರೇಶ್ ರೈನಾ. ಆದರೆ ನೆಟ್ಸ್‌ನಲ್ಲಿ ಎದುರಿಸಲು ತನಗೆ ಕಠಿಣವಾದ ಬೌಲರ್ ಯಾರು ಎಂಬ ಪ್ರಶ್ನೆಗೆ ಈ ಯಾವ ಬೌಲರ್‌ಗಳನ್ನು ಕೂಡ ಹೆಸರಿಸದ ರೈನಾ ಧೋನಿ ಹೆಸರು ಹೇಳಿ ಅಚ್ಚರಿ ಮೂಡಿಸಿದ್ದಾರೆ.
ಟೀಮ್ ಇಂಡಿಯಾ ನಾಯಕನಾಗಿದ್ದ ಎಂಎಸ್ ಧೋನಿ ವಿಶ್ವಶ್ರೇಷ್ಠ ವಿಕೆಟ್ ಕೀಪರ್ ಎಂಬುದು ತಿಳಿದೇ ಇದೆ. ಆದರೆ ಧೋನಿ ಅತ್ಯಂತ ಅಪರೂಪಕ್ಕೆ ಒಮ್ಮೆ ಎಂಬಂತೆ ಬೌಲಿಂಗ್ ಕೂಡ ನಡೆಸಿದ್ದಾರೆ. ಹಾಗಾಗಿ ನೆಟ್ಸ್‌ನಲ್ಲಿ ಕೂಡ ಧೋನಿ ಬ್ಯಾಟರ್‌ಗಳಿಗೆ ಬೌಲಿಂಗ್ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಧೋನಿಗೆ ವಿಕೆಟ್ ಒಪ್ಪಿಸಿದರೆ ಅದೆಷ್ಟು ಕಾಡಿಸುತ್ತಿದ್ದರು ಎಂಬುದನ್ನು ವಿವರಿಸುತ್ತಾ ಸುರೇಶ್ ರೈನಾ ಈ ಮಾತನ್ನು ಹೇಳಿದ್ದಾರೆ.
"ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮುತ್ತಯ್ಯ ಮುರಳೀಧರನ್ ಹಾಗೂ ಮಲಿಂಗಾ ಅವರನ್ನು ಎದುರಿಸುವುದು ಕಷ್ಟ. ಆದರೆ ನೆಟ್ಸ್‌ನಲ್ಲಿ ಎದುರಿಸಲು ಕಠಿಣವಾದ ಬೌಲರ್ ಎಂದರೆ ಅದು ಎಂಎಸ್ ಧೋನಿ. ನೀವೇನಾದರೂ ಅವರ ಎಸೆತದಲ್ಲಿ ಭಟಾದರೆ ಮುಂದಿನ ಒಂದೂವರೆ ತಿಂಗಳ ಕಾಲ ಆತನ ಪಕ್ಕದಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ ಪದೇ ಪದೇ ಆತ ನೀವು ಹೇಗೆ ಔಟಾದಿರಿ ಎಂದು ನೆನಪಿಸುತ್ತಲೇ ಇರುತ್ತಾರೆ"
"ಆತ ಆಫ್ ಸ್ಪಿನ್, ಮೀಡಿಯಮ್ ಪೇಸ್, ಲೆಗ್ ಸ್ಪಿನ್ ಎಲ್ಲವನ್ನೂ ನೆಟ್ಸ್‌ನಲ್ಲಿ ಬೌಲಿಂಗ್ ಮಾಡುತ್ತಾರೆ. ಇನ್ನು ಈ ಸಂದರ್ಭದಲ್ಲಿ ಫ್ರಂಟ್ ಫೂಟ್ ನೋ ಬಾಲ್ ಮಾಡಿದರೆ ಅದನ್ನು ಕೂಡ ಒಪ್ಪಿಕೊಳ್ಳುವುದಿಲ್ಲ. ಟೆಸ್ಟ್‌ನಲ್ಲಿ ಯಾವಾಗೆಲ್ಲಾ ರೆಡ್ ಚೆರ್ರಿ ಸಿಗುತ್ತದೋ ಆಗೆಲ್ಲಾ ಬೌಲಿಂಗ್‌ಗೆ ಅತನೇ ಮುಂದಾಗುತ್ತಾರೆ. ಇಂಗ್ಲೆಂಡ್‌ನಲ್ಲಿ ಸಂಪೂರ್ಣವಾಗಿ ಸ್ವಿಂಗ್ ಮಾಡಿ ಬೌಲಿಂಗ್ ಮಾಡುತ್ತಿದ್ದರು" ಎಂದಿದ್ದಾರೆ ಸುರೇಶ್ ರೈನಾ.
ಎಂಎಸ್ ಧೋನಿ ಮೂಲತಃ ವಿಕೆಟ್ ಕೀಪರ್ ಆಗಿದ್ದರೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿಯೂ ಕೆಲ ಸಂದರ್ಭಗಳಲ್ಲಿ ಬೌಲಿಂಗ್ ನಡೆಸಿದ್ದಾರೆ. ಟೆಸ್ಟ್ ಹಾಗೂ ಏಕದಿನ ಮಾದರಿಯಲ್ಲಿ ಎಂಎಸ್ ಧೋಈನಿ ಬೌಲಿಂಗ್ ನಡೆಸಿದ್ದು ಏಕದಿನ ಕ್ರಿಕೆಟ್‌ನಲ್ಲಿ ಒಂದು ವಿಕೆಟ್ ಕೂಡ ತಮ್ಮದಾಗಿಸಿಕೊಂಡಿದ್ದಾರೆ. 2009ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಧೋನಿ ವೆಸ್ಟ್ ಇಂಡೀಸ್ ವಿರುದ್ಧ ಆಡಿದಾಗ ಬೌಲಿಂಗ್ ನಡೆಸಿದ್ದು ಟ್ರೆವಿಸ್ ಡೌವ್ಲಿನ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ತಮ್ಮ ಏಕೈಕ ವಿಕೆಟ್ ಪಡೆದುಕೊಂಡಿದ್ದರು.