ಟಿ20 ಮಾದರಿಯ ನಂಬರ್ 1 ಬ್ಯಾಟರ್ ಎನಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ವೆಸ್ಟ್ ಇಂಡಿಸ್ ವಿರುದ್ಧದ ಮೂರನೇ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದದು ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದಾರೆ. ಆದರೆ ಈ ಸ್ಪೋಟಕ ಆಟಗಾರನ ಪ್ರದರ್ಶನ ಚುಟುಕು ಮಾದರಿಗೆ ಮಾತ್ರವೇ ಸೀಮಿತವಾಗಿದೆ. ಏಕದಿನ ಮಾದರಿಯಲ್ಲಿ ಸಾಕಷ್ಟು ಅವಕಾಶ ದೊರೆತರೂ ಸೂರ್ಯಕುಮಾರ್ ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ಸತತವಾಗಿ ವಿಫಲವಾಗಿದ್ದಾರೆ. ಹೀಗಾಗಿ ಏಕದಿನ ವಿಶ್ವಕಪ್ ಸನಿಹದಲ್ಲಿದ್ದರೂ ಏಕದಿನ ತಂಡದಲ್ಲಿ ಸೂರ್ಯಕುಮಾರ್ ಸ್ಥಾನ ಭದ್ರವಾಗಿಲ್ಲ.
ಚುಟುಕು ಮಾದರಿಯಲ್ಲಿ ಸ್ಥಿರವಾಗಿ ರನ್‌ಮಳೆ ಹರಿಸುತ್ತಿರುವ ಸೂರ್ಯಕುಮಾರ್ ಯಾದವ್ 26 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿದ್ದು ಗಳಿಸಿದ್ದು 511 ರನ್ ಮಾತ್ರ. ಅಂದರೆ ಅವರ ಸರಾಸರಿ ಕೇವಲ 24.33. ಏಕದಿನ ಮಾದರಿಯಲ್ಲಿ ಎರಡು ಅರ್ಧ ಶತಿಕ ಸಿಡಿಸಿರುವ ಸೂರ್ಯ 101.38ರ ಸ್ಟ್ರೈಕ್‌ರೇಟ್ ಹೊಂದಿದ್ದಾರೆ.

2022ರಲ್ಲಿ ಟಿ20 ವಿಶ್ವಕಪ್ ಅಭುಯಾನದ ಬಳಿಕ ಅದೇ ವರ್ಷ ನವೆಂಬನಲ್ಲಿ ಭಾರತದ ನ್ಯೂಜಿಲೆಂಡ್ ಪ್ರವಾಸದ ನಂತರ ಮುಂಬೈ ಮೂಲದ ಬ್ಯಾಟರ್ ಸತತವಾಗಿ ಏಕದಿನ ಮಾದರಿಯಲ್ಲಿ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಆದರೆ ಸೂರ್ಯಕುಮಾರ್ ಯಾದವ್ ಟಿ20 ಮಾದರಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದರೂ ಏಕದಿನ ಮಾದರಿಯಲ್ಲಿ ಸತತವಾಗಿ ವೈಫಲ್ಯ ಅನುಭವಿಸಿಕೊಂಡು ಬರುತ್ತಿರುವುದು ಅಚ್ಚರಿ ಮೂಡಿಸಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ಬಳಿಕ ಸ್ವತಃ ಸೂರ್ಯಕುಮಾರ್ ಯಾದವ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಏಕದಿನ ಮಾದರಿಯಲ್ಲಿ ತನ್ನ ಪ್ರದರ್ಶನ ಕಳಪೆಯಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ರೋಹಿತ್ ಶರ್ಮಾ ಏಕದಿನ ಮಾದರಿಯಲ್ಲಿ ಹೆಚ್ಚು ಆಡುವಂತೆ ಸಲಹೆ ನೀಡಿದ್ದಾರೆ ಎಂದಿದ್ದಾರೆ.
"ನನ್ನ ಏಕದಿನ ಮಾದರಿಯ ದಾಖಲೆ ಬಹಳ ಕಳಪೆಯಾಗಿದೆ. ಅದನ್ನು ಒಪ್ಪಿಕೊಳ್ಳುವುದಕ್ಕೆ ನನಗೆ ಯಾವುದೇ ಮುಜುಗರವಿಲ್ಲ. ಇಲ್ಲಿ ಪ್ರಾಮಾಣಿಕವಾಗಿರುವುದು ಬಹಳ ಮುಖ್ಯ ಯಾಕೆಂದರೆ ಎಲ್ಲರಿಗೂ ಇದ ತಿಳಿದಿದೆ ಮತ್ತು ಎಲ್ಲರೂ ಪ್ರಾಮಾಣಿಕತೆಯ ಬಗ್ಗೆಯೇ ಮಾತನಾಡುತ್ತಾರೆ" ಎಂದಿದ್ದಾರೆ ಸೂರ್ಯಕುಮಾರ್ ಯಾದವ್.
"ನಿಮ್ಮ ಪ್ರದರ್ಶನದ ಬಗ್ಗೆ ಪ್ರಾಮಾಣಿಕವಾಗಿರುವುದು ಬಹಳ ಮುಖ್ಯ. ಇಲ್ಲಿ ಬಹಳ ಪ್ರಮುಖವಾಗುವುದೇನೆಂದರೆ ನೀವು ಹೇಗೆ ಬೆಳವಣಿಗೆ ಸಾಧಿಸುತ್ತೀರಿ ಎಂಬುದು. ರೋಹಿತ್ ಮತ್ತು ರಾಹುಲ್ ಸರ್ ಹೇಳಖಿರುವುದೇನೆಂದರೆ ಈ ಮಾದರಿಯಲ್ಲಿ ನೀನು ಹೆಚ್ಚಾಗಿ ಆಡಿಲ್ಲ. ಇಲ್ಲಿ ಹೆಚ್ಚು ಆಟವನ್ನಾಡಿ ಅದರ ಬಗ್ಗೆ ಯೋಚಿಸಬೇಕು" ಎಂದಿದ್ದಾರೆ ಸೂರ್ಯಕುಮಾರ್ ಯಾದವ್.
"ನೀವು ಕೊನೆಯ 10-15 ಓವರ್‌ಗಳನ್ನು ಆಡಿದರೆ ತಂಡಕ್ಕೆ ಯಾವ ರೀತಿಯ ಕೊಡುಗೆ ನೀಡಬಹುದು ಎಂಬುದನ್ನು ಆಲೋಚಿಸು. ನಾವೆಲ್ಲಾ ನಿನ್ನಿಂದ ಬಯಸುತ್ತಿರುವುದು ನಿನಗೆ ದೊರೆಯುವ 15-18 ಓವರ್‌ಗಳಲ್ಲಿ 40-45 ಎಸೆತಗಳನ್ನು ನೀನು ಎದುರಿಸು. ಅಲ್ಲಿ ನಿನ್ನ ಆಟವನ್ನು ನೀನು ಆಡಬೇಕು ಎನ್ನುವುದನ್ನು ಅವರು ಹೇಳಿದ್ದಾರೆ. ಈಗ ನನ್ನ ಕೈಯಲ್ಲಿರುವುದು ಏನೆಂದರೆ ನನಗೆ ದೊರೆತ ಜವಾಬ್ಧಾರಿಯನ್ನು ಅವಕಾಶವನ್ನಾಗಿ ಹೇಗೆ ಬಳಸಿಕೊಳ್ಳಬೇಕು ಎನ್ನುವುದಾಗಿದೆ" ಎಂದಿದ್ದಾರೆ ಸೂರ್ಯಕುಮಾರ್ ಯಾದವ್.