Suryakumar Yadav: ನಿಕೋಲಸ್ ಪೂರನ್ ದಾಖಲೆ ಅಳಿಸಿದ ಸೂರ್ಯಕುಮಾರ್ ಯಾದವ್
ಟೀಮ್ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಟಿ20 ಪಂದ್ಯ ಡರ್ಬನ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡ 61 ರನ್‌ಗಳಿಂದ ಜಯ ಸಾಧಿಸಿದೆ. ಈ ಮೂಲಕ 4 ಪಂದ್ಯಗಳ ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಪಡೆ 1-0 ಮುನ್ನಡೆ ಸಾಧಿಸಿದೆ. ಮೊದಲ ಪಂದ್ತದಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ಸ್ಕೈ ದಾಖಲೆಯೊಂದನ್ನು ಬರೆದಿದ್ದಾರೆ. ಹರಿಣಗಳ ವಿರುದ್ಧ ಚುಟುಕು ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ಬಿಗ್ ಇನಿಂಗ್ಸ್ ಕಟ್ಟದೇ ಇದ್ದರೂ ದಾಖಲೆ ಬರೆದಿದ್ದಾರೆ.
ಡರ್ಬನ್‌ನಲ್ಲಿ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಶತಕ ಬಾರಿಸಿ ಅಬ್ಬರಿಸಿದ್ದಾರೆ. ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ 17 ಎಸೆತಗಳಲ್ಲಿ 21 ರನ್ ಬಾರಿಸಿದ್ದಾರೆ. ಇದರಲ್ಲಿ 2 ಬೌಂಡರಿ, 1 ಸಿಕ್ಸರ್ ಸೇರಿವೆ. ಈ ಮೂಲಕ ಸೂರ್ಯಕುಮಾರ್, ವೆಸ್ಟ್ ಇಂಡೀಸ್‌ನ ನಿಕೋಲಸ್ ಪೂರನ್ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

ನಿಕೋಲಸ್ ದಾಖಲೆ ಉಡೀಸ್
ಪಂದ್ಯದ ನಾಲ್ಕನೇ ಓವರ್ ಮಾಡಿದ ಜೆರಾಲ್ಡ್ ಕೊಯೆಟ್ಜಿ ಅವರಿಗೆ ಸೂರ್ಯ ದಂಡಿಸಿದರು. ಇವರ ಈ ಓವರ್‌ನ ಆರನೇ ಎಸೆತದಲ್ಲಿ ಸ್ಕೈ ಫೈನ್ ಲೆಗ್ ಮೇಲೆ ಸಿಕ್ಸರ್ ಬಾರಿಸಿದರು. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದ ನಾಯಕ ಸೂರ್ಯ ಹಾಗೂ ವಿಂಡೀಸ್ ನಿಕೋಲಸ್ ಪೂರನ್ ಇಬ್ಬರೂ 144 ಸಿಕ್ಸರ್ ಬಾರಿಸುವ ಮೂಲಕ ಜಂಟಿ ಮೂರನೇ ಸ್ಥಾನದಲ್ಲಿದ್ದರು.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಒಂದು ಸಿಕ್ಸರ್ ಬಾರಿಸುತ್ತಿದ್ದಂತೆ ಸೂರ್ಯ, ನಿಕೋಲಸ್ ದಾಖಲೆ ಅಳಿಸಿದರು. ಅಲ್ಲದೆ ಚುಟುಕು ಕ್ರಿಕೆಟ್ 145 ಸಿಕ್ಸರ್ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಂಡರು.
ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ದಾಖಲೆ ಬಾರಿಸಿದ ಕೀರ್ತಿ ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಹೆಸರಿನಲ್ಲಿದೆ. ರೋಹಿತ್ 159 ಪಂದ್ಯಗಳ 151 ಇನಿಂಗ್ಸ್‌ಗಳಲ್ಲಿ 205 ಸಿಕ್ಸರ್ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ನ್ಯೂಜಿಲೆಂಡ್ ತಂಡದ ಮಾರ್ಟಿನ್ ಗುಪ್ಟಿಲ್ 173 ಸಿಕ್ಸರ್ ಬಾರಿಸಿದ್ದಾರೆ.

ಸತತ 11ನೇ ಗೆಲುವು
ಮೊದಲ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ, ಸಂಜು ಸ್ಯಾಮ್ಸನ್ ಅವರ ಅಮೋಘ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 202 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಡಿದ ದಕ್ಷಿಣ ಆಫ್ರಿಕಾ 17.5 ಓವರ್‌ಗಳಲ್ಲಿ 141 ರನ್‌ಗಳಿಗೆ ಆಲೌಟ್ ಆಯಿತು. ಟೀಮ್ ಇಂಡಿಯಾ ಪರ ವರುಣ್ ಚಕ್ರವರ್ತಿ, ರವಿ ಬಿಷ್ಣೋಯಿ ತಲಾ ಮೂರು ವಿಕೆಟ್ ಪಡೆದರು. ಯುವ ವೇಗಿ ಆವೇಶ್ ಖಾನ್ ಎರಡು ವಿಕೆಟ್ ಕಬಳಿಸಿದರು. ಇದು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಸತತ 11ನೇ ಜಯವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications